ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ತೋಟಗಾರಿಕೆ ಮತ್ತು ಯೋಜನಾ ಸಚಿವ ವಿ ಮುನಿರತ್ನ ಅವರು 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸೇರಿದಂತೆ 19 ಮಂದಿಯ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.
ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಅವರ ಮೂಲಕ ದಾಖಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿರುವ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಕೃಷ್ಣಯ್ಯ ಅವರು ಆದೇಶ ಮಾಡಿದ್ದಾರೆ.
ಕಮಿಷನ್ ಅಥವಾ ಪರ್ಸೆಂಟೇಜ್‌ಗೆ ಸಂಬಂಧಿಸಿದಂತೆ ಫಿರ್ಯಾದಿಯಾಗಿರುವ ಸಚಿವ ಮುನಿರತ್ನ ಅವರ ವಿರುದ್ಧ ಯಾವುದೇ ತೆರನಾದ ಸುಳ್ಳು ಹೇಳಿಕೆ, ಆರೋಪ ಅಥವಾ ಆಪಾದನೆಯನ್ನು ಪ್ರತಿವಾದಿಗಳಾದ ಡಿ ಕೆಂಪಣ್ಣ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಉಪಾಧ್ಯಕ್ಷರಾದ ವಿ ಕೃಷ್ಣ ರೆಡ್ಡಿ, ಎಂ ಎಸ್ ಸಂಕ ಗೌಡಶನಿ, ಕೆ ಎಸ್ ಶಾಂತೇಗೌಡ, ಕೆ ರಾಧಾಕೃಷ್ಣ ನಾಯಕ್, ಆರ್ ಮಂಜುನಾಥ್, ಆರ್ ಅಂಬಿಕಾಪತಿ, ಬಿ ಸಿ ದಿನೇಶ್, ಸಿ ಡಿ ಕೃಷ್ಣ, ಕಾರ್ಯದರ್ಶಿ ಜಿ ಎಂ ರವೀಂದ್ರ, ಖಜಾಂಚಿ ಎಚ್ ಎಸ್ ನಟರಾಜ್, ಜಂಟಿ ಕಾರ್ಯದರ್ಶಿಗಳಾದ ಎಂ ರಮೇಶ್, ಎನ್ ಮಂಜುನಾಥ್, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ್ ಬಿ. ಶೆಗಜಿ, ಸುರೇಶ್ ಎಸ್ ಭೋಮ ರೆಡ್ಡಿ, ಕೆ ಎ ರವಿಚಂಗಪ್ಪ, ಬಿ ಎಸ್ ಗುರುಸಿದ್ದಪ್ಪ, ಕರ್ಲೆ ಇಂದ್ರೇಶ್ ಅವರು ಪ್ರಕಟ, ಪ್ರಸಾರ ಮಾಡದಂತೆ ಮುಂದಿನ ವಿಚಾರಣೆಯವರೆಗೆ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ. ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
2022ರ ಆಗಸ್ಟ್ 24ರಂದು ಕೆಂಪಣ್ಣ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಗೆ ಭೇಟಿ ನೀಡಿ ಸಭೆ ನಡೆಸಿದ್ದರು. ಅಲ್ಲಿಂದ ಬಂದು ಕೆಂಪಣ್ಣ ಮತ್ತು ಇತರೆ 17 ಮಂದಿ ಮಾಧ್ಯಮ ಗೋಷ್ಠಿ ನಡೆಸಿದ್ದರು. ಇಲ್ಲಿ, ಬಿಜೆಪಿ ಮತ್ತು ಅದರ ಶಾಸಕರು ಮತ್ತು ಸಚಿವರು ಶೇ.10ರಿಂದ ಶೇ. 40 ರಷ್ಟು ಕಮಿಷನ್‌ಗೆ ಗುತ್ತಿಗೆದಾರರಿಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಸುಳ್ಳು, ಮಾನಹಾನಿಕಾರಕವಾಗಿದ್ದು, ಫಿರ್ಯಾದಿ ಮುನಿರತ್ನ ಹೆಸರು ಮತ್ತು ಘನತೆಗೆ ಚ್ಯುತಿ ಉಂಟು ಮಾಡಿದೆ.
"ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು (ಮುನಿರತ್ನ) ಅಧಿಕಾರಿಗಳಿಗೆ ಹಣ ಸಂಗ್ರಹಿಸಿ, ತಲುಪಿಸುವಂತೆ ಬೆದರಿಕೆ ಹಾಕುತ್ತಿದ್ದು, ನೀವು (ಅಧಿಕಾರಿಗಳು) ಹಣ ಸಂಗ್ರಹಿಸದಿದ್ದರೆ, ಕೆಲಸ ಪರಿಶೀಲಿಸಿ, ಸಂಬಂಧಿತ ಕಾರ್ಯಕಾರಿ ಎಂಜಿನಿಯರ್ ಅವರನ್ನು ಅಮಾನತು ಮಾಡುತ್ತೇನೆ… ಇದರ ವಿರುದ್ಧ ಹೋರಾಡಬೇಕಿದ್ದು, ಶೇ.40ರಷ್ಟು ಕಮಿಷನ್ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂಬ ಹೇಳಿಕೆಯನ್ನು ಕೆಂಪಣ್ಣ ಅವರು ಇತರರ ಜೊತೆಗೂಡಿ ನೀಡಿದ್ದಾರೆ ಎಂದು ವಿವರಿಸಲಾಗಿದೆ.
“ಕಳೆದ ಮೂರು ವರ್ಷಗಳಿಂದ ಮಾಡಿರುವ ಕೆಲಸಕ್ಕೆ ಹಣ ಬಿಡುಗಡೆ ಮಾಡಿಲ್ಲದಿರುವಾಗ ಸಚಿವರು (ಮುನಿರತ್ನ) ಮೂರು ವರ್ಷಗಳ ಹಿಂದೆ ನಡೆಸಿರುವ ಕೆಲಸವನ್ನು ಯಂತ್ರಗಳ ಸಹಾಯದಿಂದ ಪರಿಶೀಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ತಮ್ಮ ಕ್ಷೇತ್ರ ರಾಜರಾಜೇಶ್ವರಿ ನಗರಕ್ಕೆ ಮುನಿರತ್ನ ಅವರು ಎರಡು ಅವಧಿಯಲ್ಲಿ 10 ಸಾವಿರ ಕೋಟಿ ರೂಪಾಯಿ ಕೆಲಸ ಮಾಡಿಸಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಯಾವ ರೀತಿಯ ಅಭಿವೃದ್ಧಿ ಮಾಡಲಾಗಿದೆ” ಎಂದು ಕೆಂಪಣ್ಣ ಮತ್ತು ತಂಡ ಪ್ರಶ್ನಿಸಿದೆ. ಇವೆಲ್ಲವೂ ಆಧಾರರಹಿತ-ಮಾನಹಾನಕಾರಿ ಹೇಳಿಕೆಗಳಾಗಿವೆ. ಕೆಂಪಣ್ಣ ಅವರು ಹೇಳಿರುವ ರೀತಿಯಲ್ಲಿ ತಾನು ಯಾವುದೇ ರೀತಿಯ ಪರ್ಸೆಂಟೇಜ್ ಅಥವಾ ಕಮಿಷನ್ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಯಾವುದೇ ಅಧಿಕಾರಿ ಅಥವಾ ಗುತ್ತಿಗೆದಾರರಿಗೆ ಹಣಕ್ಕಾಗಿ ಬೆದರಿಕೆ ಹಾಕಿಲ್ಲ. ಎರಡು ಅವಧಿಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿಲ್ಲ. ದುರುದ್ದೇಶದಿಂದ ತಮ್ಮ ಹೆಸರಿಗೆ ಚ್ಯುತಿ ಉಂಟು ಮಾಡಲು ಸುಳ್ಳು ಹೇಳಿಕೆ ನೀಡಲಾಗಿದೆ.
ಕೆಂಪಣ್ಣ ಮತ್ತು ಇತರರು ಮಾಧ್ಯಮ ಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳು ರಾಷ್ಟ್ರೀಯ ಸುದ್ದಿ ವಾಹಿನಿಗಳು ಸೇರಿದಂತೆ ಎಲ್ಲಾ ಕಡೆ ಪ್ರಸಾರವಾಗಿದೆ. ಇದರಿಂದ ತಮ್ಮ ಘನತೆಗೆ ಚ್ಯುತಿ ಉಂಟಾಗಿದ್ದು, ಇದರಿಂದ ಮಾನಸಿಕ ವೇದನೆ, ಒತ್ತಡ, ಸುಳ್ಳು ಆರೋಪಗಳಿಂದ ನೋವಾಗಿದೆ. ಆರೋಪಗಳಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳು ಪ್ರಶ್ನಿಸುತ್ತಿದ್ದು, ಅನುಮಾನದಿಂದ ನೋಡುತ್ತಿದ್ದಾರೆ.
ಎದುರಾಳಿ ರಾಜಕೀಯ ಪಕ್ಷಗಳ ಒತ್ತಾಸೆಯಿಂದ ಕೆಂಪಣ್ಣ ಮತ್ತು ಇತರರು ಆರೋಪ ಮಾಡಿದ್ದು, ಇದರಿಂದ ಕ್ಷೇತ್ರದ ಜನರು ಅನುಮಾನದಿಂದ ಪ್ರಶ್ನಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.
“ಭ್ರಷ್ಟಾಚಾರದ ವಿರುದ್ಧ ಕಳೆದ ಒಂದು ವರ್ಷ ಎರಡು ತಿಂಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಇದುವರೆಗೆ ಏನೂ ಬದಲಾವಣೆಯಾಗಿಲ್ಲ. ಎಲ್ಲಾ ಪಕ್ಷಗಳೂ ಭ್ರಷ್ಟಾಚಾರದಲ್ಲಿ ಮುಳುಗಿವೆ. ಭ್ರಷ್ಟತೆ ಕೇವಲ ಬಿಜೆಪಿ ಅಥವಾ ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಸೀಮಿತವಾಗಿಲ್ಲ. ಅವರೆಲ್ಲರೂ ನಾಚಿಕೆಗೆಟ್ಟವರು. ಅವರು ಪರ್ಸೆಂಟೇಜ್ ಕೇಳುತ್ತಾರೆ. ಇವರು ನಮ್ಮ ಜನಪ್ರತಿನಿಧಿಗಳು?” ಎಂದು ಕೆಂಪಣ್ಣ ಹೇಳಿಕೆ ನೀಡಿದ್ದರು. ಮೇಲಿನ ಹೇಳಿಕೆಯಲ್ಲಿ ಎದುರಾಳಿ ಪಕ್ಷಗಳೂ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಹೇಳಿದ್ದಾರೆ. ಮತ್ತೊಂದು ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಮಿಷನ್-ಪರ್ಸೆಂಟೇಜ್ ವಿಚಾರವಾಗಿ ಚರ್ಚಿಸಿರುವುದಾಗಿ ಕೆಂಪಣ್ಣನವರೇ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದೂ ಹೇಳಿದ್ದಾರೆ.
ಕೆಂಪಣ್ಣ ಅವರ ಪ್ರಕಾರ ಹಾಲಿ ವಿಪಕ್ಷ ಮತ್ತು ಎದುರಾಳಿ ಪಕ್ಷಗಳೂ ಭ್ರಷ್ಟವಾಗಿರುವಾಗ ವಿಪಕ್ಷ ನಾಯಕರನ್ನು ಭೇಟಿ ಮಾಡಿ, ಅವರ ಮಧ್ಯಪ್ರವೇಶ ಕೋರಿದ್ದೇಕೆ? ಮಾಧ್ಯಮ ಗೋಷ್ಠಿಯಲ್ಲಿ ಮುನಿರತ್ನ ಅವರನ್ನು ಗುರಿಯಾಗಿಸಿ ದಾಳಿ ನಡೆಸಿ, ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಗುತ್ತಿಗೆದಾರರಿಂದ ಹಣಕ್ಕೆ ಬೇಡಿಕೆ ಇಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿರುವುದರ ಕುರಿತು ಕೆಂಪಣ್ಣ ಮೆಚ್ಚುಗೆ ಸೂಚಿಸಿದ್ದಾರೆ. ಇಲ್ಲಿ ಸ್ಪಷ್ಟವಾಗುವುದೇನೆಂದರೆ ರಾಜಕೀಯ ಎದುರಾಳಿ ಪಕ್ಷದ ಜೊತೆಗೂಡಿ ಕೆಂಪಣ್ಣ ಮತ್ತು ಇತರರು ಕ್ರಿಮಿನಲ್ ಪಿತೂರಿ ನಡೆಸಿ, ಫಿರ್ಯಾದಿಯ ಹೆಸರು ಕೆಡಿಸಲು ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲಿ ಫಿರ್ಯಾದಿಯನ್ನು ಮಣಿಸುವ ಉದ್ದೇಶ ಹೊಂದಲಾಗಿದೆ.
ಲಂಚ ಆರೋಪಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಮತ್ತು ತಂಡವು ಯಾವುದೇ ಸಾಕ್ಷ್ಯ ಅಥವಾ ದಾಖಲೆ ನೀಡಿಲ್ಲ. ಬಿಬಿಎಂಪಿ ಮತ್ತು ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಫಿರ್ಯಾದಿ ಮತ್ತು ಸರ್ಕಾರವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಇದನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಹೀಗಾಗಿ, ಮಾನಹಾನಿ ಲೇಖನಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ಸಿದ್ದರಾಮಯ್ಯ ಅವರ ಜೊತೆಗಿನ ಸಭೆಯ ಸಂದರ್ಭದಲ್ಲಿ ಏನು ಚರ್ಚೆಯಾಗಿದೆ ಎಂಬುದನ್ನು ಕೆಂಪಣ್ಣ ಅವರು ಬಹಿರಂಗಪಡಿಸಬೇಕು. ಅಲ್ಲದೇ ಶೇ. 40ರಷ್ಟು ಕಮಿಷನ್ ಆರೋಪಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಜ್ಯಪಾಲರು, ಲೋಕಾಯುಕ್ತ ಅಥವಾ ಪ್ರಧಾನಿ ಕಚೇರಿಗೆ ಕಳುಹಿಸಬೇಕು. ಇಲ್ಲವಾದಲ್ಲಿ ಆ ದಾಖಲೆಗಳನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊಟ್ಟು ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ಮಾಡಿಕೊಡಬಹುದು. ಪ್ರತಿವಾದಿಗಳು ಆರೋಪಿಸಿರುವಂತೆ ಯಾವುದೇ ವಿವಾದದಲ್ಲಿ ಫಿರ್ಯಾದಿ ಭಾಗವಹಿಸಿಲ್ಲ. ಕೆಲವು ರಾಜಕೀಯ ಪಕ್ಷಗಳ ಜೊತೆ ಸೇರಿ ಕಮಿಷನ್ ಆರೋಪ ಮಾಡಲಾಗಿದೆ. ಈ ನಡೆಯು ಕ್ರಿಮಿನಲ್ ಸ್ವರೂಪದ್ದಾಗಿದ್ದು, ಪ್ರತಿವಾದಿಗಳು ಕ್ರಿಮಿನಲ್ ಮಾನಹಾನಿ ಎದುರಿಸಬೇಕು.
ಪ್ರತಿವಾದಿಗಳಿಗೆ 2022ರ ಆಗಸ್ಟ್ 29 ಮತ್ತು 30ರಂದು ಲೀಗಲ್ ನೋಟಿಸ್ ಜಾರಿ ಮಾಡಿ, ಮಾಧ್ಯಮಗಳಲ್ಲಿ ಬೇಷರತ್ ಕ್ಷಮೆ ಕೋರಿ ಜಾಹೀರಾತು ನೀಡಲು, ಮಾಧ್ಯಮ ಗೋಷ್ಠಿ ನಡೆಸಿ, ಎಲ್ಲಾ ಆರೋಪಗಳನ್ನು ಹಿಂಪಡೆಯಲು ಸೂಚಿಸಿಲಾಗಿತ್ತು. ಇಲ್ಲವಾದಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕ್ರಿಯೆಯನ್ನು ನ್ಯಾಯಾಲಯದಲ್ಲಿ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.
ಚಿತ್ರ ನಿರ್ಮಾಪಕರೂ ಆಗಿರುವ ಮುನಿರತ್ನ ಅವರು ಶ್ರೀ ಕೃಷ್ಣ ದೇವರಾಯ ಸಿನಿಮಾ ನಿರ್ಮಿಸುವ ಸಂಬಂಧ ಸಿದ್ಧತೆ ನಡೆಸಿದ್ದರು. ಕೆಂಪಣ್ಣ ಮತ್ತು ತಂಡ ಆರೋಪ ಮಾಡಿದ್ದರಿಂದ ಆ ಪ್ರಾಜೆಕ್ಟ್ ಆರಂಭವಾಗುವುದು ಅನುಮಾನವಾಗಿದೆ. ಆರೋಪ ಮಾಡುವುದಕ್ಕೂ ಮುನ್ನ ಇತರೆ ರಾಜ್ಯಗಳಲ್ಲಿ ಸಿನಿಮಾ ಹಂಚಿಕೆಗೆ ಹಂಚಿಕೆದಾರರು ಒಪ್ಪಿದ್ದರು. ಈಗ ಮಾನಹಾನಿ ಹೇಳಿಕೆಯಿಂದ ಅದಕ್ಕೆ ನಿರಾಕರಿಸಿದ್ದಾರೆ. ಐತಿಹಾಸಿಕ ಸಿನಿಮಾ ಪ್ರಾಜೆಕ್ಟ್‌ಗೆ ಒಡೆತ ಬಿದ್ದಿರುವುದರಿಂದ ಸುಮಾರು 100 ಕೋಟಿ ರೂಪಾಯಿ ನಷ್ಟ ಫಿರ್ಯಾದಿ ಮುನಿರತ್ನ ಅವರಿಗೆ ಆಗಿದೆ.
ನಾಲ್ಕು ದಶಕ ಶ್ರಮವಹಿಸಿ ಘನತೆ ಸಂಪಾದಿಸಿದ್ದು, ರಾಜಕೀಯ ಕ್ಷೇತ್ರದಲ್ಲಿ ಮುನಿರತ್ನ ಅವರು ಸೆಲೆಬ್ರಿಟಿಯಾಗಿದ್ದಾರೆ. ಮುನಿರತ್ನ ಘನತೆಯನ್ನು ಬ್ರ್ಯಾಂಡ್ ವ್ಯಾಲ್ಯು ರೂಪದಲ್ಲಿ ನೋಡಬೇಕಿದ್ದು, ಇದು ಸಾವಿರಾರು ಕೋಟಿ ರೂಪಾಯಿ ಬೆಲೆಬಾಳುತ್ತದೆ. ಹೀಗಾಗಿ, ಫಿರ್ಯಾದಿಯು ಮಾನಹಾನಿಗೆ ಸಂಬಂಧಿಸಿದಂತೆ ಹಾಲಿ ಪ್ರಕರಣದಲ್ಲಿ 50 ಕೋಟಿ ರೂಪಾಯಿ ಪರಿಹಾರ ಕೋರಿದ್ದಾರೆ. ರಾಜಕೀಯ, ಸಾಮಾಜಿಕ ಮತ್ತು ಸಿನಿಮಾ ಕ್ಷೇತ್ರದಲ್ಲಿ ಫಿರ್ಯಾದಿಯ ಘನತೆಗೆ ಹಾನಿಯಾಗಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮೂರು ಲಕ್ಷ ಮಂದಿ ಹಾಗೂ ಇತರೆ ಕಡೆ ಆರು ಲಕ್ಷ ಮಂದಿ ತಮ್ಮನ್ನು ಅನುಮಾನದಿಂದ ನೋಡುವಂತಾಗಿದೆ ಎಂದು ವಿವರಿಸಲಾಗಿದೆ.
2022ರ ಆಗಸ್ಟ್ 24ರಂದು ಕೆಂಪಣ್ಣ ಮತ್ತು ತಂಡವು ನಡೆಸಿರುವ ಮಾಧ್ಯಮ ಗೋಷ್ಠಿ, ಸಂದರ್ಶನವು ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಅದು ಮಾನಹಾನಿಕಾರಕ, ದುರುದ್ದೇಶಪೂರಿತ ಮತ್ತು ಕಾನೂನುಬಾಹಿರ ಎಂದು ಘೋಷಿಸಬೇಕು.
ಸಮಾಜದಲ್ಲಿ ಘನತೆ ಕುಂದುವ ಆರೋಪ ಮಾಡಿರುವುದಕ್ಕೆ, ಮಾನಸಿಕ ವೇದನ, ಒತ್ತಡ ಉಂಟು ಮಾಡಿರುವುದಕ್ಕೆ ಪ್ರತ್ಯೇಕ, ಜಂಟಿ ಅಥವಾ ಒಟ್ಟಾಗಿ ಐವತ್ತು ಕೋಟಿ ರೂಪಾಯಿ ನಷ್ಟ ತುಂಬಿಕೊಡಲು ನಿರ್ದೇಶಿಸಬೇಕು.
ಕೆಂಪಣ್ಣ ಅವರನ್ನು ಒಳಗೊಂಡು 19 ಮಂದಿ ಪ್ರತಿವಾದಿಗಳು, ಅವರ ಸಿಬ್ಬಂದಿ, ಏಜೆಂಟ್, ಪ್ರತಿನಿಧಿಗಳು, ಸಹೋದ್ಯೋಗಿ ಅಥವಾ ಬೇರೆ ಯಾರೂ ಕಮಿಷನ್ ಅಥವಾ ಪರ್ಸೆಂಟೇಜ್‌ಗೆ ಸಂಬಂಧಿಸಿದಂತೆ ಫಿರ್ಯಾದಿಯ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.