Supreme Court, CCI and Amazon 
ಸುದ್ದಿಗಳು

ಅಮೆಜಾನ್, ಫ್ಲಿಪ್‌ಕಾರ್ಟ್‌ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಅಥವಾ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸಿಸಿಐ ಮನವಿ

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನ ಸ್ಪರ್ಧಾ-ವಿರೋಧಿ ನಡೆಗೆ ಸಂಬಂಧಿಸಿದ 24 ಅರ್ಜಿಗಳು ಕರ್ನಾಟಕ, ದೆಹಲಿ, ಪಂಜಾಬ್ ಹಾಗೂ ಅಲಾಹಾಬಾದ್ ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿವೆ.

Bar & Bench

ಇ- ವಾಣಿಜ್ಯ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ ಸ್ಪರ್ಧಾ-ವಿರೋಧಿ ನಡೆಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ 24 ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಇಲ್ಲವೇ ಯಾವುದಾದರೂ ಒಂದು ಹೈಕೋರ್ಟ್‌ಗೆ ವರ್ಗಾಯಿಸುವಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)  ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ತ್ವರಿತವಾಗಿ ತೀರ್ಪು ನೀಡುವಂತಾಗಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ತೀರ್ಪುಗಳು ಪ್ರಕಟವಾಗುವುದನ್ನು ತಡೆಯುವುದಕ್ಕಾಗಿ ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗಾಗಲೀ ಅಥವಾ ದೆಹಲಿ ಹೈಕೋರ್ಟ್‌ಗಾಗಲೀ ವರ್ಗಾಯಿಸಿಕೊಳ್ಳಬೇಕು ಎಂದು ಅದು ಕೋರಿದೆ.

ದೆಹಲಿ, ಪಂಜಾಬ್, ಕರ್ನಾಟಕ ಹಾಗೂ ಅಲಾಹಾಬಾದ್ ಹೈಕೋರ್ಟ್‌ಗಳಿಗೆ 24 ಅರ್ಜಿಗಳನ್ನು ಸಲ್ಲಿಸಲಾಗಿದೆ. ಮೊಬೈಲ್ ಫೋನ್‌ಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸ್ಪರ್ಧಾತ್ಮಕ ಕಾಯಿದೆ, 2002 ಅನ್ನುಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಮೊಕದ್ದಮೆಗಳನ್ನು ಹೂಡಲಾಗಿತ್ತು. ವಿಶೇಷವಾದ ಏರ್ಪಾಟು, ಭಾರೀ ರಿಯಾಯಿತಿ ಹಾಗೂ ಆದ್ಯತಾ ಪಟ್ಟಿಯಲ್ಲಿ ಪ್ರಭಾವ ಬೀರುವ ಮೂಲಕ ಇ-ಕಾಮರ್ಸ್ ಕಂಪನಿಗಳು ಸ್ಪರ್ಧಾ ಕಾಯಿದೆಯನ್ನು ಉಲ್ಲಂಘಿಸಿವೆ ಎಂದು ದೂರಲಾಗಿತ್ತು.

ತನಿಖೆಯಲ್ಲಿ ವಿಳಂಬ ತಪ್ಪಿಸುವುದು, ಕೆಲ ಸಾಮಾನ್ಯ ಕಾನೂನು ಪ್ರಶ್ನೆಗಳನ್ನು ಒಳಗೊಂಡಿರುವುದು, ವಿಚಾರಣೆ ಸ್ಥಗಿತವಾಗುವ ಆತಂಕ, ಗಡುವಿನೊಳಗೆ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಿರುವುದು, ವ್ಯತಿರಿಕ್ತ ತೀರ್ಪುಗಳು ಪ್ರಕಟವಾಗುವುದನ್ನು ತಪ್ಪಿಸುವುದು, ಸಂಪನ್ಮೂಲಗಳ ಅಪವ್ಯಯವಾಗದಂತೆ ಮಾಡುವುದು, ಸ್ಥಾಪಿತ ಕಾನೂನು ತತ್ವಗಳ ಪಾಲನೆ, ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ತಾನು ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲು ಕೋರುತ್ತಿರುವುದಾಗಿ ಸಿಸಿಐ ತಿಳಿಸಿದೆ.