Jana Nayagan Movie 
ಸುದ್ದಿಗಳು

ಮದ್ರಾಸ್‌ ಹೈಕೋರ್ಟ್‌ನಿಂದ ಅರ್ಜಿ ಹಿಂಪಡೆದ ಜನ ನಾಯಗನ್‌ ನಿರ್ಮಾಪಕರು: ಸಿಬಿಎಫ್‌ಸಿ ಅಂಗಳಕ್ಕೆ ಚಿತ್ರ

ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿಯು ಈಗ ಚಲನಚಿತ್ರವನ್ನು ಪರಿಶೀಲಿಸಿ ಅದಕ್ಕೆ ಯಾವ ಪ್ರಮಾಣಪತ್ರ ನೀಡಬೇಕು ಎಂದು ನಿರ್ಧರಿಸಲಿದೆ.

Bar & Bench

ತಮಿಳು ನಟ, ರಾಜಕಾರಣಿ ವಿಜಯ್ ನಟನೆಯ ‘ಜನ ನಾಯಗನ್' ನಿರ್ಮಾಪಕರು, ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸುವಂತೆ ಸಿಬಿಎಫ್‌ಸಿ ತೆಗೆದುಕೊಂಡಿದ್ದ ನಿರ್ಧಾರ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ಹಿಂಪಡೆದಿದ್ದಾರೆ. ಪರಿಣಾಮ ಸಿಬಿಎಫ್‌ಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ [ ಕೆವಿಎನ್‌ ಪ್ರೊಡಕ್ಷನ್ಸ್‌  ಮತ್ತು ಸಿಬಿಎಫ್‌ಸಿ ನಡುವಣ ಪ್ರಕರಣ]

ಪ್ರಕರಣವನ್ನು ಸಂಕ್ಷಿಪ್ತವಾಗಿ ಆಲಿಸಿದ ನ್ಯಾಯಮೂರ್ತಿ ಪಿ ಟಿ ಆಶಾ ಅವರು ಅರ್ಜಿ ಹಿಂಪಡೆಯಲು ಅನುಮತಿ ನೀಡಿದರು.

ಪರಿಣಾಮ ಸಿಬಿಎಫ್‌ಸಿಯ ಪರಿಷ್ಕರಣಾ ಸಮಿತಿ ಈಗ ಚಿತ್ರ ಪರಿಶೀಲಿಸಿ ಅದಕ್ಕೆ ವಯಸ್ಕರ ಪ್ರಮಾಣಪತ್ರ (ಎ ಪ್ರಮಾಣಪತ್ರ), ಅನಿಯಂತ್ರಿತ ಪ್ರಮಾಣಪತ್ರ (ಯು) ಅಥವಾ ವಯಸ್ಕರ ನಿಗಾವಣೆಯಡಿಯಲ್ಲಿನ ಪ್ರಮಾಣಪತ್ರ (ಯು/ಎ ಪ್ರಮಾಣಪತ್ರ) ಇವುಗಳಲ್ಲಿ ಯಾವ ಪ್ರಮಾಣಪತ್ರ ನೀಡಬೇಕು ಎಂದು ನಿರ್ಧರಿಸಲಿದೆ.

ಹಿಂಸೆಯ ಚಿತ್ರಣ, ಹೊಡೆದಾಟದ ದೃಶ್ಯಗಳು ಹಾಗೂ ಕೆಲವು ಧಾರ್ಮಿಕ ಉಲ್ಲೇಖಗಳ ಹಿನ್ನೆಲೆಯಲ್ಲಿ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡಲು ಸಿಬಿಎಫ್‌ಸಿ ಪರಿಶೀಲನಾ ಸಮಿತಿ ಶಿಫಾರಸ್ಸು ಮಾಡಿತ್ತು. ಅದು ಹೇಳಿದ ಬದಲಾವಣೆಗಳನ್ನು ನಿರ್ಮಾಪಕರು ಮಾಡಿದ್ದರು. ಆದರೂ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಮತ್ತು ರಕ್ಷಣಾ ಪಡೆಗಳ ಚಿತ್ರಣ ಕುರಿತು ಬಂದ ದೂರಿನ ಆಧಾರದಲ್ಲಿ ಚಿತ್ರವನ್ನು ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗಿತ್ತು. ನಂತರ ಪರಿಶೀಲನಾ ಸಮಿತಿಯ ಓರ್ವ ಸದಸ್ಯರೇ ಈ ದೂರು ನೀಡಿರುವುದು ಬಹಿರಂಗವಾಗಿತ್ತು.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್‌ನ ಏಕಸದಸ್ಯ ಪೀಠ ಮೊದಲಿಗೆ ಚಿತ್ರ ಬಿಡುಗಡೆಗೆ ಅನುಮತಿ ನೀಡಿದ್ದರೂ, ವಿಭಾಗೀಯ ಪೀಠವು ಆ ಆದೇಶವನ್ನು ರದ್ದುಪಡಿಸಿ ಪ್ರಕರಣವನ್ನು ಮರುಪರಿಶೀಲನೆಗೆ ಕಳುಹಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ಇಂದು ಪ್ರಕರಣ ಮತ್ತೆ ಏಕಸದಸ್ಯ ನ್ಯಾಯಮೂರ್ತಿಯ ಮುಂದೆ ಬಂದಾಗ, ನಿರ್ಮಾಪಕರು ತಮ್ಮ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದರು.

ವಿಜಯ್ ಅವರ ಪೂರ್ಣಾವಧಿ ರಾಜಕೀಯ ಪ್ರವೇಶವಾಗುತ್ತಿರುವುದರಿಂದ ಅವರ ಕೊನೆಯ ಚಿತ್ರ ಎನ್ನಲಾದ 'ಜನ ನಾಯಗನ್' ಪೊಂಗಲ್‌ ಹಬ್ಬದ ಹೊಸ್ತಿಲಿನಲ್ಲಿ ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸಿಬಿಎಫ್‌ಸಿ ಚಿತ್ರಕ್ಕೆ ಅನುಮತಿ ನೀಡಲು ನಿರಾಕರಿಸಿದ ನಂತರ ಬಿಡುಗಡೆ ವಿಳಂಬವಾಗಿತ್ತು.