CBI and Supreme Court  
ಸುದ್ದಿಗಳು

ಸಿಬಿಐ ಓತಪ್ರೋತ ತನಿಖೆ: ಕರ್ನಾಟಕ ಕಲ್ಲಿದ್ದಲು ಕಂಪನಿ ವಿರುದ್ಧದ ಆರೋಪ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಕ್ರಿಮಿನಲ್ ಹೊಣೆಗಾರಿಕೆ ಹೊರಿಸುವುದಕ್ಕಾಗಿ ಯಾವುದೇ ಸಮರ್ಥನೆ ಇಲ್ಲದೆ, ಸಿಎಜಿ ವರದಿ ಮೇಲೆ ಸಿಬಿಐ ಹೆಚ್ಚು ಅವಲಂಬಿತವಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

Bar & Bench

ಅಂತಿಮ ಹಂತ ತಲುಪದ ಲೆಕ್ಕಪರಿಶೋಧನೆಯನ್ನೇ ಆಧಾರವಾಗಿಟ್ಟುಕೊಂಡು ಗುತ್ತಿಗೆ ಒಪ್ಪಂದಗಳಲ್ಲಿ ಕ್ರಿಮಿನಲ್ ಉದ್ದೇಶ ಕಂಡುಕೊಂಡಿದ್ದ ಸಿಬಿಐ ಬಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ [ಕರ್ನಾಟಕ ಇಎಂಟಿಎ ಕೋಲ್‌ ಮೈನ್ಸ್‌ ಲಿಮಿಟೆಡ್‌ ಮತ್ತಿತರರು ಹಾಗೂ ಸಿಬಿಐ ನಡುವಣ ಪ್ರಕರಣ]

ಕರ್ನಾಟಕ ಇಎಂಟಿಎ ಕಲ್ಲಿದ್ದಲು ಗಣಿಗಳ ವಿರುದ್ಧದ ಭ್ರಷ್ಟಾಚಾರ ಆರೋಪ ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ಅಪರಾಧದ ಎಳೆ ಸೇರಿಸುವುದಕ್ಕಾಗಿ ಕಂಪನಿ ಒಪ್ಪಂದಗಳ ಷರತ್ತನ್ನು ಸಿಬಿಐ ತಪ್ಪಾಗಿ ಅರ್ಥೈಸಿದೆ ಎಂದು ಹೇಳಿದೆ.

ಸಿಎಜಿ ಆಡಿಟ್‌ ವರದಿ ಆಧರಿಸಿ ಓತಪ್ರೋತವಾಗಿ ತನಿಖೆ ನಡೆಸಿದ ಸಿಬಿಐ ಬಳಿಕ ಮೇಲ್ಮನವಿದಾರರಿಗೆ ಕ್ರಿಮಿನಲ್‌ ಉದ್ದೇಶ ಇತ್ತೆಂದು ಸಾಬೀತುಪಡಿಸಲು ಹಿಮ್ಮುಖವಾಗಿ ಕೆಲಸ ಮಾಡಲಾರಂಭಿಸಿತು ಎಂದು ನ್ಯಾಯಾಲಯ ಟೀಕಿಸಿದೆ.  

ಭ್ರಷ್ಟಾಚಾರ ತಡೆ ಕಾಯಿದೆಯಡಿ ತನ್ನ ವಿರುದ್ಧ ಆರೋಪ ನಿಗದಿಪಡಿಸಿದ್ದ ವಿಶೇಷ ನ್ಯಾಯಾಲಯದ ಆದೇಶ  ಪ್ರಶ್ನಿಸಿ ಕಂಪನಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಪ್ರಕರಣದಲ್ಲಿ ಕಂಪನಿ ಮತ್ತು ಅದರ ಅಧ್ಯಕ್ಷರನ್ನು ಆರೋಪಮುಕ್ತಗೊಳಿಸಲು ಕೆಳ ನ್ಯಾಯಾಲಯ ನಿರಾಕರಿಸಿತ್ತು.

ಕಲ್ಲಿದ್ದಲು ನಿಕ್ಷೇಪ ನಿರ್ವಹಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಸುವುದಕ್ಕಾಗಿ ಆಂತರಿಕ ಕಲ್ಲಿದ್ದಲು ಗಣಿಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ವಿದ್ಯುತ್‌ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್) ಮತ್ತು ಮೇಲ್ಮನವಿ ಸಲ್ಲಿಸಿರುವ ಕಂಪನಿ ನಡುವೆ ಒಪ್ಪಂದ ಏರ್ಪಟ್ಟಿತ್ತು.

ಕಲ್ಲಿದ್ದಲಿನ ಗುಣಮಟ್ಟ ಮತ್ತು ಪ್ರಮಾಣ, ಬೆಲೆ ಹೊಂದಾಣಿಕೆ, ಜೊತೆಗೆ ವಿಳಂಬ ಪೂರೈಕೆಗೆ ದಂಡ ವಿಧಿಸುವ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ನಂತರ ಈ ಒಪ್ಪಂದದ ವಿಚಾರವಾಗಿ ಭ್ರಷ್ಟಾಚಾರ ನಡೆದಿದೆ ಎಂದು ಮೇಲ್ಮನವಿದಾರ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ  ಆರೋಪ ಹೊರಿಸಲಾಯಿತು.

ಸಿಎಜಿ ವರದಿ ಆಧರಿಸಿ ಸಿಬಿಐ ಕ್ರಮ ಕೈಗೊಂಡಿದೆ. ₹ 52.37 ಕೋಟಿಯನ್ನು ಕೆಪಿಸಿಎಲ್‌ಗೆ ವರ್ಗಾಯಿಸಲು ಮೇಲ್ಮನವಿದಾರ ಕಂಪೆನಿ ವಿಫಲವಾಗಿದೆ ಎಂದು ಸಿಎಜಿ ವರದಿ ನುಡಿದಿತ್ತು. ಆದರೆ ಕಡಿಮೆ ಕ್ಯಾಲೋರಿಫಿಕ್ ಗುಣಮಟ್ಟ  ಹೊಂದಿರುವ ಕಲ್ಲಿದ್ದಲಿನ ಮೌಲ್ಯವನ್ನು ತಿರಸ್ಕರಿಸಲಾಗಿದೆ ಎಂದು ಕಂಪೆನಿ ಮತ್ತದರ ವ್ಯವಸ್ಥಾಪಕ ನಿರ್ದೇಶಕರು ವಾದಿಸಿದ್ದರು.

ತನಿಖೆ ಆರಂಭಿಸುವುದಕ್ಕಾಗಿ ಲೆಕ್ಕ ಪರಿಶೋಧನಾ ವರದಿಯನ್ನೇ ಚಿಮ್ಮುಹಲಗೆಯಾಗಿ ಸಿಬಿಐ ಬಳಸಿಕೊಂಡಿದ್ದು ನಂತರ ಆರೋಪ ರುಜುವಾತಿಗಾಗಿ ಹವಣಿಸಿತು ಎಂದಿರುವ ಸುಪ್ರೀಂ ಕೋರ್ಟ್‌ ಇದು (ಸಿಎಜಿ ವರದಿ) ಇನ್ನೂ ಸಂಸತ್ತು ಒಪ್ಪುವ ಇಲ್ಲವೇ ನಿರಾಕರಿಸಬಹುದಾದಂತಹ ಅಂತಿಮಗೊಳ್ಳದ ವರದಿಯಾಗಿದೆ ಎಂದಿತು.

ತಿರಸ್ಕೃತ ಕಲ್ಲಿದ್ದಲ್ಲನ್ನು ವಿಲೇವಾರಿ ಮಾಡಲು ಮೇಲ್ಮನವಿದಾರ ಕಂಪೆನಿ ಅಕ್ರಮ ಹಾದಿ ಹಿಡಿದಿಲ್ಲ ಎಂದು ಕೂಡ ಪೀಠ ಹೇಳಿದೆ. ತಿರಸ್ಕೃತ ಕಲ್ಲಿದ್ದಲು ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ದಿಷ್ಟ ಯೋಜನೆ ರೂಪಿಸಿಲ್ಲ ಎಂದ ಅದು ಹೇಳಿತು.

ಅಂತೆಯೇ ಮೇಲ್ಮನವಿಯನ್ನು ಪುರಸ್ಕರಿಸಿದ ಪೀಠ ಅರ್ಜಿದಾರ ವಿರುದ್ಧದ ಆರೋಪ ನಿಗದಿ ಆದೇಶವನ್ನು ರದ್ದುಗೊಳಿಸಿತು.  

ಕರ್ನಾಟಕ ಇಎಂಟಿಎ ಕಲ್ಲಿದ್ದಲು ಗಣಿ ಮತ್ತು ಅದರ ಮಾಜಿ ವ್ಯವಸ್ಥಾಪಕ ನಿರ್ದೇಶಕರನ್ನು ಹಿರಿಯ ವಕೀಲರಾದ ರಂಜಿತ್ ಕುಮಾರ್ ಮತ್ತು ಅಭಿಮನ್ಯು ಭಂಡಾರಿ ಪ್ರತಿನಿಧಿಸಿದ್ದರು. ಸಿಬಿಐ ಪರ ಹಿರಿಯ ವಕೀಲ ಆರ್.ಎಸ್.ಚೀಮಾ ವಾದ ಮಂಡಿಸಿದ್ದರು.