“ಕೋವಿಡ್ ಪರಿಸ್ಥಿತಿಯ ಹೊರತಾಗಿಯೂ ಆರೋಪಿಗಳ ಬಂಧನ ಸೇರಿದಂತೆ ವ್ಯಕ್ತಿಗಳ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುವ ಬಾಧ್ಯತೆ ಸಾಂವಿಧಾನಿಕ ನ್ಯಾಯಾಲಯಗಳ ಮೇಲಿದೆ” ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಹೈಕೋರ್ಟ್ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರಿನ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ “ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನದ ಸಹಾಯದಿಂದ ನ್ಯಾಯದಾನಕ್ಕೆ ಅವಕಾಶ” ಎಂಬ ವಿಷಯದ ಕುರಿತು ಗುರುವಾರ ಆಯೋಜಿಸಲಾಗಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.
ಪ್ರತಿಭಟನಾಕಾರರು, ರಾಜಕೀಯ ಕೈದಿಗಳು, ಧಾರ್ಮಿಕ ನಂಬಿಕೆಗಳನ್ನು ಹೊಂದಿರುವವರು, ವಿದ್ಯಾರ್ಥಿಗಳು ಮತ್ತು ಪ್ರತಿಸ್ಪರ್ಧಿಗಳ ಬಂಧನವನ್ನು ಉಲ್ಲೇಖಿಸಿರುವ ಖೇಹರ್, ಅವರನ್ನು ವಶಕ್ಕೆ ಪಡೆಯುವುದು ಇಂದಿನ ಕ್ರೂರ ವಾಸ್ತವ ಎಂದು ಹೇಳಿದ್ದಾರೆ. ಇಂಥ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಚಾರಣೆ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
“ಪ್ರತಿಭಟನಾಕಾರರು, ರಾಷ್ಟ್ರದ್ರೋಹ ಆರೋಪ ಹೊತ್ತವರು, ರಾಜಕೀಯ ಪ್ರತಿಸ್ಪರ್ಧಿಗಳು, ಧಾರ್ಮಿಕ ನಂಬಿಕೆಗಳ ಕುರಿತ ಪ್ರಕರಣಕ್ಕೊಳಗಾದವರು ಬಂಧನಕ್ಕೀಡಾಗುವುದನ್ನು ನಾವಿಂದು ನೋಡುತ್ತಿದ್ದೇವೆ. ಬಂಧನವೆನ್ನುವುದು ಇಂದಿನ ಅತ್ಯಂತ ಕಠೋರ ವಾಸ್ತವವಾಗಿದೆ. ಕ್ರಿಮಿನಲ್ ಕಾನೂನಿನ ಪರಿಣಾಮ ಎಷ್ಟು ಗಂಭೀರವೆಂದರೆ ಒಂದು ದಿನ ಜೈಲುವಾಸ ಅಥವಾ ಹೆಚ್ಚು ಸಮಯ ಜೈಲುವಾಸ ಅತ್ಯಂತ ವಿನಾಶಕಾರಿಯಾದುದು… ಒಂದು ವೇಳೆ ಬಂಧನವು ಅಚಾತುರ್ಯದಿಂದ ಆಗಿದ್ದರೆ ಬಂಧನದ ಅವಧಿಯನ್ನು ಯಾರೂ ಮರಳಿಸಲಾಗದು. ಈ ಹಿನ್ನೆಲೆಯಲ್ಲಿ ಬಂಧನಕ್ಕೊಳಪಟ್ಟವರ ಪ್ರಕರಣಗಳನ್ನು ಆದ್ಯತೆಯ ಮೇಲೆ ಪರಿಗಣಿಸುವುದಕ್ಕೆ ನಾನು ಪ್ರಾಶಸ್ತ್ಯ ನೀಡುತ್ತೇನೆ” ಎಂದು ಅವರು ಹೇಳಿದರು.
“ಬಡವ, ಬಲ್ಲಿದರೆನ್ನುವ ಭೇದವಿಲ್ಲದೆ ಎಲ್ಲರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಸಂರಕ್ಷಿಸುವುದು ಎಲ್ಲಾ ಸಾಂವಿಧಾನಿಕ ನ್ಯಾಯಾಲಯಗಳ ಕರ್ತವ್ಯವಾಗಿದೆ. ಮಿಗಿಲಾಗಿ, ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ನ್ಯಾಯಾಲಯಗಳು ಆದ್ಯತೆಗಳನ್ನಾಗಿಸಿಕೊಳ್ಳಬೇಕು” ಎಂದು ಖೇಹರ್ ನುಡಿದರು.
“ಪ್ರತಿಭಟನಾಕಾರರು, ದೇಶದ್ರೋಹದ ಆರೋಪಕ್ಕೊಳಗಾದವರು, ರಾಜಕೀಯ ಪ್ರತಿಸ್ಪರ್ಧಿಗಳು, ವಿದ್ಯಾರ್ಥಿಗಳು ಹಾಗೂ ಧಾರ್ಮಿಕ ನಂಬಿಕೆಗಳ ಕುರಿತಾದ ಪ್ರಕರಣಕ್ಕೊಳಗಾದವರು ಬಂಧನಕ್ಕೀಡಾಗುವುದನ್ನು ನಾವಿಂದು ಕಾಣುತ್ತಿದ್ದೇವೆ. ಬಂಧನವು ಅತ್ಯಂತ ಕ್ರೂರ ವಾಸ್ತವ.”ನಿವೃತ್ತ ಮುಖ್ಯ ನ್ಯಾಯಮೂರ್ತಿ ಜೆ ಎಸ್ ಖೇಹರ್
ವಲಸೆ ಕಾರ್ಮಿಕರ ವಿಷಯ ಪ್ರಸ್ತಾಪಿಸಿದ ನಿವೃತ್ತ ನ್ಯಾ. ಖೇಹರ್ ಅವರು “ಮಾಧ್ಯಮಗಳ ವ್ಯಾಪಕ ವರದಿಗಾರಿಕೆಯ ನಡುವೆಯೂ ಯಾವುದೇ ವಲಸೆ ಕಾರ್ಮಿಕರು ನಡೆದು ಮನೆಗೆ ಮರಳಲಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಹೇಳಿಕೆ ಸಲ್ಲಿಸಲಾಯಿತು. ಇದಕ್ಕೆ ವಿರುದ್ಧವಾಗಿ ಮಾಧ್ಯಮಗಳ ಮೂಲಕ ವಲಸೆ ಕಾರ್ಮಿಕರ ನರಳಾಟವನ್ನು ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಗಮನಿಸಿ ಸೂಕ್ತವಾದ ಆದೇಶಗಳನ್ನು ಹೊರಡಿಸಿದವು… ಜನರ ಮುಲಭೂತ ಹಕ್ಕುಗಳನ್ನು ಸಂರಕ್ಷಿಸುವ ಸಂಬಂಧ ನ್ಯಾಯಾಲಯಗಳು ಸ್ಪಷ್ಟ ಗುರಿ ಹೊಂದಿವೆ ಎಂಬುದು ಇಂಥ ಪ್ರಕರಣಗಳ ಅಗತ್ಯ ಹಸ್ತಕ್ಷೇಪದಿಂದ ತಿಳಿಯುತ್ತದೆ” ಎಂದು ಹೇಳಿದರು.
ಡಿಜಿಟಲ್ ಫೈಲಿಂಗ್‌ಗೆ ತಮ್ಮ ಮಾತಿನಲ್ಲಿ ಒತ್ತು ನೀಡಿದ ಖೇಹರ್ ಅವರು ಇದರಿಂದ ನ್ಯಾಯಾಲಯಗಳನ್ನು ಕಾಗದ ಮುಕ್ತವಾಗಿಸಬಹುದು. ಇದರಿಂದ ಪರಿಸರಕ್ಕೂ ಅನುಕೂಲಕಾರಿಯಾಗಿರಲಿದೆ. ವರ್ಚುವಲ್ ನ್ಯಾಯಾಲಯಗಳಲ್ಲಿ ಮೂಲಸೌಕರ್ಯ ಹೆಚ್ಚಿಸುವುದರಿಂದ ದಕ್ಷತೆ ಹೆಚ್ಚಲಿದ್ದು, ನ್ಯಾಯದಾನದ ಲಭ್ಯತೆ ಇದರಿಂದ ಸುಲಭವಾಗುತ್ತದೆ ಎಂದು ನ್ಯಾ. ಖೇಹರ್ ಅಭಿಪ್ರಾಯಪಟ್ಟರು.
“ಆರೋಗ್ಯ ಕಾರ್ಯಕರ್ತರಂತೆಯೇ ನ್ಯಾಯಾಂಗದ ಭಾಗವಾಗಿರುವವರು ಕೂಡ ಮನವಿದಾರರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಮೂಲಕ ಕೋವಿಡ್ ವಾರಿಯರ್‌ಗಳಾಗಬೇಕು” ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹೇಳಿದರು.
“ಎಲ್ಲಾ ಪ್ರತಿಕೂಲ ಸಂದರ್ಭದಲ್ಲೂ ಯಶಸ್ವಿಯಾಗಿರುವ ಸಂವಿಧಾನವನ್ನು ಎತ್ತಿ ಹಿಡಿಯುವ ನ್ಯಾಯಾಂಗದ ಪಾತ್ರವನ್ನು ನಾವು ಮರೆಯಬಾರದು” ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಹೇಳಿದರು.