ತಮಿಳುನಾಡಿಗೆ ಪ್ರತಿದಿನ 15 ದಿನಗಳವರೆಗೆ 5,000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲುಎಂಎ) ಮಾಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ, ನೀರು ಹರಿಸಲೇಬೇಕಾದ ಸಂಕಷ್ಟ ಸ್ಥಿತಿಗೆ ಕರ್ನಾಟಕ ಸಿಲುಕಿದೆ.
ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಎಸ್ ನರಸಿಂಹ ಮತ್ತು ಪಿ ಕೆ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿತು.
ತಮಿಳುನಾಡು ಮತ್ತು ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ವಾದ ಆಲಿಸಿದ ನ್ಯಾಯಾಲಯವು “ಹಾಲಿ ಮಿಸಲೇನಿಯಸ್ ಅರ್ಜಿಗಳಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಪ್ರಾಧಿಕಾರಗಳು ಪ್ರತಿ 15 ದಿನಗಳಿಗೆ ಒಮ್ಮೆ ಸಭೆ ನಡೆಸಲಿವೆ” ಎಂದು ಆದೇಶಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಮುನ್ನ, ತಮಿಳುನಾಡು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ನಮಗೆ ಹೆಚ್ಚಿನ ನೀರು ಬೇಕು. ಅದೇ ದೊಡ್ಡ ವಿಷಯ. ಸಿಡಬ್ಲುಎಂಎ ವರದಿ ಪ್ರಕಾರ ನಮಗೆ ನೀರು ಬಿಡಬೇಕು. ನಮಗೆ 6,400 ಕ್ಯೂಸೆಕ್ಸ್ ನೀರು ಬಿಡಬೇಕು. ಸಿಡಬ್ಲುಎಂಎ 5000 ಕ್ಯೂಸೆಕ್ಸ್‌ಗೆ ರೌಂಡಪ್ ಮಾಡಿದೆ. ಸಿಡಬ್ಲುಆರ್‌ಸಿ 10,000 ಕ್ಯೂಸೆಕ್ಸ್ ಬಿಡಲು ಆನಂತರ 15,000 ಕ್ಯೂಸೆಕ್ಸ್ ಬಿಡಲು ಹೇಳಿದೆ. ಸಿಡಬ್ಲುಎಂಎ 10,000 ಕ್ಯೂಸೆಕ್ಸ್ ಅಂತಿಮಗೊಳಿಸಿದೆ. ನಮಗೆ ಈಗ 7,200 ಕ್ಯೂಸೆಕ್ಸ್ ಬಿಡಬೇಕು. ಅದು ಹೇಗೆ ಅವರು 5,000 ಕ್ಯೂಸೆಕ್ಸ್ ಬಿಡಲು ಹೇಳುತ್ತಿದ್ದಾರೆ” ಎಂದು ಪ್ರಶ್ನಿಸಿದರು.
ಮುಂದುವರಿದು, “ಬೇಡಿಕೆ 7,200 ಕ್ಯೂಸೆಕ್ಸ್ ಇರಬೇಕಾದರೆ ಅದನ್ನು ಶೇ. 25ಕ್ಕೆ ಇಳಿಕೆ ಮಾಡಲಾಗದು. ನಾವು 1,000-2,000 ಕ್ಯೂಸೆಕ್ಸ್ ಮಾತ್ರ ಕೊಡಲು ಸಾಧ್ಯ ಎಂದು ಕರ್ನಾಟಕ ಯಾವಾಗಲೂ ಹೇಳುತ್ತದೆ. ಪ್ರಾಧಿಕಾರವೇ 7,200 ಕ್ಯೂಸೆಕ್ಸ್ ಎಂದ ಮೇಲೆ ಅದನ್ನು ಇಳಿಸುವ ಪ್ರಶ್ನೆ ಎಲ್ಲಿ ಬರುತ್ತದೆ” ಎಂದು ಆಕ್ಷೇಪಿಸಿದರು.
ಕರ್ನಾಟಕ ಸರ್ಕಾರ ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು “ಸಿಡಬ್ಲುಎಂಎ ನಿರ್ದೇಶನದ ಬಗ್ಗೆ ನಮಗೆ ಆಕ್ಷೇಪವಿದೆ. ನಾವು ಹೆಚ್ಚಿನ ನೀರು ಬಿಡುಗಡೆ ಮಾಡಿದ್ದೇವೆ” ಎಂದರು.
ಈ ಮಧ್ಯೆ, ಪೀಠವು “ಕರ್ನಾಟಕ ಇಷ್ಟು ಮಾತ್ರ ಬಿಡುಗಡೆ ಮಾಡಲು ಸಾಧ್ಯ ಎಂದು ಹೇಳಿದೆ… ಪ್ರಾಧಿಕಾರ 5000 ಕ್ಯೂಸೆಕ್ಸ್ ಎಂದಿದೆ” ಎಂದರು.
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಐಶ್ವರ್ಯಾ ಭಾಟಿ ಅವರು ಸಿಡಬ್ಲುಎಂಎ ವರದಿಯಲ್ಲಿನ ಅಂಶ ಓದಿ ವಿವರಿಸಿದರು. ಇದನ್ನು ಆಲಿಸಿದ ಪೀಠವು “ನಾವು ಇದರಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಪ್ರತಿ 15 ದಿನಗಳಿಗೆ ಒಮ್ಮೆ ನಾವು ಅದರ ಮೇಲೆ ನಿಗಾ ಇಡುತ್ತೇವೆ. ಪ್ರಾಧಿಕಾರಗಳು ಪ್ರತಿ 15 ದಿನಗಳಿಗೆ ಒಮ್ಮೆ ಸಭೆ ನಡೆಸಲಿವೆ” ಎಂದು ಹೇಳಿ, ವಿಚಾರಣೆ ಮುಂದೂಡಿತು.