ದೇಶಾದ್ಯಂತ ಆಕ್ರೋಶ ಹುಟ್ಟಿಸಿದ್ದ ತಮಿಳುನಾಡಿನಲ್ಲಿ 2015ರಲ್ಲಿ ನಡೆದಿದ್ದ ದಲಿತ ಯುವಕ ಗೋಕುಲ್‌ರಾಜ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದ ಹತ್ತು ಮಂದಿ ಆರೋಪಿಗಳು ಜಾತಿ ದ್ವೇಷದಿಂದ ಕೃತ್ಯವನ್ನು ಎಸಗಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಹೇಳಿದೆ.
ತಮ್ಮ ಜಾತಿಗೆ ಸೇರಿದ ಮಹಿಳೆಯೊಂದಿಗೆ ಗೋಕುಲ್‌ರಾಜ್ ಸಂಬಂಧ ಹೊಂದಿದ್ದಾನೆ ಎನ್ನುವ ಶಂಕೆಯ ಹಿನ್ನೆಲೆಯಲ್ಲಿ ಆತನನ್ನು ಹತ್ಯೆಗೈದಿದ್ದ ಹತ್ತು ಮಂದಿ ಮೇಲ್ಜಾತಿ ವ್ಯಕ್ತಿಗಳಿಗೆ ವಿಚಾರಣಾ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿದೆ.
ಈ ಪ್ರಕರಣವು ಜಾತಿ ವ್ಯವಸ್ಥೆ, ಮತಾಂಧತೆ ಮತ್ತು ದಮನಿತ ವರ್ಗಗಳಿಗೆ ಸೇರಿದ ವ್ಯಕ್ತಿಗಳ ಬಗೆಗಿನ ಅಮಾನವೀಯ ವರ್ತನೆಯನ್ನು ಮಾತ್ರವಲ್ಲದೆ ಸಾಕ್ಷಿಗಳನ್ನು ಉದ್ದೇಶಪೂರ್ವಕವಾಗಿ ತಿರುಚುವ ಈಗಿನ ಸುಪರಿಚಿತ ಪಿಡುಗನ್ನು ನ್ಯಾಯಾಲಯದ ಗಮನಕ್ಕೆ ತಂದಿರುವುದಾಗಿ ನ್ಯಾಯಮೂರ್ತಿಗಳಾದ ಎಂ ಎಸ್ ರಮೇಶ್ ಮತ್ತು ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠ ಹೇಳಿತು.
“ಪ್ರಕರಣದ ಆರೋಪಿಗಳಿಗೆ ಜಾತಿ ಎಂಬ ಭೂತ ಮೆಟ್ಟಿಕೊಂಡಿತ್ತು” ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ ಕಾನೂನು ಪ್ರಕ್ರಿಯೆಯನ್ನು ತಿರುಚುವ ದಾವೆದಾರರಿಗೆ ಮತ್ತು ಹಾಗೆ ತಿರುಚುಲು ಅನುಮತಿ ನೀಡುವ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಎಚ್ಚರಿಕೆ ನೀಡಿತು.
ಇಂತಹ ಪ್ರಕರಣಗಳು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ಸುಲಭವಾಗಿ ತಿರುಚಿ ಸಲೀಸಾಗಿ ಶರಣಾಗುವ ಸಾಕ್ಷಿಗಳಿಂದ ಗೆಲ್ಲಬಹುದು ಎಂಬುದಕ್ಕೆ ಸ್ಪಷ್ವ ಉದಾಹರಣೆಯಾಗಿವೆ ಎಂದು ನ್ಯಾಯಾಲಯ ವಿಷಾದಿಸಿತು.
"ಇದು ಮಾನವ ವರ್ತನೆಯ ಕರಾಳ ಮುಖವನ್ನು ಹೊರಗೆಡವುವ ಪ್ರಕರಣವಾಗಿದೆ. ಇದು ಜಾತಿ ವ್ಯವಸ್ಥೆ, ಮತಾಂಧತೆ, ಸಮಾಜದ ಅಂಚಿನಲ್ಲಿರುವ ವರ್ಗಕ್ಕೆ ಸೇರಿದ ವ್ಯಕ್ತಿಗಳ ಕುರಿತಾದ ಅಮಾನವೀಯ ವರ್ತನೆ, ಮತ್ತಿತರ ಸಮಾಜದ ಕೊಳಕು ಅಂಶಗಳತ್ತ ನಮ್ಮ ಗಮನ ಹರಿಯುವಂತೆ ಮಾಡುತ್ತದೆ; ನ್ಯಾಯದ ಹಾದಿ ತಪ್ಪಿಸುವ ಮತ್ತು ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನದೊಂದಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿಕೂಲವಾಗುವ ಸಾಕ್ಷಿಗಳ ಪರಿಚಿತ ಉಪದ್ರವವನ್ನು ಈ ನ್ಯಾಯಾಲಯ ಈಗ ಎದುರಿಸಿದೆ" ಎಂದು ಪೀಠ ಹೇಳಿತು.
ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಗೋಕುಲ್ ರಾಜ್ 2015ರ ಜೂನ್ 23ರಂದು ನಾಪತ್ತೆಯಾಗಿದ್ದರು. ಕೊನೆಯದಾಗಿ ತಿರುಚೆಂಗೋಡಿನ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಸ್ನೇಹಿತೆ ಸ್ವಾತಿ ಜತೆ ಕಾಣಿಸಿಕೊಂಡಿದ್ದರು. ನಂತರ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ರೈಲ್ವೆ ಹಳಿಯ ಮೇಲೆ ಅವರ ರುಂಡವಿಲ್ಲದ ದೇಹ ಪತ್ತೆಯಾಗಿತ್ತು. ಅವರನ್ನು ಕತ್ತು ಹಿಸುಕಿ ಕೊಂದಿರುವುದು ಮರಣೋತ್ತರ ಪರೀಕ್ಷೆ ವೇಳೆ ದೃಢಪಟ್ಟಿತ್ತು.
ದಲಿತ ಸಮುದಾಯಕ್ಕೆ ಸೇರಿದ್ದ ಗೋಕುಲ್ ಪ್ರಬಲ ಗೌಂಡರ್ ಸಮುದಾಯಕ್ಕೆ ಸೇರಿದ್ದ ಮಹಿಳೆಯೊಂದಿಗೆ ಸಂಬಂಧ ಬೆಳೆಸಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರುವುದು ಸಾಬೀತಾಗಿತ್ತು. ಕಳೆದ ವರ್ಷ ಮಧುರೈ ವಿಶೇಷ ಸೆಷನ್ಸ್ ನ್ಯಾಯಾಲಯ ಪ್ರಕರಣದ ಹತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಆದರೆ ಸಿಸಿಟಿವಿಯಲ್ಲಿರುವುದು ತಾನಲ್ಲ ಎಂದು ಸ್ವಾತಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪೀಠ ಆಕೆಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು.
ಅಪರಾಧಿಗಳು ತಮ್ಮ ಮೇಲ್ಮನವಿಯಲ್ಲಿ, ಪೊಲೀಸರು ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದ್ದರು. ಕೃತ್ಯವನ್ನು ಕಂಡಿರುವ ಪ್ರತ್ಯಕ್ಷ ಸಾಕ್ಷಿಗಳಿಲ್ಲ.ಇಡೀ ಪ್ರಕರಣ ಸಾಂದರ್ಭಿಕ ಸಾಕ್ಷ್ಯವನ್ನು ಆಧರಿಸಿದೆ ಎಂದು ಅವರು ವಾದಿಸಿದ್ದರು.
ಮತ್ತೊಂದೆಡೆ ಪ್ರಾಸಿಕ್ಯೂಷನ್ ʼಅಪರಾಧಿಗಳ ವಿರದ್ಧ ಸಾಕಷ್ಟು ಪುರಾವೆಗಳಿದ್ದು, ಇದು ಮರ್ಯಾದೆಗೇಡು ಹತ್ಯೆಯ ರೀತಿಯದ್ದಲ್ಲ ಬದಲಿಗೆ ಜಾತ್ಯಾಂಧ ಹತ್ಯೆ ಎಂದು ವಾದಿಸಿತ್ತು.
ವಾದ ಆಲಿಸಿದ ನ್ಯಾಯಾಲಯ ಸ್ಥಳೀಯ ಪ್ರಬಲ ಜಾತಿಯ ಗುಂಪಿನ ಪ್ರಮುಖ ಆರೋಪಿ ಯುವರಾಜ್ ಮಾಧ್ಯಮಗಳ ಮೇಲೆ ಪ್ರಭಾವ ಬೀರಲು ಮತ್ತು ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ಭಾವನೆ ಮೂಡಿಸಲು ಪ್ರಯತ್ನಿಸಿದ್ದ. ಆದರೆ ತಾನು ಮಾಧ್ಯಮ ವರದಿಗಳು ಮತ್ತು ಸಾರ್ವಜನಿಕ ಗ್ರಹಿಕೆಯಿಂದ ಪ್ರಭಾವಿತವಾಗಲಿಲ್ಲ ಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಅದು ಎತ್ತಿ ಹಿಡಿಯಿತು.
ಇದೇ ವೇಳೆ ಪ್ರಾಸಿಕ್ಯೂಷನ್ ವಾದ ಮಂಡನೆ ಸಿಸಿಟಿವಿ ದೃಶ್ಯಾವಳಿ ಮತ್ತು ಅದೇ ಬಗೆಯ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳನ್ನು ಅವಲಂಬಿಸಿರುವ ಎಲ್ಲಾ ಪ್ರಕರಣಗಳಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನ ಪಾಲಿಸುವ ಅಗತ್ಯವಿದೆ ಎಂದು ಪೀಠ ಹೇಳಿತು. ಹಾಗಾಗಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ನಿಯಂತ್ರಿಸುವ ಸೂಕ್ತ ಕಾನೂನನ್ನು ಕೇಂದ್ರ ಸರ್ಕಾರ ತರಬೇಕು ಎಂದು ಅದು ತಿಳಿಸಿತು.