West Bengal post poll violence, Supreme Court 
ಸುದ್ದಿಗಳು

[ಚುನಾವಣೋತ್ತರ ಹಿಂಸಾಚಾರ] ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು: ಸುಪ್ರೀಂಗೆ ಪಶ್ಚಿಮ ಬಂಗಾಳ ಸರ್ಕಾರದ ವಿವರಣೆ

“ಪಶ್ಚಿಮ ಬಂಗಾಳದ ದೃಷ್ಟಿಯಿಂದ ಪ್ರಾಮಾಣಿಕವಾದ ಮತ್ತು ನಿಷ್ಪಕ್ಷಪಾತವಾದ ತನಿಖೆಯನ್ನು ಸಿಬಿಐನಿಂದ ನಿರೀಕ್ಷಿಸಲಾಗದು” ಎಂದು ರಾಜ್ಯ ಸರ್ಕಾರವು ಮೇಲ್ಮನವಿಯಲ್ಲಿ ಉಲ್ಲೇಖಿಸಿದೆ.

Bar & Bench

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಗಲಭೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯಿಂದ (ಸಿಬಿಐ) ತನಿಖೆ ನಡೆಸಲು ಆದೇಶಿಸಿರುವ ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು ಎಂದಿದೆ.

ರಾಜ್ಯದಲ್ಲಿ ಈ ಹಿಂದಿನ ಅನುಭವಗಳನ್ನು ಗಮನಿಸಿದರೆ ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡಲಾಗದು ಎನ್ನುವುದು ತಿಳಿದುಬರುತ್ತದೆ. ಸಿಬಿಐ ಅನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ರಾಜ್ಯದ ಪ್ರತಿನಿಧಿಗಳಿಗೆ ಕಿರುಕುಳ ನೀಡುವ ಸಾಧನವನ್ನಾಗಿ ಬಳಸಲಾಗಿದೆ. ಪಶ್ಚಿಮ ಬಂಗಾಳದ ದೃಷ್ಟಿಯಿಂದ ಪ್ರಾಮಾಣಿಕ ಮತ್ತು ನಿಷ್ಪಕ್ಷಪಾತವಾದ ತನಿಖೆಯನ್ನು ಸಿಬಿಐನಿಂದ ನಿರೀಕ್ಷಿಸಲಾಗದು. ಸ್ವಾತಂತ್ರ್ಯದ ಕೊರತೆಯಿಂದಾಗಿ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಸಿಬಿಐಗೆ ಛಾಟಿ ಬೀಸಿರುವುದು ಇಲ್ಲಿ ಉಲ್ಲೇಖನೀಯ. ಅಲ್ಲದೇ. ಸಿಬಿಐಯನ್ನು ಪಂಜರದ ಗಿಳಿ ಎಂದು ಸರಿಯಾಗಿ ವ್ಯಾಖ್ಯಾನಿಸಲಾಗಿದೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸಮಯಕ್ಕೆ ಸರಿಯಾಗಿ ಆರೋಪ ಪಟ್ಟಿ ಸಲ್ಲಿಸುವುದು ಮತ್ತು ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ಸಿಬಿಐ ಸಾಧನೆ ದಯನೀಯವಾಗಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದ್ದು, ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ತನಿಖೆ ನಡೆಸಲು ಸಿಬಿಐ ವಿಫಲವಾಗಿದೆ ಎಂದಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಆದೇಶವನ್ನೂ ಉಲ್ಲೇಖಿಸಲಾಗಿದೆ. ಪ್ರಕರಣಗಳನ್ನು ಸಿಬಿಐಗೆ ವಹಿಸಿರುವ ಕಲ್ಕತ್ತಾ ಹೈಕೋರ್ಟ್‌ ಆದೇಶವು ಸುಪ್ರೀಂ ಕೋರ್ಟ್‌ ರೂಪಿಸಿರುವ ತತ್ವಗಳಿಗೆ ಪೂರಕವಾಗಿಲ್ಲ ಎಂದು ವಾದಿಸಲಾಗಿದೆ.

ಎನ್‌ಎಚ್‌ಆರ್‌ಸಿ ನೇಮಿಸಿದ್ದ ಸಮಿತಿಯ ಮೇಲೆ ಪಕ್ಷಪಾತದ ಕರಿನೆರಳು

ಚುನಾವಣೋತ್ತರ ಗಲಭೆ ಪ್ರಕರಣಗಳ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾ. ಅರುಣ್‌ ಮಿಶ್ರಾ ಅವರು ನೇಮಿಸಿದ್ದ ಸಮಿತಿಯು ಪಕ್ಷಪಾತದಿಂದ ಕೂಡಿತ್ತು ಎಂದು ಪಶ್ಚಿಮ ಬಂಗಾಳ ಸರ್ಕಾರ ಹೇಳಿದೆ.

ಸಮಿತಿಯ ಸದಸ್ಯರು ಬಿಜೆಪಿ ಸದಸ್ಯರು ಅಥವಾ ಆ ಪಕ್ಷದ ಜೊತೆ ನಿಕಟ ಸಂಪರ್ಕ ಹೊಂದಿದ್ದವರಾಗಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದ್ದು, ಹೈಕೋರ್ಟ್‌ ನ್ಯಾ. ಸೌಮೇನ್‌ ಸೇನ್‌ ಅವರ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ. ಸಮಿತಿಗೆ ಸೇರಿಸಲ್ಪಟ್ಟಿರುವ ಇಬ್ಬರು ಸದಸ್ಯರ ಹೆಸರುಗಳನ್ನು ತಡೆಯಬಹುದಾಗಿದ್ದು, ಇದರಿಂದ ಸಕಾರಣವುಳ್ಳ ಪಕ್ಷಪಾತದ ಆರೋಪವನ್ನು ನಿಯಂತ್ರಿಸಬಹುದಾಗಿದೆ” ಎಂದು ನ್ಯಾ. ಸೇನ್‌ ಹೇಳಿದ್ದರು.

'ಚುನಾವಣೋತ್ತರ ಹಿಂಸಾಚಾರ' ಎನ್ನುವುದನ್ನು ವ್ಯಾಖ್ಯಾನಿಸಲಾಗಿಲ್ಲ

ಚುನಾವಣೋತ್ತರ ದೌರ್ಜನ್ಯದ ವ್ಯಾಖ್ಯಾನವನ್ನು ಹೈಕೋರ್ಟ್‌ ತನ್ನ ಆದೇಶದಲ್ಲಿ ವ್ಯಾಖ್ಯಾನಿಸಿಲ್ಲ. ಬದಲಿಗೆ ಅದನ್ನು ನಿರ್ಧರಿಸಲು ಸಿಬಿಐಗೆ ಬಿಟ್ಟಿದೆ ಎಂದು ಮೇಲ್ಮನವಿಯಲ್ಲಿ ಹೇಳಲಾಗಿದ್ದು, ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ ನಡೆದಿರುವ ದೌರ್ಜನ್ಯ ಪ್ರಕರಣಗಳು ಮತ್ತು ಫಲಿತಾಂಶದ ಜೊತೆ ನೇರ ಸಂಪರ್ಕ ಹೊಂದಿರುವ ದೂರುಗಳನ್ನು ಪರಿಗಣಿಸಬೇಕು ಎಂದು ಹೇಳಿರುವ ನ್ಯಾ. ಸೇನ್‌ ಅವರ ಪ್ರತ್ಯೇಕ ಅಭಿಪ್ರಾಯವನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ಯ ಪೊಲೀಸರು ಕಡಿಮೆ ಬಂಧನ ಸರಾಸರಿ ಹೊಂದಿದ್ದಾರೆ ಎನ್ನುವ ಹುಸಿ ಆರೋಪ

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಇದುವರೆಗೆ ಕೇವಲ ಶೇ. 3ರಷ್ಟು ಮಾತ್ರ ಬಂಧನ ಮಾಡಿದೆ ಎಂಬುದಕ್ಕೂ ರಾಜ್ಯ ಸರ್ಕಾರ ಆಕ್ಷೇಪಿಸಿದೆ. 1,429 ಪ್ರಕರಣಗಳಿಗೆ ಸಂಬಂಧಿಸಿದಂತೆ 8,852 ಆರೋಪಿಗಳಿದ್ದಾರೆ; 5,154 ಮಂದಿ ಬಂಧಿತರು/ಶರಣಾದವರು/ಜಾಮೀನಿನ ಮೇಲೆ ಹೊರಬಂದಿದ್ದಾರೆ; ಸಿಆರ್‌ಪಿಸಿ ಸೆಕ್ಷನ್‌ 41ಎ ಅಡಿ 2,989 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದರರ್ಥ ಬಂಧಿತರು/ಶರಣಾದವರು/ಜಾಮೀನಿನ ಮೇಲೆ ಹೊರಬಂದಿರುವವರು ಶೇ. 58 ಮಂದಿಯಾಗಿದ್ದಾರೆ. ಎನ್‌ಎಚ್‌ಆರ್‌ಸಿ ನೇಮಿಸಿರುವ ಸಮಿತಿ ಹೇಳಿರುವಂತೆ ಶೇ. 3ರಷ್ಟಲ್ಲ ಎಂದು ಹೇಳಲಾಗಿದೆ.

“ಪಿಐಎಲ್‌ಗಳನ್ನು ವಿಚಾರಣೆ ನಡೆಸಲು ವಿಭಾಗೀಯ ಪೀಠ ಏಕೆ ಸಮರ್ಥವಲ್ಲ ಎನ್ನುವುದಕ್ಕಾಗಲಿ ಹಾಗೂ ವಿಶೇಷ ಪೀಠವನ್ನು ಏಕೆ ರಚಿಸಲಾಯಿತು ಎನ್ನುವುದಕ್ಕಾಗಲಿ ಸಕಾರಣಗಳನ್ನು ನೀಡಲಾಗಿಲ್ಲ” ಎಂದು ಮೇಲ್ಮನವಿಯಲ್ಲಿ ಬೆರಳು ಮಾಡಲಾಗಿದೆ.

ಸಿಆರ್‌ಪಿಸಿ ಸೆಕ್ಷನ್‌ 154 (3)ರ ಅಡಿ ದೂರುದಾರರು ಪೊಲೀಸ್‌ ವರಿಷ್ಠಾಧಿಕಾರಿಯನ್ನು ಸಂಪರ್ಕಿಸಿಲ್ಲ, ಎನ್‌ಎಚ್‌ಆರ್‌ಸಿ ಸಮಿತಿ ವರದಿಯಲ್ಲಿ ವ್ಯತ್ಯಾಸಗಳು, ಮಾನವ ಹಕ್ಕುಗಳ ಸಂರಕ್ಷಣೆ ಕಾಯಿದೆ ನಿಬಂಧನೆಗಳಿಗೆ ಸಮಿತಿಯು ಅಗೌರವ ತೋರಿರುವುದು ಸೇರಿದಂತೆ ಹಲವಾರು ವಿಚಾರಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಕಲ್ಕತ್ತಾ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ರಾತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಮನವಿ ಸಲ್ಲಿಸಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯು ಇನ್ನಷ್ಟೇ ವಿಚಾರಣಾ ಸಂಖ್ಯೆ ನಿಗದಿಗೊಳಿಸಬೇಕಿದೆ.