ANI, Wikipedia  
ಸುದ್ದಿಗಳು

[ಎಎನ್ಐ ವರ್ಸಸ್‌ ವಿಕಿಪೀಡಿಯ] ನ್ಯಾಯಾಲಯ ಕಲಾಪದ ವರದಿ ಇಷ್ಟವಿಲ್ಲವೆಂದು ಅದನ್ನು ತೆಗೆದುಹಾಕಲು ಆದೇಶಿಸಲಾಗದು: ಸುಪ್ರೀಂ

ಪುಟ ತೆಗೆದುಹಾಕಲು ಆದೇಶಿಸಿದ್ದ ದೆಹಲಿ ಹೈಕೋರ್ಟನ್ನು ನ್ಯಾಯಾಲಯ ಈ ಹಿಂದೆ ಟೀಕಿಸಿತ್ತು. ಇಂದು, ವಿಕಿಪೀಡಿಯದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿತು.

Bar & Bench

ಪ್ರಕರಣವೊಂದರ ವಿಚಾರಣೆಯ ಬಗ್ಗೆ ಮಾಧ್ಯಮ ವರದಿ ತೆಗೆದುಹಾಕಲು ನ್ಯಾಯಾಲಯ ಬಯಸುವುದಾದರೆ, ಆ ವರದಿ ನ್ಯಾಯಾಂಗ ನಿಂದನೆಯಾಗುವಂಥದ್ದು ಎಂದು ಅದು ಮೇಲ್ನೋಟಕ್ಕೆ ದಾಖಲಿಸುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

'ಏಷ್ಯನ್ ನ್ಯೂಸ್ ಇಂಟರ್‌ನ್ಯಾಷನಲ್‌ ಮತ್ತು ವಿಕಿಮೀಡಿಯಾ ಫೌಂಡೇಶನ್ ನಡುವಣ ಪ್ರಕರಣದ ಕುರಿತು ವಿಕಿಪೀಡಿಯದಲ್ಲಿನ ಪುಟ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ವಿಕಿಮೀಡಿಯಾ ಫೌಂಡೇಶನ್ (ವಿಕಿಪೀಡಿಯ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಅಂತಹ ಪ್ರಕಟಣೆ ಇಷ್ಟವಾಗಲಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್‌ ವಿಚಾರಣೆ ಕುರಿತಾದ ವರದಿಯನ್ನು ತೆಗೆದುಹಾಕುವಂತೆ ಅವರು ಆದೇಶಿಸಲು ಆಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಾಲಯದ ವಿಚಾರಣೆ ಬಗ್ಗೆ ಯಾರಾದರೂ ಹೇಳಿದ್ದು ಇಷ್ಟವಾಗಲಿಲ್ಲ ಎಂದ ಮಾತ್ರಕ್ಕೆ ಅದನ್ನು ತೆಗೆದುಹಾಕುವಂತೆ ನಿರ್ದೇಶಿಸಲು ಸಾಧ್ಯವಿಲ್ಲ. ನ್ಯಾಯಾಂಗ ನಿಂದನೆಗೆ ಎಡೆಮಾಡಿಕೊಟ್ಟಿದ್ದರೆ ಮಾತ್ರ ಅಂತಹ ನಿರ್ದೇಶನ ನೀಡಬಹುದು. ನ್ಯಾಯಾಧೀಶರಿಗೆ ಇಷ್ಟವಾಗಲಿಲ್ಲ ಎಂದು ವರದಿ ತೆಗೆದುಹಾಕವಂತೆ ಆದೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ವಿವರಿಸಿತು.

ಪುಟ ತೆಗೆದುಹಾಕಲು ಆದೇಶಿಸಿದ್ದ ದೆಹಲಿ ಹೈಕೋರ್ಟನ್ನು ನ್ಯಾಯಾಲಯ ಈ ಹಿಂದೆ ಟೀಕಿಸಿತ್ತು. ಇಂದು, ವಿಕಿಪೀಡಿಯದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಅದು ಕಾಯ್ದಿರಿಸಿತು.

ಅಲ್ಲದೆ ಕೆಲ ವಿಚಾರಗಳನ್ನು ತೆಗೆದುಹಾಕಬೇಕೆಂದು ನಿರ್ದೇಶಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ ಎಂದು ನಾವು ಹೇಳುತ್ತಿಲ್ಲ. ಆದರೆ ಪ್ರಕಟವಾಗಿರುವ ಮಾಹಿತಿ ನ್ಯಾಯಾಂಗ ನಿಂದನೆಗೆ ಅವಕಾಶ ಮಾಡಿಕೊಡುತ್ತದೆ ಎಂಬ ಮೇಲ್ನೋಟದ ತೀರ್ಪನ್ನು ಅದು ನೀಡಿದ ನಂತರವೇ ಅಂತಹ ವರದಿಯನ್ನು ತೆಗೆದುಹಾಕಲು ನಿರ್ದೇಶಿಸುವ ಅಧಿಕಾರ ದೊರೆಯುತ್ತದೆ ಎಂದು ಅದು ಹೇಳಿತು. ವಿಕಿಪೀಡಿಯಾ ಪರವಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದ ಮಂಡಿಸಿದರು.

ದೆಹಲಿ ಹೈಕೋರ್ಟ್‌ನಲ್ಲಿ ವಿಕಿಪೀಡಿಯ ವಿರುದ್ಧ ಎಎನ್‌ಐ ಸಲ್ಲಿಸಿದ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ವಿವರಗಳನ್ನು ಈಗಾಗಲೇ ತೆಗೆದುಹಾಕಲಾಗಿರುವ ವಿವಾದಿತ ಪುಟ ಒಳಗೊಂಡಿತ್ತು. ಹೈಕೋರ್ಟ್‌ನಲ್ಲಿನ ವಿಚಾರಣೆ ಮತ್ತು ಎಎನ್‌ಐ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ಹೈಕೋರ್ಟ್ ಮಾಡಿದ ಟೀಕೆಗಳನ್ನು ಅದರಲ್ಲಿ ವಿವರಿಸಲಾಗಿತ್ತು.

ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ಹೈಕೋರ್ಟ್‌, ನ್ಯಾಯಾಲಯದ ಅವಲೋಕನಗಳ ಬಗ್ಗೆ ಚರ್ಚಿಸುವುದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ತನ್ನ ಆದೇಶದಲ್ಲಿ ಹೇಳಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು, ಅಕ್ಟೋಬರ್ 2024ರಲ್ಲಿ ಆನ್‌ಲೈನ್ ವಿಶ್ವಕೋಶಕ್ಕೆ ಪುಟವನ್ನು ತೆಗೆದುಹಾಕುವಂತೆ ನ್ಯಾಯಾಲಯ ಆದೇಶಿಸಿತ್ತು.