ಎಎನ್ಐ ಮಾನಹಾನಿ ಪ್ರಕರಣ: ಮೂವರು ಬಳಕೆದಾರರ ಮಾಹಿತಿ ನೀಡಲು ಸಮ್ಮತಿಸಿದ ವಿಕಿಪೀಡಿಯ

ಬಳಕೆದಾರರ ವಿವರ ಸಾರ್ವಜನಿಕವಾಗಿ ಗೌಪ್ಯವಾಗಿದ್ದರೂ ವಿಚಾರಣೆ ಮುಂದುವರೆಸಲು ಅಗತ್ಯವಾದ ಎಲ್ಲಾ ಮಾಹಿತಿ ನ್ಯಾಯಾಲಯಕ್ಕೆ ದೊರೆಯಲಿದೆ ಎಂದು ವಿಕಿಪೀಡಿಯ ಹೇಳಿದೆ
ANI, Wikipedia
ANI, Wikipedia
Published on

ಏಷ್ಯನ್‌ ನ್ಯೂಸ್‌ ಇಂಟರ್‌ನ್ಯಾಷನಲ್‌ (ಎಎನ್‌ಐ) ಸುದ್ದಿ ಸಂಸ್ಥೆ ಕುರಿತಾದ ವಿಕಿಪೀಡಿಯ ಪುಟದಲ್ಲಿ ಅದಕ್ಕೆ ಸಂಬಂಧಿಸಿದಂತೆ ಮಾನಹಾನಿಕರ ವಿಚಾರಗಳನ್ನು ಹಂಚಿಕೊಂಡವರ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ತಾನು ಸಿದ್ಧ ಎಂದು ದೆಹಲಿ ಹೈಕೋರ್ಟ್‌ಗೆ ವಿಕಿಪೀಡಿಯ ಸೋಮವಾರ ತಿಳಿಸಿದೆ [ವಿಕಿಮೀಡಿಯಾ ಫೌಂಡೇಷನ್‌ ಇಂಕ್‌ ಮತ್ತು ಎಎನ್‌ಐ ಮೀಡಿಯಾ ಪ್ರೈ ಲಿಮಿಟೆಡ್‌ ಇನ್ನಿತರರ ನಡುವಣ ಪ್ರಕರಣ].

ಅಂತಹ ಬಳಕೆದಾರ ಮಾಹಿತಿ ನೀಡುವಂತೆ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶ ಪ್ರಶ್ನಿಸಿ ವಿಕಿಪೀಡಿಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿಗೆ ವಿಕಿಪೀಡಿಯ ಈ ಹೇಳಿಕೆ ನೀಡಿದೆ.

Also Read
ಎಎನ್ಐ ಕುರಿತು ಮಾನಹಾನಿಕರ ವಿಚಾರ ಹಂಚಿಕೊಂಡವರ ಗುರುತು ಬಹಿರಂಗಪಡಿಸದ ವಿಕಿಪೀಡಿಯ: ದೆಹಲಿ ಹೈಕೋರ್ಟ್‌ನಿಂದ ತರಾಟೆ

ವಿಕಿಪೀಡಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಖಿಲ್ ಸಿಬಲ್ ಈ ಬಳಕೆದಾರರಿಗೆ ನೋಟಿಸ್‌ ಜಾರಿಗೊಳಿಸುವುದಾಗಿ ಖುದ್ದು ಹೇಳಿದರು. ಬಳಕೆದಾರರನ್ನು ಗುರುತಿಸಲು ಯಾವುದೇ ವಿವರಗಳಿಲ್ಲದಿದ್ದರೂ ಈ ಬಳಕೆದಾರರಿಗೆ ನೋಟಿಸ್‌ ನೀಡಿರುವುದನ್ನು ಎಎನ್‌ಐಗೂ ತಿಳಿಸಲಾಗುವುದು. ನೋಟಿಸ್‌ ನೀಡಿರುವುದನ್ನು ವಿವರಿಸುವ ಅಫಿಡವಿಟ್‌ನ ತಿದ್ದುಪಡಿ ಮಾಡದ ಆವೃತ್ತಿಯನ್ನು ನ್ಯಾಯಾಲಯದೊಂದಿಗೆ ಮಾತ್ರ ಹಂಚಿಕೊಳ್ಳಲಾಗುವುದು ಎಂದರು.

ಈ ಮಾಹಿತಿಯನ್ನು ನ್ಯಾಯಾಲಯದೊಂದಿಗೆ ಮಾತ್ರ ಹಂಚಿಕೊಳ್ಳಲಾಗುವುದು. ಇದರಿಂದ ಬಳಕೆದಾರರ ವಿವರ ಸಾರ್ವಜನಿಕವಾಗಿ ಗೌಪ್ಯವಾಗಿದ್ದರೂ  ವಿಚಾರಣೆ ಮುಂದುವರೆಸಲು ಅಗತ್ಯವಾದ ಎಲ್ಲಾ ಮಾಹಿತಿ ನ್ಯಾಯಾಲಯದ ಬಳಿ ಇರುತ್ತದೆ  ಎಂದು ಸಿಬಲ್‌ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಎನ್‌ಐ ಪರ ವಕೀಲರು ಬಳಕೆದಾರರಿಗೆ ನೋಟಿಸ್‌ ನೀಡುವಂತೆ ನೋಡಿಕೊಳ್ಳುವ ಸಂಪೂರ್ಣ ಹೊಣೆಯನ್ನು ವಿಕಿಪೀಡಿಯ ಹೊರಬೇಕು ಎಂದರು.

ವಿಕಿಪೀಡಿಯದಲ್ಲಿ ಈ ಬಳಕೆದಾರರ ಬಗ್ಗೆ ಲಭ್ಯವಿರುವ ಎಲೆಕ್ಟ್ರಾನಿಕ್ ಮಾಹಿತಿಯ ಆಧಾರದ ಮೇಲೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬಲ್ ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಸಮ್ಮತಿ ಆದೇಶ ಹೊರಡಿಸಬಹುದು ಎಂದು ಸಿಬಲ್ ಸಲಹೆ ನೀಡಿದರು.

Also Read
'ನಿರ್ಬಂಧಿಸಲು ಹೇಳಬೇಕಾದೀತು' ವಿಕಿಪೀಡಿಯಾಕ್ಕೆ ದೆಹಲಿ ಹೈಕೋರ್ಟ್ ಎಚ್ಚರಿಕೆ: ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

ಅಂತಹ ಸಮ್ಮತಿಯ ಆದೇಶವನ್ನು ನ್ಯಾಯಾಲಯ ನೀಡಬಹುದೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ ಪ್ರಕರಣವನ್ನು ನಾಳೆಗೆ ಮುಂದೂಡಲಾಗಿದೆ.

ವಿಕಿಪೀಡಿಯದಲ್ಲಿ ಯಾರು ಬೇಕಾದರೂ ಮಾಹಿತಿಯನ್ನು ಸಂಕಲಿಸಲು ಅವಕಾಶವಿದ್ದು ಎಎನ್‌ಐ ಸಂಸ್ಥೆಯನ್ನು ಸರ್ಕಾರದ ಪರವಾಗಿ ಪ್ರಚಾರ ನಡೆಸುವ ಸಾಧನ ಎಂದು ಸಂಸ್ಥೆಯ ವಿಕಿಪೀಡಿಯ ಪುಟದಲ್ಲಿ ಬರೆದದ್ದು ವ್ಯಾಜ್ಯದ ಮೂಲವಾಗಿದೆ. ಹಾಗೆ ಬರೆದವರ ವಿವರವನ್ನು ವಿಕಿಪೀಡಿಯ ಬಹಿರಂಗಪಡಿಸಿಲ್ಲ ಎಂದು ಆಕ್ಷೇಪಿಸಿ ಎಎನ್‌ಐ ಮಾನಹಾನಿ ಮೊಕದ್ದಮೆ ದಾಖಲಿಸಿದ್ದು ಕಾನೂನು ಸಮರಕ್ಕೆ ಮುಂದಾಗಿದೆ.

Kannada Bar & Bench
kannada.barandbench.com