ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಆಗಿನ ಐಎಚ್‌ಎಫ್‌ಎಲ್- ಪ್ರಸ್ತುತ ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್) ಭಾಗಿಯಾಗಿರುವ ದೊಡ್ಡ ಪ್ರಮಾಣದ ಹಣಕಾಸು ಅಕ್ರಮಗಳ ಆರೋಪವನ್ನು ವಿವಿಧ ತನಿಖಾ ಸಂಸ್ಥೆಗಳು ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ [ಸಿಟಿಜನ್ಸ್ ವಿಷಲ್ ಬ್ಲೋವರ್ ಫೋರಮ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಸಿಬಿಐ, ಇ ಡಿ, ಗಂಭೀರ ವಂಚನೆ ತನಿಖಾ ಕಚೇರಿ (ಎಸ್ಎಫ್ಐಒ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಹಿರಿಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ , ಉಜ್ಜಲ್ ಭುಯಾನ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ತಿಳಿಸಿತು. ಆದರೆ ಸಮ್ಮಾನ್ ವಿರುದ್ಧದ ಆರೋಪಗಳ ಅರ್ಹತೆಯ ಬಗ್ಗೆ ತಾನು ಯಾವುದೇ ಅಭಿಪ್ರಾಯವ್ಯಕ್ತಪಡಿಸಿಲ್ಲ ಎಂದು ಅದು ಸ್ಪಷ್ಟಪಡಿಸಿತು.
ಎಸ್‌ಐಟಿ ರಚನೆಯ ಬಗ್ಗೆ ನಿರ್ಧರಿಸಲು ಎರಡು ವಾರಗಳಲ್ಲಿ ತನಿಖಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ಕರೆಯಲು ಕ್ರಮ ತೆಗೆದುಕೊಳ್ಳಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಸಮ್ಮಾನ್ ನಿಂದ ಸಾರ್ವಜನಿಕ ನಿಧಿಯ ದುರುಪಯೋಗ, ವಿನಿಮಯ ಸಾಲ ವ್ಯವಸ್ಥೆಗಳು ಮತ್ತು ನಕಲಿ ಸಂಸ್ಥೆಗಳ ಮೂಲಕ ಹಣ ವರ್ಗಾವಣೆ ಆರೋಪದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಪ್ರಕರಣದಲ್ಲಿ ಸಿಬಿಐ ತೋರಿಸಿದಷ್ಟು ಸ್ನೇಹಪರ ಮನೋಭಾವವನ್ನು ನಾವು ಹಿಂದೆಂದೂ ನೋಡಿಲ್ಲ.ಸುಪ್ರೀಂ ಕೋರ್ಟ್
ಸಿಬಿಐ ಪ್ರಕರಣದ ಬಗ್ಗೆ ತೋರಿರುವ ನಿರ್ಲಕ್ಷ್ಯವನ್ನು ಅದರ ಅಸಹಜವೆನಿಸುವ ಸ್ನೇಹಪೂರ್ವಕ ವರ್ತನೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಸೆಬಿ ವರದಿ ಗಂಭೀರವಾಗಿದ್ದರೂ ಕಾರ್ಪೊರೇಟ್ ವ್ಯವಹಾರಗಳ ಸಚಿವಲಾಯ ಪ್ರಕರಣ ಮುಕ್ತಾಯಗೊಳಿಸಲು ಹಾತೊರೆದಿರುವುದನ್ನು ನ್ಯಾಯಾಲಯ ಪ್ರಶ್ನಿಸಿದೆ.
ಇದೇ ವೇಳೆ ಸೆಬಿ ವಿರುದ್ಧವೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆ ನಡೆಯಬೇಕು ಎಂದಾಗ ತನಗೆ ಅಧಿಕಾರ ಇಲ್ಲ ಎನ್ನುವುದು ಆದರೆ ಆಸ್ತಿ ವಶಪಡಿಸಿಕೊಳ್ಳುವ ವಿಚಾರದಲ್ಲಿ ಸಂಪೂರ್ಣ ಅಧಿಕಾರ ಇದೆ ಎನ್ನುವುದು ಹೀಗೆ ಅದು ಅನುಸರಿಸುತ್ತಿರುವ ದ್ವಂದ್ವದತ್ತ ಪೀಠ ಬೆರಳು ಮಾಡಿತು.
ಸಚಿವಾಲಯ ಪ್ರಕರಣವನ್ನು ಈ ಬಗೆಯಲ್ಲಿ ಮುಚ್ಚಿಹಾಕಲು ಹೊರಟಿದ್ದೇಕೆ? ಇದರಲ್ಲಿ ಸಚಿವಾಲಯದ ಆಸಕ್ತಿ ಏನು?ಸುಪ್ರೀಂ ಕೋರ್ಟ್
ಎಸ್‌ಐಟಿ ಮುಖ್ಯಸ್ಥರಾಗಿ ಪೊಲೀಸ್ ಮಹಾ ನಿರ್ದೇಶಕರಿಗಿಂತ ಕಡಿಮೆ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡದಂತೆ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ ಸೆಬಿ ವರದಿ ಹಾಗೂ ಸಂಬಂಧೀತ ದಾಖಲೆಗಳೊಂದಿಗೆ ಹೊಸ ದೂರನ್ನು ಸಿಬಿಐಗೆ ಇ ಡಿ ಸಲ್ಲಿಸಬೇಕು. ತನಿಖೆಯಲ್ಲಿ ತಾನು ನಡೆದುಕೊಂಡ ಬಗೆ ಬಗ್ಗೆ ಸಿಬಿಐ ಅಫಿಡವಿಟ್ ಸಲ್ಲಿಸಬೇಕು. ಈ ಹಿಂದೆ ನೀಡಿದ್ದ ದೂರನ್ನು ದೆಹಲಿ ಪೊಲೀಸರು ಸಂಜ್ಞೇಯ ಅಪರಾಧವಲ್ಲ ಎಂದು ತಿರಸ್ಕರಿಸಿದ್ದರ ಕಾರಣ ವಿವರಿಸಬೇಕು ಎಂದು ಅದು ಹೇಳಿದೆ ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 17ರಂದು ನಡೆಯಲಿದೆ.
ಸಿಟಿಜನ್ಸ್ ವಿಷಲ್ ಬ್ಲೋವರ್ ಫೋರಂ ಪರವಾಗಿ ವಕೀಲ ಪ್ರಶಾಂತ್ ಭೂಷಣ್, ಸಮ್ಮಾನ್ ಕ್ಯಾಪಿಟಲ್ ಪ್ರಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.