Anil Deshmukh, former Home Minister, Maharashtra 
ಸುದ್ದಿಗಳು

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಏನು ಹೇಳುತ್ತಿದೆ?

ಬಾಂಬೆ ಹೈಕೋರ್ಟ್ ಏಪ್ರಿಲ್ 5ರಂದು ನೀಡಿದ್ದ ಆದೇಶದಂತೆ ಪ್ರಾಥಮಿಕ ತನಿಖೆ ಕೈಗೊಂಡ ಸಿಬಿಐ ಶನಿವಾರ ದೇಶಮುಖ್ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ.

Bar & Bench

ಭ್ರಷ್ಟಾಚಾರ ಕುರಿತಂತೆ ಮುಂಬೈ ಮೂಲದ ವಕೀಲರಾದ ಡಾ. ಜೈಶ್ರೀ ಪಾಟೀಲ್‌ ಅವರು ದಾಖಲಿಸಿದ್ದ ದೂರನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿದ್ದ ಸಿಬಿಐ ಶನಿವಾರ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್‌ ಮತ್ತು ಇತರ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌, ಮುಂಬೈ ನಗರ ಮಾಜಿ ಪೊಲೀಸ್‌ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಮಾಡಿದ್ದ ಆರೋಪಗಳನ್ನಾಧರಿಸಿ ಪ್ರಾಥಮಿಕ ತನಿಖೆ ನಡೆಸುವಂತೆ ಏಪ್ರಿಲ್ 5ರಂದು ಸಿಬಿಐಗೆ ಆದೇಶಿಸಿತ್ತು.

15 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆಯಿಂದ ಹೊರಗುಳಿದಿದ್ದ ಮುಂಬೈನ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಸಚಿನ್ ವಜೆ ಮತ್ತೆ ಪೊಲೀಸ್ ಇಲಾಖೆಗೆ ಸೇರಿಸಿಕೊಳ್ಳಲಾಗಿತ್ತು ಮತ್ತು ನಗರದ ಅತ್ಯಂತ ಸೂಕ್ಷ್ಮ ಮತ್ತು ಪ್ರಕರಣಗಳನ್ನು ವಜೆ ಅವರಿಗೆ ವಹಿಸಲಾಗಿತ್ತು ಎಂಬ ಎರಡು ಸಂಗತಿಗಳು ದೇಶಮುಖ್‌ ಅವರಿಗೆ ತಿಳಿದಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ಹುದ್ದೆಗಳ ಮೇಲೆ ದೇಶಮುಖ್‌ ಅನಗತ್ಯ ಪ್ರಭಾವ ಬೀರಿದ್ದಾರೆ ಮತ್ತು ಅವರ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಉಲ್ಲೇಖಿಸಿ ಹೈಕೋರ್ಟ್‌ಗೆ ಸಿಂಗ್‌ ಅವರು ಸಲ್ಲಿಸಿದ ಅರ್ಜಿಯ ಸಂಗತಿಗಳನ್ನು ಸಿಬಿಐ ಆಧರಿಸಿದೆ.

ಸಾರ್ವಜನಿಕ ಕರ್ತವ್ಯ ನಿರ್ವಹಣೆ ವೇಳೆ ಅನುಚಿತ ಮತ್ತು ಅಪ್ರಾಮಾಣಿಕವಾಗಿ ವರ್ತಿಸಿ ಅನಗತ್ಯ ಲಾಭ ಪಡೆಯಲು ಯತ್ನಿಸಿದ ದೇಶಮುಖ್‌ ಮತ್ತು ಇತರ ಅನಾಮಧೇಯರು ಸಂಜ್ಞೇಯ ಅಪರಾಧ ಎಸಗಿದ್ದಾರೆ ಎಂದು ಎಫ್‌ಐಆರ್‌ ಹೇಳಿದೆ. ಅದರಂತೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸಿಬಿಐ ಉಪ ಪೊಲೀಸ್ ವರಿಷ್ಠಾಧಿಕಾರಿ ಆರ್ ಎಸ್ ಗುಂಜಿಯಾಲ್ ಎಫ್‌ಐಆರ್‌ ದಾಖಲಿಸುವಂತೆ ದೂರು ನೀಡಿದ್ದರು.