Justice R Devdas, Karnataka High Court
Justice R Devdas, Karnataka High Court 
ಸುದ್ದಿಗಳು

ವಿದ್ಯಾರ್ಥಿಗಳ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, 12 ಪರೀಕ್ಷೆ ಬರೆವಂತೆ ಅವರನ್ನು ಒತ್ತಾಯಿಸಲಾಗದು: ಕರ್ನಾಟಕ ಹೈಕೋರ್ಟ್‌

Bar & Bench

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು (ಕೆಎಸ್‌ಎಲ್‌ಯು) ವಿದ್ಯಾರ್ಥಿಗಳ ಪರಿಸ್ಥಿತಿಯ ಬಗ್ಗೆ ಸಹಾನುಭೂತಿ ಹೊಂದಬೇಕು ಎಂದಿರುವ ಕರ್ನಾಟಕ ಹೈಕೋರ್ಟ್‌ ಹನ್ನೆರಡು ವಿಷಯಗಳನ್ನು ಅಭ್ಯಸಿಸುವಂತೆ ವಿದ್ಯಾರ್ಥಿಗಳನ್ನು ಒತ್ತಾಯ ಮಾಡಲಾಗದು ಎಂದು ಹೇಳಿದೆ.

“ವಿದ್ಯಾರ್ಥಿಗಳ ಪರಿಸ್ಥಿಯನ್ನು ಅರ್ಥ ಮಾಡಿಕೊಳ್ಳಿ. 12 ವಿಷಯಗಳನ್ನು ಅಭ್ಯಸಿಸುವಂತೆ ಅವರನ್ನು ಬಲವಂತ ಮಾಡಲಾಗದು. ಇದು ಸರಿಯಲ್ಲ” ಎಂದು ನ್ಯಾಯಮೂರ್ತಿ ಆರ್‌ ದೇವದಾಸ್‌ ಹೇಳಿದ್ದಾರೆ. ಮುಂದುವರೆದು, “ಈಗ ನೀವು ಪರೀಕ್ಷೆ ನಡೆಸಬಹುದು. ಆದರೆ, 12 ವಿಷಯಗಳ ಪರೀಕ್ಷೆಗಳನ್ನು ಒಟ್ಟಿಗೆ ಬರೆಯುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗದು” ಎಂದು ನ್ಯಾಯಾಲಯ ಇತ್ತೀಚೆಗೆ ಹೇಳಿದೆ.

ಪ್ರಸಕ್ತ ವರ್ಷದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಇಂಟರ್‌ಮೀಡಿಯೆಟ್‌ ಸೆಮಿಸ್ಟರ್‌ಗಳ ಕಾನೂನು ವಿದ್ಯಾರ್ಥಿಗಳಿಗೆ ಸೆಮಿಸ್ಟರ್‌ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಸಾಂಕ್ರಾಮಿಕತೆಯ ನಡುವೆ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳು ಹಾಗೂ ಆಂತರಿಕ ಮೌಲ್ಯಮಾಪವವನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಗ್ರೇಡಿಂಗ್‌ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

“ವಿದ್ಯಾರ್ಥಿಗಳನ್ನು ಇಂಥ ಕಠಿಣ ಸಂದರ್ಭಕ್ಕೆ ಸಿಲುಕಿಸಬಾರದು ಎಂದು ಯುಜಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ” ಎಂದು ಪೀಠವು ವಿಚಾರಣೆ ವೇಳೆ ಹೇಳಿತು. ಎರಡು ಅಂತಿಮ ಸೆಮಿಸ್ಟರ್‌ಗಳನ್ನು ನಡೆಸದಂತೆ ತಡೆಯಲು ಯಾವುದೇ ನಿಬಂಧನೆಯಲ್ಲಿ ಉಲ್ಲೇಖಿಸಲಾಗಿಲ್ಲ. ಅಲ್ಲದೇ ಭೌತಿಕವಾಗಿ ಪರೀಕ್ಷೆ ನಡೆಸುವುದಕ್ಕೆ ಯಾವುದೇ ತೆರನಾದ ಕಾನೂನಿನ ತೊಡಕುಗಳಿಲ್ಲ ಎಂದು ಬಿಸಿಐ ಪರ ವಕೀಲ ಶ್ರೀಧರ್‌ ಪ್ರಭು ಮಂಗಳವಾರ ಸಮರ್ಥಿಸಿಕೊಂಡಿದ್ದರು.

ಇಂಟರ್‌ಮೀಡಿಯೇಟ್‌ ಸೆಮಿಸ್ಟರ್‌ಗಳ ಪರೀಕ್ಷೆಗಳನ್ನು ಕಾನೂನು ವಿದ್ಯಾರ್ಥಿಗಳಿಗೆ ನಡೆಸುವ ಅಗತ್ಯವೇನು ಎಂದು ನ್ಯಾಯಾಲಯ ಪ್ರಶ್ನಿಸಿತು. “ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ವಿಚಾರದಲ್ಲೂ ಹಿಂದಿನ ಸೆಮಿಸ್ಟರ್‌ನಲ್ಲಿ ಪಡೆದ ಅಂಕಗಳು ಮತ್ತು ಆಂತರಿಕ ಅಂಕಗಳನ್ನು ಆಧರಿಸಿ ಮೌಲ್ಯಮಾಪನ ಮಾಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ,” ಎಂದು ನ್ಯಾಯಾಲಯ ಹೇಳಿತು.

ವಕೀಲರ ಪರಿಷತ್ತಿನ ನಿಯಮಗಳ ಅನುಸಾರ ಕಡ್ಡಾಯವಾಗಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗದೇ ಇದ್ದರೆ ಅವರಿಗೆ ಪದವಿ ನೀಡಲಾಗದು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ಪ್ರಭು ವಾದಿಸಿದರು. ವಾರ್ಷಿಕ ಪರೀಕ್ಷೆಗೆ ಬದಲಾಗಿ ವಿಶ್ವವಿದ್ಯಾಲಯಗಳು ಸೆಮಿಸ್ಟೆರ್‌ ನೀತಿ ಅಳವಡಿಸಿಕೊಂಡಿವೆ. ಹೀಗಾಗಿ ಸೆಮಿಸ್ಟರ್‌ ಪರೀಕ್ಷೆ ನಡೆಸಬೇಕಿದ್ದು, ನಿರ್ದಿಷ್ಟ ವಿಷಯಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣವಾಗಬೇಕಿದೆ ಎಂದು ಪ್ರಭು ಹೇಳಿದರು.

ಇಂಟರ್‌ಮೀಡಿಯೇಟ್‌ ಪರೀಕ್ಷೆಗಳನ್ನು ನಡೆಸುವ ಕೆಎಸ್‌ಎಲ್‌ಯು ನಿರ್ಧಾರವು ಯುಜಿಸಿ ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ ಎಂದು ನಿನ್ನೆ ಅರ್ಜಿದಾರರ ಪರ ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಮತ್ತು ವಕೀಲ ಅಭಿಷೇಕ್‌ ಜನಾರ್ದನ್‌ ವಾದಿಸಿದರು. ಸಾರ್ವಜನಿಕ ಆರೋಗ್ಯ ವಿಚಾರವು ಬಿಸಿಐ ಮತ್ತು ಕೆಎಸ್‌ಎಲ್‌ಯು ವ್ಯಾಪ್ತಿಗೆ ಬಾರದೇ ಇರುವುದರಿಂದ ಅವುಗಳು ಸುತ್ತೋಲೆ/ನಿರ್ದೇಶನಗಳನ್ನು ನೀಡಲಾಗದು ಎಂದು ಹೇಳಿದರು.

ಯುಜಿಸಿ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಕಡ್ಡಾಯವಾಗಿದ್ದು, ಅವುಗಳನ್ನು ಜಾರಿಗೊಳಿಸುವುದು ವಿಶ್ವವಿದ್ಯಾಲಯಗಳ ಶಾಸನಬದ್ಧ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಪ್ರಣೀತ್‌ ಕೆ ವರ್ಸಸ್‌ ಯುಜಿಸಿ ಪ್ರಕರಣದಲ್ಲಿ ನೀಡಿದ್ದ ಆದೇಶವನ್ನು ಆಧರಿಸಿ ಮೇಲಿನಂತೆ ಹೇಳಿದರು. ಸಲಹೆ ಎಂದು ಯುಜಿಸಿ ಮಾರ್ಗಸೂಚಿಯನ್ನು ಕಡೆಗಡಿಸಲಾಗದು ಎಂದೂ ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ಧಾರವು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆಯೇ ವಿನಾ ಅದು ಇಂಟರ್‌ಮೀಡಿಯೆಟ್‌ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಅನ್ವಯಿಸದು ಎಂದು ಪ್ರಭು ಅವರು ಪ್ರತಿವಾದ ಮಂಡಿಸಿದರು.