BJP MLA Muniratna and Bengaluru City Civil Court 
ಸುದ್ದಿಗಳು

ಜಾತಿ ನಿಂದನೆ, ಲಂಚಕ್ಕೆ ಬೇಡಿಕೆ: ಬಿಜೆಪಿ ಶಾಸಕ ಮುನಿರತ್ನರನ್ನು ಎರಡು ದಿನ ಪೊಲೀಸ್‌ ಕಸ್ಟಡಿಗೆ ನೀಡಿದ ನ್ಯಾಯಾಲಯ

ಬಿಬಿಎಂಪಿ ಮಾಜಿ ಸದಸ್ಯ ವೇಲುನಾಯ್ಕರ್ ಮತ್ತು ಚೆಲುವರಾಜು ಅವರು ಪ್ರತ್ಯೇಕವಾಗಿ ನೀಡಿರುವ ದೂರು ಆಧರಿಸಿ, ವೈಯಾಲಿಕಾವಲ್‌ ಪೊಲೀಸರು ಬಂಧಿಸಿದ್ದಾರೆ.

Bar & Bench

ಜಾತಿ ನಿಂದನೆ ಹಾಗೂ ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಲಂಚದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎರಡು ದಿನಗಳ ಕಾಲ ಜನಪ್ರತಿನಿಧಿಗಳ ಸತ್ರ ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿದೆ.

ಬಂಧಿತ ಶಾಸಕ ಮುನಿರತ್ನ ಅವರನ್ನು ಬೆಂಗಳೂರಿನ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರ ನಿವಾಸದಲ್ಲಿ ಭಾನುವಾರ ಬೆಳಗಿನ ಜಾವ ವೈಯಾಲಿಕಾವಲ್‌ ಪೊಲೀಸರು ಹಾಜರುಪಡಿಸಿದರು.

ಪ್ರಕರಣದ ಮಾಹಿತಿ ಪಡೆದ ನ್ಯಾಯಾಧೀಶರು ಎರಡು ದಿನ ಶಾಸಕ ಮುನಿರತ್ನ ಅವರನ್ನು ವೈಯಾಲಿಕಾವಲ್‌ ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ.

ಇದಕ್ಕೂ ಮುನ್ನ, “ಮುನಿರತ್ನ ಅವರು ಮನೆಯ ಸಮೀಪದಲ್ಲೇ ಠಾಣೆ ಇದ್ದು, ವಿಚಾರಣೆಗೆ ಕರೆದಿದ್ದರೆ ಹೋಗುತ್ತಿದ್ದೆ. ಹಾಗೆ ಮಾಡದ ರಾಜಕೀಯ ದುರುದ್ದೇಶದಿಂದ ತನ್ನನ್ನು ಬಂಧಿಸಲಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ “ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು ಎನ್ನಲಾಗಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಮುನಿರತ್ನ ಅವರನ್ನು ಒಂದು ವಾರ ಕಸ್ಟಡಿಗೆ ನೀಡಬೇಕು” ಎಂದು ನ್ಯಾಯಾಧೀಶರಿಗೆ ವೈಯಾಲಿಕಾವಲ್‌ ಪೊಲೀಸರು ಮನವಿ ಮಾಡಿದ್ದಾರೆ.

ಎರಡು ಕಡೆಯ ವಾದ ಆಲಿಸಿದ ನ್ಯಾಯಾಧೀಶರು ಮುನಿರತ್ನ ಅವರನ್ನು ಎರಡು ದಿನ ಕಸ್ಟಡಿಗೆ ನೀಡಿದ್ದು, ಮುನಿರತ್ನಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸುವಂತೆ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಆಂಧ್ರಪ್ರದೇಶದ ತಿರುಪತಿಯತ್ತ ಪ್ರಯಾಣ ಬೆಳೆಸಿದ್ದ ಮುನಿರತ್ನ ಮತ್ತು ಕಾರಿನ ಚಾಲಕನನ್ನು ಕೋಲಾರ ಪೊಲೀಸರು ಕರ್ನಾಟಕ-ಆಂಧ್ರ ಪ್ರದೇಶ ಗಡಿ ನಂಗಲಿ ಜೆಎಸ್‌ಆರ್‌ ಟೋಲ್‌ ಬಳಿ ಶನಿವಾರ ವಶಕ್ಕೆ ಪಡೆದಿದ್ದರು. ಸಂಜೆ ಮುನಿರತ್ನ ಅವರನ್ನು ವೈಯಾಲಿಕವಾಲ್‌ ಠಾಣೆಗೆ ಕರೆದು ತಂದು ವಿಚಾರಣೆ ನಡೆಸಿದ್ದರು.

ಪ್ರಕರಣದ ಹಿನ್ನೆಲೆ: ವೇಲು ನಾಯ್ಕರ್‌ ಎಂಬವರು ತಾನು ಆದಿ ದ್ರಾವಿಡ (ಎಸ್‌ ಸಿ) ಜನಾಂಗಕ್ಕೆ ಸೇರಿದ್ದು, 2015ರಿಂದ 2020ರವರೆಗೆ ಲಕ್ಷ್ಮಿದೇವಿ ನಗರ ವಾರ್ಡ್‌ ಸಂಖ್ಯೆ 42ರ ಬಿಬಿಎಂಪಿ ಸದಸ್ಯನಾಗಿದ್ದೆ. ಕೆಲ ವಿಚಾರಗಳಲ್ಲಿ ಮುನಿರತ್ನ ಮತ್ತು ತನ್ನ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಸ್ನೇಹಿತರ ಎದುರು ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದರು. ಅಸಭ್ಯ ಪದ ಬಳಕೆಯ ಮೂಲಕ ನಿಂದಿಸಿ, ನಾನು ರಾಜಕೀಯವಾಗಿ ಬೆಳೆಯುವುದಕ್ಕೆ ಬಿಡಬಾರದು ಎಂದು ಹೇಳುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮುನಿರತ್ನ ಲಂಚ ನೀಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂದು ಚೆಲುವರಾಜು ಹೇಳಿದ್ದರು. ಲಂಚ ಕೊಡದಂತೆ ನಾನು ಅವರಿಗೆ ತಿಳಿಸಿದ್ದೆ. ತನ್ನ ಕಚೇರಿಗೆ ಕರೆಸಿಕೊಂಡಿದ್ದ ಮುನಿರತ್ನ ಅವರು ಚೆಲುವರಾಜು ಅವರನ್ನು ಜಾತಿ ನಿಂದನೆ ಮಾಡಿದ್ದಲ್ಲದೇ ಮನೆಯವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ವೇಲುನಾಯ್ಕರ್‌ ಮಾತು ಕೇಳಿ ಕಮಿಷನ್‌ ಕೊಡುತ್ತಿಲ್ಲ ಎಂದು ಬೆದರಿಸಿದ್ದಾರೆ. ದಲಿತ ಮತ್ತು ಒಕ್ಕಲಿಗ ಸಮುದಾಯಗಳ ನಡುವೆ ವೈಷಮ್ಯ ಉಂಟು ಮಾಡುವ ಮತ್ತು ಘರ್ಷಣೆಗೆ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಇದನ್ನು ತಾನು ಚೆಲುವರಾಜು ಆಡಿಯೊ ರೆಕಾರ್ಡ್‌ ಮಾಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಚೆಲುವರಾಜು ದೂರಿನಲ್ಲೇನಿದೆ?: “ರಾಜರಾಜೇಶ್ವರಿ ನಗರ ಕ್ಷೇತ್ರದ ವಾರ್ಡ್‌ ಸಂಖ್ಯೆ 42ರಲ್ಲಿ (ಲಕ್ಷ್ಮಿದೇವಿ ನಗರ) ಗಂಗಾ ಎಂಟರ್‌ಪ್ರೈಸಸ್‌ ಎಂಬ ಹೆಸರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಮಾಡುತ್ತಿದ್ದು, 2021ರ ಸೆಪ್ಟೆಂಬರ್‌ನಲ್ಲಿ ಮುನಿರತ್ನ ಅಂಗರಕ್ಷಕ ವಿಜಯಕುಮಾರ್‌ ಅವರು ಕರೆ ಮಾಡಿ ಶಾಸಕರ ಕಚೇರಿಗೆ ಬರುವಂತೆ ಸೂಚಿಸಿದ್ದರು. ಘನತ್ಯಾಜ್ಯ ಸಂಗ್ರಹಣೆ ಕೆಲಸಕ್ಕೆ 10 ಆಟೊ ರಿಕ್ಷಾ ಕೊಡಿಸುತ್ತೇನೆ. ಅದಕ್ಕೆ 20 ಲಕ್ಷ ಕೊಡುವಂತೆ ಮುನಿರತ್ನ ಬೇಡಿಕೆ ಇಟ್ಟಿದ್ದರು. ಸ್ನೇಹಿತರ ಬಳಿ ಸಾಲ ಪಡೆದು 20 ಲಕ್ಷ ಪಡೆದು ಮುನಿರತ್ನ ಅವರಿಗೆ ಅಂಗರಕ್ಷಕನ ಮೂಲಕ ತಲುಪಿಸಿದ್ದೆ. ಎರಡು ದಿನಗಳ ಬಳಿಕ ವಿಚಾರಿಸಲಾಗಿ 10 ಆಟೊ ಹೆಚ್ಚುವರಿ ನೀಡುವುದಾಗಿ ಹೇಳಿ ವಂಚಿಸಿದ್ದಾರೆ” ಎಂದು ದೂರಿದ್ದಾರೆ.

“2023ರ ಸೆಪ್ಟೆಂಬರ್‌ನಲ್ಲಿ ಆಪ್ತ ಸಹಾಯಕ ಅಭಿಷೇಕ್‌ನಿಂದ ಕರೆ ಮಾಡಿಸಿ ಕಚೇರಿಗೆ ಕರೆಯಿಸಿ, 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಲಕ್ಷ ರೂಪಾಯಿಯನ್ನು ಸಾಲ ಪಡೆದು ಹೊಂದಿಸಿಕೊಡುತ್ತೇನೆ ಎಂದು ತಿಳಿಸಿದ್ದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಹಣ ತಂದುಕೊಂಡುವಂತೆ ಸೂಚಿಸಿದ್ದರು. ಮತ್ತೆ ಕಚೇರಿಗೆ ಕರೆಯಿಸಿದ್ದು, ಹಣ ತಂದಿಲ್ಲ ಎಂದಾಗ ಮುಖದ ಮೇಲೆ ಹಲ್ಲೆ ನಡೆಸಿದ್ದರು” ಎಂದು ಚೆಲುವರಾಜು ಆರೋಪಿಸಿದ್ದಾರೆ.

“ಐದು ವರ್ಷ ನಾನು ಶಾಸಕನಾಗಿರುತ್ತೇನೆ. ಹೇಳಿದಂತೆ ನಡೆಯದಿದ್ದರೆ, ಹಣ ತಂದು ಕೊಡದಿದ್ದರೆ ಬೇರೆಯವರಿಗೆ ಗುತ್ತಿಗೆ ಕೆಲಸ ನೀಡಲಾಗುವುದು” ಎಂದು ಬೆದರಿಕೆ ಹಾಕಿದ್ದರು. ಅದಾದ ಮೇಲೆ ತುರ್ತಾಗಿ ಏಳು ದಿನಗಳ ಅಲ್ಪಾವಧಿಗೆ ಗುತ್ತಿಗೆ ಕರೆದು ಕಾರ್ಯಾದೇಶ ನೀಡುವಂತೆ ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದರು. ಹಣ ಕೊಡದಿದ್ದಕ್ಕೆ ಅಭಿಷೇಕ್‌, ವಿಜಯಕುಮಾರ್‌ ಅವರೂ ಹಲ್ಲೆ ಮಾಡಿದ್ದರು ಎಂದು ಚೆಲುವರಾಜು ದೂರಿದ್ದಾರೆ.