ಪ್ರತ್ಯೇಕತವಾದಿ ಹಾಗೂ ಭಯೋತ್ಪಾದನಾ ಪ್ರಕರಣದ ಅಪರಾಧಿ ಯಾಸೀನ್ ಮಲಿಕ್ ವಿರುದ್ಧ ಇರುವ ಎರಡು ಪ್ರಕರಣಗಳ ವಿಚಾರಣೆಯನ್ನು ಜಮ್ಮುವಿನಿಂದ ನವದೆಹಲಿಗೆ ವರ್ಗಾಯಿಸುವಂತೆ ಕೋರಿ ಸಿಬಿಐ ಮನವಿ ಮಾಡಿದ್ದು ಈ ಸಂಬಂಧ ಗುರುವಾರ ಸುಪ್ರೀಂ ಕೋರ್ಟ್ ಯಾಸೀನ್ ಮಲಿಕ್ ಪ್ರತಿಕ್ರಿಯೆ ಕೇಳಿದೆ [ಸಿಬಿಐ ಮತ್ತು ಮೊಹಮ್ಮದ್ ಯಾಸೀನ್ ಮಲಿಕ್ ನಡುವಣ ಪ್ರಕರಣ].
ಡಿಸೆಂಬರ್ 14ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಯಾಸೀನ್ ಮಲಿಕ್‌ಗೆ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಸೂಚಿಸಿತು.
ವಿಚಾರಣೆಗೆ ಮಲಿಕ್‌ನನ್ನು ಭೌತಿಕವಾಗಿ ಹಾಜರುಪಡಿಸಲು ಜಮ್ಮುವಿನ ವಿಶೇಷ ನ್ಯಾಯಾಲಯ ಆದೇಶ ನೀಡಿದ್ದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ನಾಲ್ವರು ಭಾರತೀಯ ವಾಯು ಸೇನಾ ಸಿಬ್ಬಂದಿಯ ಕೊಲೆ ಮತ್ತು 1989ರಲ್ಲಿ ಮಾಜಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರ ಅಪಹರಣ ಪ್ರಕರಣಗಳಲ್ಲಿ ಮಲಿಕ್‌ನನ್ನು ಪಾಟೀ ಸವಾಲಿಗೆ ಗುರಿಪಡಿಸಲು ಆತನನ್ನು ಭೌತಿಕವಾಗಿ ಹಾಜರುಪಡಿಸಲು ಜಮ್ಮು ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಆದರೆ ಜೈಲಿನಿಂದ ಸ್ಥಳಾಂತರಿಸಿ ಜಮ್ಮುವಿಗೆ ಕರೆದೊಯ್ದರೆ ಭದ್ರತಾ ಅಪಾಯಗಳಿವೆ ಎಂಬ ಕಾರಣಕ್ಕಾಗಿ ಅಧಿಕಾರಿಗಳು ಈ ಆದೇಶವನ್ನು ಪ್ರಶ್ನಿಸಿದ್ದರು.
ಈ ಪ್ರಕರಣಗಳಲ್ಲಿ ಭೌತಿಕವಾಗಿ ಪಾಟಿ ಸವಾಲು ನಡೆಸಲು ಜೈಲಿನಲ್ಲಿ ತಾತ್ಕಾಲಿಕ ನ್ಯಾಯಾಲಯ ಸ್ಥಾಪಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ಹಿಂದಿನ ವಿಚಾರಣೆ ವೇಳೆ ಸಲಹೆ ನೀಡಿತ್ತು.
ಇಂದು ಸಿಬಿಐ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಹಾರ್ ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಸೌಲಭ್ಯದೊಂದಿಗೆ ಸಂಪೂರ್ಣ ಕಾರ್ಯಾಚರಿಸಬಲ್ಲ ನ್ಯಾಯಾಲಯ ಈಗಾಗಲೇ ಇದೆ. ಹಿಂದೆಯೂ ಅಲ್ಲಿ ವಿಚಾರಣೆಗಳು ನಡೆದಿದ್ದವು ಎಂದು ತಿಳಿಸಿದರು.
ಮಲಿಕ್ ವಿರುದ್ಧದ ಪ್ರಕರಣಗಳನ್ನು ಜಮ್ಮುವಿನಿಂದ ದೆಹಲಿಗೆ ವರ್ಗಾಯಿಸುವುದು ಸೇರಿದಂತೆ ಎರಡು ಅರ್ಜಿಗಳನ್ನು ಸಿಬಿಐ ಸಲ್ಲಿಸಿದೆ ಎಂದು ಅವರು ಹೇಳಿದರು. ಹೊಸ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿತು.
ಇತ್ತೀಚೆಗೆ ಮಲಿಕ್ ತನಗೆ ಏಮ್ಸ್‌ನಲ್ಲಿ ಚಿಕಿತ್ಸೆ ಕೊಡಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅಧಿಕಾರಿಗಳು ತಮ್ಮ ದೈಹಿಕವಾಗಿ ಹಾಜರಾತಿಯನ್ನು ತಡೆಯುವುದಕ್ಕೆ ಸೆಕ್ಷನ್ 268ರ ಅನ್ವಯ ನ್ಯಾಯಾಲಯವು ನೀಡಿದ್ದ ಆದೇಶವೊಂದನ್ನು ಬಳಸುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್‌ನ ಗಮನಸೆಳೆದಿದ್ದರು. ಈ ಸೆಕ್ಷನ್ ಕೈದಿಗಳನ್ನು ಜೈಲಿನಿಂದ ಹೊರಗೆ ಕರೆತರುವುದನ್ನು ನಿರ್ಬಂಧಿಸುತ್ತದೆ.
ಹೀಗಾಗಿ, ಮಲಿಕ್ ಸೆಕ್ಷನ್ 268 ಅನ್ನು ಹಿಂಪಡೆಯುವಂತೆ ಆದೇಶಿಸಬೇಕೆಂದು ದೆಹಲಿ ಹೈಕೋರ್ಟ್ಅನ್ನು ಕೋರಿದ್ದರು. ನ್ಯಾಯಾಲಯಗಳು ಯಾವಾಗೆಲ್ಲಾ ತಮ್ಮ ದೈಹಿಕ ಹಾಜರಾತಿಯನ್ನು ಕೇಳುತ್ತವೆಯೋ ಆಗೆಲ್ಲ ದೈಹಿಕವಾಗಿ ಹಾಜರಾಗಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು.