ಜನ ನಾಯಗನ್ ಸೆನ್ಸಾರ್‌ಶಿಪ್ ವಿವಾದ: ತೀರ್ಪು ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್
ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರ ಬಿಡುಗಡೆಗೆ ಸೆನ್ಸಾರ್ ಅನುಮತಿಯನ್ನು ಕೂಡಲೇ ನೀಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಆದೇಶಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಿಬಿಎಫ್‌ಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಸಿದ ತೀರ್ಪನ್ನು ಮದ್ರಾಸ್ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ [ಸಿಬಿಎಫ್‌ಸಿ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಡುವಣ ಪ್ರಕರಣ].
ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತು.
ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂಬ ಕಾರಣ ಆಧರಿಸಿ ಜನವರಿ 9ರಂದು, ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿತ್ತು.
ನಂತರ, ಸೆನ್ಸಾರ್ ಅನುಮತಿ ಪಡೆಯುವಲ್ಲಿನ ವಿಳಂಬದ ಕುರಿತು ಆ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಜನವರಿ 15ರಂದು ನಿರಾಕರಿಸಿತ್ತು.
ವಿಜಯ್ ಅವರ ಪೂರ್ಣಾವಧಿ ರಾಜಕೀಯ ಪ್ರವೇಶವಾಗುತ್ತಿರುವುದರಿಂದ ಅವರ ಕೊನೆಯ ಚಿತ್ರ ಎನ್ನಲಾದ 'ಜನ ನಾಯಗನ್' ಪೊಂಗಲ್ ಹಬ್ಬದ ಹೊಸ್ತಿಲಿನಲ್ಲಿ ಜನವರಿ 9 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಸಿಬಿಎಫ್ಸಿ ಚಿತ್ರಕ್ಕೆ ಅನುಮತಿ ನೀಡಲು ನಿರಾಕರಿಸಿದ ನಂತರ ಬಿಡುಗಡೆ ವಿಳಂಬವಾಗಿದೆ.
ಹಿನ್ನೆಲೆ
ಜನ ನಾಯಗನ್ ನಿರ್ಮಾಪಕರು 2025 ಡಿಸೆಂಬರ್ 18ರಂದು ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಸಿಬಿಎಫ್‌ಸಿ ಪರಿಶೀಲನಾ ಸಮಿತಿಯು ವೈಯಕ್ತಿಕ ವಿಚಾರಣೆಯ ನಂತರ, ಹಿಂಸಾಚಾರ, ಹೋರಾಟದ ದೃಶ್ಯಗಳು, ರಕ್ತಪಾತದ ದೃಶ್ಯಗಳು ಹಾಗೂ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ಉಲ್ಲೇಖಗಳನ್ನು ಉಲ್ಲೇಖಿಸಿ ಕೆಲವು ದೃಶ್ಯಗಳನ್ನು ತೆಗೆದು ಹಾಕುವಂತೆ ಸೂಚಿಸಿತ್ತು. ಹಾಗೆ ಮಾಡಿದರೆ ಚಿತ್ರಕ್ಕೆ ಯುಎ 16+ ಪ್ರಮಾಣ ಪತ್ರ ನೀಡುವಂತೆ ಶಿಫಾರಸ್ಸು ಮಾಡಿತ್ತು. ಸೂಚಿಸಿದ್ದ ಎಲ್ಲಾ ತಿದ್ದುಪಡಿ ಮಾಡಿದ್ದ ನಿರ್ಮಾಪಕರು ಚಿತ್ರದ ಹೊಸ ಆವೃತ್ತಿಯನ್ನು ಸಲ್ಲಿಸಿದ್ದರು. ನಂತರ ಚಿತ್ರಕ್ಕೆ ಯುಎ 16+ ಪ್ರಮಾಣಪತ್ರ ನೀಡಲಾಗುವುದು ಎಂದು ಅವರಿಗೆ ತಿಳಿಸಲಾಗಿತ್ತು.
ಇಷ್ಟೆಲ್ಲಾ ಆದರೂ ಧಾರ್ಮಿಕ ಭಾವನೆಗಳು ಮತ್ತು ಸಶಸ್ತ್ರ ಪಡೆಗಳ ಚಿತ್ರಣಕ್ಕೆ ಸಂಬಂಧಿಸಿದ ದೂರು ಬಂದಿರುವುದರಿಂದ ಚಲನಚಿತ್ರ (ಪ್ರಮಾಣೀಕರಣ) ನಿಯಮಾವಳಿ 24ರ ಅಡಿ ಚಿತ್ರವನ್ನು ಮರುಪರಿಶೀಲನಾ ಸಮಿತಿಗೆ ಕಳುಹಿಸಲಾಗಿದೆ ಎಂಬ ಇಮೇಲ್ ತಮಗೆ ಬಂದಿರುವುದನ್ನು ನಿರ್ಮಾಪಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿಬಿಎಫ್‌ಸಿ ಶಿಫಾರಸಿಗೆ ಅನುಗುಣವಾಗಿ ಚಿತ್ರ ಬಿಡುಗಡೆಗೆ ಸಿಬಿಎಫ್‌ಸಿ ಕೂಡಲೇ ಅನುಮತಿ ನೀಡಬೇಕೆಂದು ಜನವರಿ 9ರ ಬೆಳಿಗ್ಗೆ ಆದೇಶಿಸಿತ್ತು. ಚಿತ್ರ ನಿರ್ಮಾಪಕರು ಈಗಾಗಲೇ ಸಿಬಿಎಫ್‌ಸಿ ಸೂಚಿಸಿದಂತೆ ಕೆಲ ದೃಶ್ಯಗಳನ್ನು ತೆಗೆದು ಹಾಕಿರುವುದರಿಂದ ನ್ಯಾಯಾಲಯ ಸಿಬಿಎಫ್‌ಸಿಗೆ ಯು/ಎ 16 ಪ್ರಮಾಣಪತ್ರವನ್ನು ತಕ್ಷಣವೇ ನೀಡುವಂತೆ ನ್ಯಾ. ಪಿ ಟಿ ಆಶಾ ಅವರಿದ್ದ ಏಕಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು.
ಇದಾದ ಕೆಲವೇ ಗಂಟೆಗಳಲ್ಲಿ ಸಿಬಿಎಫ್‌ಸಿಯು ಆದೇಶವನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ವಿಭಾಗೀಯ ಪೀಠವನ್ನು ಕೋರಿತ್ತು. ವಾದ ಆಲಿಸಿದ್ದ ವಿಭಾಗೀಯ ಪೀಠ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಎಂ ಎಂ ಶ್ರೀವಾಸ್ತವ ನೇತೃತ್ವದ ವಿಭಾಗೀಯ ಪೀಠ ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಿ ಮಧ್ಯಂತರ ಆದೇಶ ಪ್ರಕಟಿಸಿತ್ತು. ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡಿಲ್ಲ ಎಂಬ ಕಾರಣ ಆಧರಿಸಿ ತಡೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳ ತಲುಪಿತ್ತು. ತಾನು ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.


