ಕಲ್ಕತ್ತಾ ಹೈಕೋರ್ಟ್‌ ಹಂಗಾಮಿ ಸಿಜೆ ಬಿಂದಾಲ್‌ ವಜಾ ಕೋರಿ ಸಿಜೆಐ ರಮಣಗೆ ಪತ್ರ ಬರೆದ ಪಶ್ಚಿಮ ಬಂಗಾಳ ವಕೀಲರ ಪರಿಷತ್‌

ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಶಾಸಕ ಹಾಗೂ ಪಶ್ಚಿಮ ಬಂಗಾಳ ವಕೀಲರ ಪರಿಷತ್‌ ಅಧ್ಯಕ್ಷರಾಗಿರುವ ಅಶೋಕ್‌ ಕುಮಾರ್‌ ದೇಬ್‌ ಅವರು ಪತ್ರಕ್ಕೆ ಸಹಿ ಮಾಡಿದ್ದಾರೆ.
Rajesh Bindal and Calcutta High Court
Rajesh Bindal and Calcutta High Court

ಕಲ್ಕತ್ತಾ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್‌ ಬಿಂದಾಲ್‌ ಅವರನ್ನು ವಜಾ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಪಶ್ಚಿಮ ಬಂಗಾಳ ವಕೀಲರ ಪರಿಷತ್‌ ಕಟು ಶಬ್ದಗಳಿಂದ ಕೂಡಿದ ಪತ್ರ ಬರೆದಿದೆ.

ಹಲವು ಪ್ರಕರಣಗಳನ್ನು ವಿಚಾರಣೆಗೆ ನಿಗದಿ ಪಡಿಸುವಾಗ ಮತ್ತು ವಿಚಾರಣೆ ನಡೆಸುವಾಗ ನ್ಯಾ. ಬಿಂದಾಲ್‌ ಅವರು ಪಕ್ಷಪಾತ ನೀತಿ ಅನುಸರಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ನಾರದ ಹಗರಣದ ಮನವಿ, ಮಮತಾ ಬ್ಯಾನರ್ಜಿ ಚುನಾವಣಾ ಅರ್ಜಿ ಮತ್ತು ರಾಜ್ಯದಲ್ಲಿ ಔಷಧಗಳ ಕುರಿತಾದ ಮನವಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಾರದಾ ಪ್ರಕರಣದ ಪಟ್ಟಿಯನ್ನು ವಿಚಾರಣೆಗೆ ನಿಗದಿಗೊಳಿಸಿದ ರೀತಿಯ ಬಗ್ಗೆ ಪತ್ರದಲ್ಲಿ ಆಕ್ಷೇಪಿಸಲಾಗಿದ್ದು ಮತ್ತು ಅದರ ವಿಚಾರಣೆಯಲ್ಲಿ ನ್ಯಾ. ಬಿಂದಾಲ್‌ ಅವರು ಬಿಜೆಪಿಯ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. “ನ್ಯಾ. ಬಿಂದಾಲ್‌ ಪಕ್ಷಪಾತಿಯಾಗಿದ್ದು, ನ್ಯಾಯಸಮ್ಮತವಾಗಿ ನಡೆದುಕೊಂಡಿಲ್ಲ. ಅಲ್ಲದೇ ಅವರು ಪೂರ್ವಗ್ರಹಪೀಡಿತರಾಗಿದ್ದು, ಅವರು ಈ ನ್ಯಾಯಾಲಯದಲ್ಲಿ ಮುಂದುವರಿಯುವುದರಿಂದ ನ್ಯಾಯಸಮ್ಮತವಾಗಿ ಮತ್ತು ಪಕ್ಷಾತೀತವಾಗಿ ನ್ಯಾಯದಾನವಾಗುವುದಿಲ್ಲ” ಎಂದು ಆರೋಪಿಸಲಾಗಿದೆ.

ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಶಾಸಕ ಹಾಗೂ ಪಶ್ಚಿಮ ಬಂಗಾಳ ವಕೀಲರ ಪರಿಷತ್‌ ಅಧ್ಯಕ್ಷರಾಗಿರುವ ಅಶೋಕ್‌ ಕುಮಾರ್‌ ದೇಬ್‌ ಅವರ ಸಹಿಯನ್ನು ಪತ್ರವು ಹೊಂದಿದೆ.

ನಾರದ ಪ್ರಕರಣವನ್ನು ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಮನವಿಯನ್ನು ಅದರ ಕೋರಿಕೆಯಂತೆ ಮೊದಲಿಗೆ ಹೈಕೋರ್ಟ್‌ ವಿಚಾರಣೆಗೆ ಎತ್ತಿಕೊಂಡಿತ್ತು. ಇದನ್ನು ಆಧರಿಸಿ ಸಿಬಿಐ ವಿಶೇಷ ನ್ಯಾಯಾಲಯವು ಟಿಎಂಸಿಯ ನಾಲ್ವರು ನಾಯಕರಿಗೆ ನೀಡಿದ್ದ ಮಧ್ಯಂತರ ಜಾಮೀನು ಆದೇಶಕ್ಕೆ ತಡೆ ನೀಡಿತ್ತು ಎಂದು ಉಲ್ಲೇಖಿಸಲಾಗಿದೆ.

ನ್ಯಾ. ಬಿಂದಾಲ್‌ ಅವರ ನಡೆಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಅರಿಂದಮ್‌ ಸಿನ್ಹಾ ಅಸಮ್ಮತಿಸಿದ್ದು, ಈ ಸಂಬಂಧ ಪತ್ರವನ್ನೂ ಬರೆದಿದ್ದಾರೆ ಎಂದು ಪರಿಷತ್‌ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಅಫಿಡವಿಟ್‌ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಮಾಡಿದ ಮನವಿಗಳೆಲ್ಲವನ್ನೂ ಪುರಸ್ಕರಿಸಿದ್ದ ನ್ಯಾ. ಬಿಂದಾಲ್‌ ನೇತೃತ್ವದ ಪಂಚ ಪೀಠವು ತಮ್ಮ ವಿರುದ್ಧ ಸಿಬಿಐ ಗಂಭೀರ ಆರೋಪಗಳನ್ನು ಮಾಡಿದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕಾನೂನು ಸಚಿವ ಮೊಲೊಯ್‌ ಘಟಕ್‌ ಅವರಿಗೆ ಅಫಿಡವಿಟ್‌ ಸಲ್ಲಿಸಲು ಅವಕಾಶ ಮಾಡಿಕೊಡಲಿಲ್ಲ ಎಂದು ವಿವರಿಸಲಾಗಿದೆ.

ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್‌ ಧನಕರ್‌ ಅವರನ್ನು ನ್ಯಾ. ಬಿಂದಾಲ್‌ ಭೇಟಿ ಮಾಡಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆ ಮಾಡಲಾಗಿದೆ. “ನ್ಯಾ. ಬಿಂದಾಲ್‌ ನಡತೆ ಮತ್ತು ಅವರು ರಾಜ್ಯಪಾಲರ ಜೊತೆ ಇರುವ ಚಿತ್ರಗಳು ಧನಕರ್‌ ಅಣತಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಪೂರಕವಾಗಿದೆ” ಎಂದು ಹೇಳಲಾಗಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗುತ್ತಿರುವ ಚಿತ್ರಗಳು ನ್ಯಾ. ಬಿಂದಾಲ್‌ ಅವರು ಬಿಜೆಪಿ ಮನುಷ್ಯ ಎಂಬುದಕ್ಕೆ ಪುಷ್ಟಿ ಒದಗಿಸುತ್ತವೆ ಎಂದು ಆರೋಪಿಸಲಾಗಿದೆ.

ಅಲ್ಲದೇ, ಮಮತಾ ಬ್ಯಾನರ್ಜಿ ಅವರ ಚುನಾವಣಾ ಮನವಿಯನ್ನು ನ್ಯಾ. ಕೌಶಿಕ್‌ ಚಂದಾ ನೇತೃತ್ವದ ಪೀಠಕ್ಕೆ ನಿಗದಿಗೊಳಿಸಲಾಗಿತ್ತು ಎಂದು ಹೇಳಲಾಗಿದೆ. ಈ ಪ್ರಕರಣವನ್ನು ಮೊದಲಿಗೆ ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅವರ ನೇತೃತ್ವದ ಪೀಠದ ಮುಂದೆ ನಿಗದಿಗೊಳಿಸಲಾಗಿತ್ತು. “ನ್ಯಾ. ಬಿಂದಾಲ್‌ ಅವರು ನ್ಯಾ. ಭಟ್ಟಾಚಾರ್ಯ ಅವರ ಪೀಠದಿಂದ ಕಸಿದು ಅದನ್ನು ನ್ಯಾ. ಚಂದಾ ಪೀಠಕ್ಕೆ ನೀಡಿದರು” ಎಂದು ಆರೋಪಿಸಲಾಗಿದೆ.

Also Read
ನ್ಯಾ. ಚಂದಾ ಬಿಜೆಪಿ ಸಕ್ರಿಯ ಸದಸ್ಯರಾಗಿದ್ದರು: ಚುನಾವಣಾ ಅರ್ಜಿ ಮರುನಿಯೋಜನೆಗಾಗಿ ಕಲ್ಕತ್ತಾ ಹೈಕೋರ್ಟ್‌ಗೆ ಮಮತಾ ಪತ್ರ

ನ್ಯಾ. ಚಂದಾ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿರುವ ವಿಚಾರ ಮುನ್ನಲೆಗೆ ಬಂದಿದ್ದರಿಂದ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿತ್ತು. “ಹೀಗಾಗಿ, ನ್ಯಾ. ರಾಜೇಶ್‌ ಬಿಂದಾಲ್‌ ಅವರನ್ನು ವಜಾ ಮಾಡುವುದರಿಂದ ಕಲ್ಕತ್ತಾ ಹೈಕೋರ್ಟ್‌ನ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿದಂತಾಗುತ್ತದೆ” ಎಂದು ಮನವಿ ಮಾಡಲಾಗಿದೆ.

ನ್ಯಾ. ಬಿಂದಾಲ್‌ ಅವರನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ 2006ರಲ್ಲಿ ನೇಮಿಸಲಾಗಿತ್ತು. 2020ರ ಡಿಸೆಂಬರ್‌ನಲ್ಲಿ ಅವರನ್ನು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಾಡಾಖ್‌ಗೆ ಸಾಮಾನ್ಯವಾಗಿರುವ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿತ್ತು. ಪ್ರಸಕ್ತ ವರ್ಷದ ಜನವರಿಯಲ್ಲಿ ಅವರನ್ನು ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.

ಏಪ್ರಿಲ್‌ನಲ್ಲಿ ನ್ಯಾ. ಟಿ ಬಿ ರಾಧಾಕೃಷ್ಣನ್‌ ಅವರು ನಿವೃತ್ತರಾದ ಹಿನ್ನೆಲೆಯಲ್ಲಿ ನ್ಯಾ. ಬಿಂದಾಲ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com