ಕಂಗನಾ ರನೌತ್, ಬಾಂಬೆ ಹೈಕೋರ್ಟ್  
ಸುದ್ದಿಗಳು

ಅರ್ಧ ಕೆಡವಿದ ಸ್ಥಿತಿಯಲ್ಲಿ ಬಂಗಲೆ ಬಿಡಲು ಸಾಧ್ಯವಿಲ್ಲ: ನಾಳೆ ಕಂಗನಾ ಅರ್ಜಿ ಕೈಗೆತ್ತಿಕೊಳ್ಳಲಿರುವ ಬಾಂಬೆ ಹೈಕೋರ್ಟ್

ಶಿವಸೇನಾ ವಕ್ತಾರ ಸಂಜಯ್ ರಾವತ್ ಮತ್ತು ಕಂಗನಾ ಬಂಗಲೆ ಉರುಳಿಸಲು ಆದೇಶ ನೀಡಿದ ಬಿಎಂಸಿ ಅಧಿಕಾರಿಗಳನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸಿಕೊಂಡಿರುವ ಬಾಂಬೆ ಹೈಕೋರ್ಟ್ ಗುರುವಾರ ಬೆಳಿಗ್ಗೆ ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿತು.

Bar & Bench

ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತನ್ನ ಬಂಗಲೆ ತೆರವುಗೊಳಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಟಿ ಕಂಗನಾ ರನೌತ್ ಅವರ ವಾದ ಆಲಿಸುವುದಾಗಿ ಬಾಂಬೆ ಹೈಕೋರ್ಟ್ ಹೇಳಿದೆ.

ಕೋರ್ಟ್ ಸೆ.10ರಂದು ತನ್ನ ಮೊದಲ ವಿಚಾರಣೆ ಆರಂಭಿಸುವ ಹೊತ್ತಿಗೆ ಬಂಗಲೆಯ ಶೇ 40ರಷ್ಟು ಭಾಗವನ್ನು ಕೆಡವಲಾಗಿತ್ತು ಎಂದು ಗುರುವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು.

ಕಂಗನಾ ವಿರುದ್ಧ ಟೀಕಾತ್ಮಕ ಹೇಳಿಕೆ ನೀಡಿದ ಶಿವಸೇನಾ ವಕ್ತಾರ ಸಂಜಯ್ ರಾವತ್ ಮತ್ತು ಬಂಗಲೆ ಕೆಡವಲು ಆದೇಶ ನೀಡಿದ ಬಿಎಂಸಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಕೂಡ ಪ್ರಕರಣದಲ್ಲಿ ಪಕ್ಷಕಾರರನ್ನಾಗಿ ಸೇರಿಸಿಕೊಳ್ಳಲಾಗಿದೆ. ಗುರುವಾರ ಬೆಳಿಗ್ಗೆ ನ್ಯಾಯಮೂರ್ತಿಗಳಾದ ಎಸ್.ಜೆ. ಕಥಾವಲ್ಲಾ ಮತ್ತು ಆರ್.ಐ.ಚಾಗ್ಲಾ ಅವರಿದ್ದ ಪೀಠ ಪ್ರಕರಣವನ್ನು ಕೈಗೆತ್ತಿಕೊಂಡಿತು.

ರಾವತ್ ಅವರ ಹೇಳಿಕೆಗಳನ್ನು ಒಳಗೊಂಡಿರುವ ಡಿವಿಡಿಯನ್ನು ಅರ್ಜಿದಾರರು ಪುರಾವೆಯಾಗಿ ನೀಡಿದ್ದಾರೆ ಎಂಬುದು ಬುಧವಾರ ನ್ಯಾಯಾಲಯದ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ರಾವತ್ ಹೇಳಿಕೆಗೆ ಅವಕಾಶ ಮಾಡಿಕೊಡಲು ಕೋರ್ಟ್ ನಿರ್ಧರಿಸಿತ್ತು.

ರಾವತ್ ಪರವಾಗಿ ಹಾಜರಾದ ವಕೀಲ ಪ್ರದೀಪ್ ಥೋರಟ್ ಅವರು ಹೇಳಿಕೆ ಸಲ್ಲಿಸಲು ಸಮಯ ಕೋರಿದರು. ರಾವತ್ ಪ್ರಸ್ತುತ ದೆಹಲಿಯಲ್ಲಿದ್ದು ಅವರು ಸಂಸತ್ ಸದಸ್ಯರಾಗಿದ್ದಾರೆ ಎಂದು ಥೋರಟ್ ವಿವರಣೆ ನೀಡಿದ್ದಾರೆ.

ರಾವತ್ ಹೇಳಿಕೆ ನೀಡಲು ಸಮಯಾವಕಾಶ ನೀಡಿದ ಕೋರ್ಟ್ ಶುಕ್ರವಾರ ಮಧ್ಯಾಹ್ನ 3ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಇದೇ ವೇಳೆ ಪ್ರಕರಣ ಮುಂದೂಡಬೇಕು ಎಂಬ ಬಿಎಂಸಿ ವಾದವನ್ನು ನಿರಾಕರಿಸಿದ ಕೋರ್ಟ್ ರನೌತ್ ಬಂಗಲೆಯನ್ನು ಅರ್ಧದಷ್ಟು ನೆಲಸಮಗೊಳಿಸಿದ ಸ್ಥಿತಿಯಲ್ಲಿ ಬಿಡಲಾಗದು ಎಂದು ಅಭಿಪ್ರಾಯಪಟ್ಟಿದೆ.

"ಕೆಡವಿದ ಮನೆಯನ್ನು ಅದೇ ರೀತಿ ಬಿಡಲು ಸಾಧ್ಯವಿಲ್ಲ. ನಾಳೆ ಅರ್ಜಿದಾರರ ವಾದ ಆಲಿಸಲಾಗುತ್ತದೆ. ನಿಮಗೆ (ಈಗ) ಹೆಚ್ಚಿನ ಸಮಯ ಬೇಕು, ಆದರೆ ಉಳಿದಂತೆ ನೀವು ತುಂಬಾ ವೇಗವಾಗಿರುತ್ತೀರಿ." ಎಂದು ಕೋರ್ಟ್ ಹೇಳಿತು.

ನಾಳೆ ಮಧ್ಯಾಹ್ನ ನ್ಯಾಯಾಲಯವು ಅರ್ಜಿದಾರರ ವಾದಗಳನ್ನು ಆಲಿಸಲು ಪ್ರಾರಂಭಿಸಲಿದ್ದು ತಮ್ಮ ಸರದಿ ಆರಂಭವಾಗುವ ಮೊದಲು ರಾವತ್ ಮತ್ತು (ಪ್ರಕರಣದಲ್ಲಿ ಸ್ವಯಂ ಪಕ್ಷಕಾರರಾಗಿರುವ) ಬಿಎಂಸಿಯ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಅಫಿಡವಿಟ್‌ಗಳನ್ನು ಸಲ್ಲಿಸಬಹುದು ಎಂದು ನ್ಯಾಯಪೀಠ ನಿರ್ದೇಶಿಸಿತು.