ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ತಮಿಳುನಾಡು ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಹೂಡಿರುವ ದಾವೆಯಲ್ಲಿ ಮಧ್ಯಪ್ರವೇಶಕಾರರನ್ನಾಗಿಸುವಂತೆ ಕೋರಿ ಹಿರಿಯ ವಕೀಲ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹಾಗೂ ಬೆಂಗಳೂರಿನ ಇತರೆ ಎಂಟು ಸಂಸ್ಥೆಗಳು ಅರ್ಜಿ ಸಲ್ಲಿಸಿವೆ.
ಬೆಂಗಳೂರಿನ ಸ್ಯಾಂಕಿ ಉದ್ಯಾನವನ ನಡಿಗೆಗಾರರ ಸಂಘ, ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ, ಎಂಬೆಸಿ ಹೆರಿಟೇಜ್ ಅಪಾರ್ಟ್‌ಮೆಂಟ್ ಓನರ್ಸ್ ಅಸೋಸಿಯೇಶನ್, ಪೂರ್ವ ಏಟ್ರಿಯಾ ನಿವಾಸಿಗಳ ಕಲ್ಯಾಣ ಸಂಸ್ಥೆ, ಗೌರಿ ಅಪಾರ್ಟ್‌ಮೆಂಟ್ಸ್ ಮಾಲೀಕರ ಸಂಸ್ಥೆ, ಲಕ್ಸುರಿಯಾ ಅಪಾರ್ಟ್‌ಮೆಂಟ್ ಮಾಲೀಕರ ಕಲ್ಯಾಣ ಸಂಸ್ಥೆ, ಸಂಪೂರ್ಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಎಂಎಸ್‌ಆರ್ ನಗರ ನಿವಾಸಿಗಳ ಕಲ್ಯಾಣ ಸಂಸ್ಥೆ ಮತ್ತು ಮಲ್ಲೇಶ್ವರಂ ಕಮರ್ಷಿಯಲ್ ಫೋರಂ ಮಧ್ಯಪ್ರವೇಶಕ್ಕೆ ಕೋರಿವೆ.
ತಮಿಳುನಾಡು, ಕರ್ನಾಟಕ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ಆರ್ ಗವಾಯಿ, ಪಿ ಎಸ್ ನರಸಿಂಹ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಲಿದೆ.
ಮಳೆಯ ಕೊರತೆಯಿಂದ ಒಳ ಹರಿವು ಕಡಿಮೆ ಇದ್ದರೂ ಆಗಸ್ಟ್ 29ರಂದು ಸಿಡಬ್ಲುಎಂಎ 5,000 ಕ್ಯೂಸೆಕ್ಸ್ ನೀರನ್ನು ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಲೆಕ್ಕಕ್ಕೆ ಸಿಗುವಂತೆ ಮುಂದಿನ 15 ದಿನಗಳವರೆಗೆ ಹರಿಸುವಂತೆ ಕರ್ನಾಟಕಕ್ಕೆ ಆಗಸ್ಟ್ 29ರಂದು ಆದೇಶಿಸಿತ್ತು. ಇದನ್ನು ಸಿಡಬ್ಲುಆರ್‌ಸಿ ಮತ್ತು ಸಿಡಬ್ಲುಎಂಎ ತುರ್ತು ಸಭೆ ನಡೆಸಿ ಆಗಸ್ಟ್ 29ರ ಆದೇಶವನ್ನು ಎತ್ತಿ ಹಿಡಿದಿವೆ. ಇದನ್ನು ರಾಜ್ಯ ಸರ್ಕಾರ ಪಾಲಿಸಿದೆ. ಹೀಗೆ ಮಾಡುವುದರಿಂದ ಕರ್ನಾಟಕದ ಜಲಾಶಯಗಳಲ್ಲಿ ನೀರು ಬರಿದಾಗಲಿದ್ದು, ಇದರಿಂದ ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ. ಬರ ಪರಿಸ್ಥಿತಿ ಎದುರಾಗಲಿದೆ ಎಂದು ಆಕ್ಷೇಪಿಸಲಾಗಿದೆ.
ಆಗಸ್ಟ್ 29ರ ಸಿಡಬ್ಲುಆರ್‌ಸಿ ಆದೇಶದ ಪ್ರಕಾರ ಮುಂದಿನ 15 ದಿನಗಳವರೆಗೆ ತಮಿಳುನಾಡಿಗೆ ನೀರು ಹರಿಸಿದರೆ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಪ್ರಸಕ್ತ ಸಾಲಿನ ಉಳಿದ ತಿಂಗಳುಗಳಿಗೆ ಬೆಂಗಳೂರು ಸೇರಿ ಕುಡಿಯುವ ನೀರು ಮತ್ತು ನೀರಾವರಿ ಬೇಸಾಯಕ್ಕೆ 140 ಟಿಎಂಸಿ ನೀರು ಬೇಕಾಗಲಿದೆ. ಆದರೆ, ಆಗಸ್ಟ್ 11ರ ವೇಳೆಗೆ 83.03 ಟಿಎಂಸಿ ಅಡಿ ನೀರು ಮಾತ್ರ ಇದೆ. ಉಳಿದ ತಿಂಗಳಲ್ಲಿ 49 ಟಿಎಂಸಿ ಅಡಿ ಒಳ ಅರಿವು ಇರಲಿದೆ. ಇಷ್ಟಾದರೂ ಕನಿಷ್ಠ ನೀರು ಅಗತ್ಯ ಪೂರೈಕೆಯಾವುದಿಲ್ಲ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿ 200.360 ಟಿಎಂಸಿ ನೀರಿನ ಅಗತ್ಯವಿದೆ. ಆಗಸ್ಟ್ 11ರ ವೇಳೆಗೆ ಕರ್ನಾಟಕವು ತನ್ನ ಜಲಾಶಯಗಳಿಂದ 7.209 ಟಿಎಂಸಿ ನೀರನ್ನು ಮಾತ್ರ ಪಡೆದಿದೆ. ಇದಕ್ಕೆ ವಿರುದ್ಧವಾಗಿ ತಮಿಳುನಾಡು ತನ್ನ ಜಲಾಶಯಗಳಲ್ಲಿ ಹೆಚ್ಚಿನ ನೀರನ್ನು ಬಳಕೆ ಮಾಡಿಕೊಂಡಿರುವುದರಿಂದ ತಮಿಳುನಾಡಿಗೆ ನೀರಿನ ಕೊರತೆ ಉಂಟಾಗಿದೆ ಎಂದು ವಿವರಿಸಲಾಗಿದೆ.
ಕರ್ನಾಟಕದಲ್ಲಿ 16 ಜಿಲ್ಲೆಗಳಲ್ಲಿ ತೀವ್ರ ಬರ ಇದ್ದು, ತಮಿಳುನಾಡಿಗೆ ಪ್ರತಿದಿನ 24 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬಾರದು. ತಮಿಳುನಾಡು ತನ್ನ ಜಲಾಶಯಗಳಲ್ಲಿ ಶೇಖರಿಸಿಟ್ಟುಕೊಂಡಿರುವ ನೀರನ್ನು ಮರಳಿ ತರಲಾಗುವುದಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ನೂಲಿ ಮತ್ತು ನೂಲಿ ಅಡ್ವೊಕೇಟ್ಸ್ ಸಂಸ್ಥೆಯು ವಕಾಲತ್ತು ಹಾಕಿದೆ.