Justice N Anand Venkatesh
Justice N Anand Venkatesh 
ಸುದ್ದಿಗಳು

ದೇವಸ್ಥಾನದ ಅರ್ಚಕರ ನೇಮಕಾತಿ ವಿಚಾರದಲ್ಲಿ ಜಾತಿಯ ಪಾತ್ರ ಇಲ್ಲ: ಮದ್ರಾಸ್ ಹೈಕೋರ್ಟ್

Bar & Bench

ವ್ಯಕ್ತಿಯೊಬ್ಬರು ದೇವಸ್ಥಾನದ ಅರ್ಚಕರಾಗಿ ನೇಮಕಗೊಳ್ಳುವಾಗ ಅವರ ಜಾತಿಯು ಯಾವುದೇ ಪಾತ್ರ ವಹಿಸಬಾರದು ಎಂದು ಮದ್ರಾಸ್‌ ಹೈಕೋರ್ಟ್ ಸೋಮವಾರ ತೀರ್ಪು ನೀಡಿದೆ [ಮುತ್ತು ಸುಬ್ರಮಣ್ಯ ಗುರುಕ್ಕಲ್ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರು ಇನ್ನಿತರರ ನಡುವಣ ಪ್ರಕರಣ].

ತಮಿಳುನಾಡಿನ ದೇವಾಲಯಗಳ ಅರ್ಚಕರಾಗಿ ನೇಮಕಗೊಳ್ಳುವವರಿಗೆ ಇರಬೇಕಾದ ಏಕೈಕ ಅಗತ್ಯತೆ ಎಂದರೆ, ಅಂತಹವರು ಸಂಬಂಧಪಟ್ಟ ದೇವಾಲಯದ ಆಗಮಿಕ (ದೇವಾಲಯ ಸಂಪ್ರದಾಯಗಳು) ತತ್ವಗಳನ್ನು ಚೆನ್ನಾಗಿ ತಿಳಿದಿರಬೇಕು ಮತ್ತು ದೇವಾಲಯದ ಆಚರಣೆಗಳಿಗೆ ಸಂಬಂಧಿಸಿದಂತೆ ಸಮರ್ಪಕ ತರಬೇತಿ ಪಡೆದಿರಬೇಕು ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ವಿವರಿಸಿದ್ದಾರೆ.

ಅರ್ಚಕರು ಅಥವಾ ಸ್ಥಾನಿಕರ (ದೇಗುಲದ ಅರ್ಚಕರ) ಹುದ್ದೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿ ತಮಿಳುನಾಡಿನ ಸೇಲಂ ಜಿಲ್ಲೆಯ ಶ್ರೀ ಸುಗವಣೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (ಇ ಒ) ಅವರು ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ  2018ರಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ವಂಶವಾಹಿ ವಾರಸುದಾರರೇ ಅರ್ಚಕ ಹುದ್ದೆ ಅಲಂಕರಿಸಬೇಕು ಎಂಬುದು ಅರ್ಜಿದಾರರ ಒತ್ತಾಯವಾಗಿತ್ತು. ದೇವಸ್ಥಾನದಲ್ಲಿ ರೂಢಿಗತವಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದರಿಂದ ಅರ್ಚಕ ಹುದ್ದೆ ಅಲಂಕರಿಸುವ ತನ್ನ ಪಾರಂಪರಿಕ ಹಕ್ಕುಗಳನ್ನು ಅಧಿಸೂಚನೆ ಉಲ್ಲಂಘಿಸಿದೆ ಎಂದು ಅವರು ನ್ಯಾಯಾಲಯದಲ್ಲಿ ದೂರಿದ್ದರು.  

ಆದರೆ  ದೇವಾಲಯದ ಅರ್ಚಕರ ನೇಮಕವು ಜಾತ್ಯತೀತ ಕಾರ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ, ಅಂತಹ ನೇಮಕಾತಿ ಕುರಿತು ವಂಶಪಾರಂಪರ್ಯದ ಹಕ್ಕನ್ನು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

“…ದೇವಸ್ಥಾನದ ನಿರ್ದಿಷ್ಟ ಆಗಮಗಳು ಮತ್ತು ಆಚರಣೆಗಳಲ್ಲಿ ಪಾರಂಗತರಾಗಿರುವ ಯಾವುದೇ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ಅರ್ಚಕರಾಗಿ ನೇಮಿಸಬಹುದು ”ಎಂದು ಹೈಕೋರ್ಟ್ ಹೇಳಿದೆ.

ಅಂತೆಯೇ ಸೂಕ್ತ ವಿಧಾನ ಅನುಸರಿಸಿ ಅರ್ಚಕರನ್ನು ನೇಮಕ ಮಾಡಿಕೊಳ್ಳಲು ಹೊಸ ಜಾಹೀರಾತು ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗೆ ನ್ಯಾಯಾಲಯ ಸೂಚಿಸಿದ್ದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಜಿದಾರರಿಗೂ ಅನುಮತಿ ಇದೆ ಎಂದು ಹೇಳಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Muthu_Subrmania_Gurukkal_v_The_Commissioner.pdf
Preview