BBMP Chief Commissioner Tushar Giri Nath and Karnataka HC
BBMP Chief Commissioner Tushar Giri Nath and Karnataka HC 
ಸುದ್ದಿಗಳು

ಅಕ್ರಮ ಕಟ್ಟಡ ನಿರ್ಮಾಣ ತಡೆಯುವ ಹೊಣೆ ಕೇಂದ್ರ, ವಲಯ ಕಚೇರಿ ಅಧಿಕಾರಿಗಳ ಹೆಗಲಿಗೆ: ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಕೆ

Bar & Bench

ನಕ್ಷೆ ಮಂಜೂರಾತಿ ಉಲ್ಲಂಘನೆ ಮತ್ತು ಅನಧಿಕೃತ ಕಟ್ಟಡಗಳ ನಿರ್ಮಾಣ ತಡೆಯುವ ಹೊಣೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಕೇಂದ್ರ ಕಚೇರಿ ಮತ್ತು ವಲಯ ಕಚೇರಿಗಳ ಅಧಿಕಾರಿಗಳಿಗೆ ವಹಿಸಲಾಗಿದೆ. ಈ ಜವಾಬ್ದಾರಿ ನಿರ್ವಹಣೆಯಲ್ಲಿ ವಿಫಲರಾಗುವವರ ವಿರುದ್ಧ ಶಿಸ್ತು ಕ್ರಮ ಜುರುಗಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ.

ಬೆಂಗಳೂರಿನ ನಿವಾಸಿಗಳಾದ ಪರೇಶ್ ಶಾ ಮತ್ತಿತರರು ಸಲ್ಲಿಸಿದ್ದ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಆರ್ ನಟರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಬಿಬಿಎಂಪಿ ಪ್ರತಿನಿಧಿಸಿದ್ದ ವಕೀಲರಾದ ಕೆ ಎನ್ ಪುಟ್ಟೇಗೌಡ ಅವರು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಅಫಿಡವಿಟ್‌ ಅನ್ನು ಪೀಠಕ್ಕೆ ಸಲ್ಲಿಸಿದರು.

ಸ್ವಾಧೀನಾನುಭವ ಅಫಿಡವಿಟ್‌ ಪಡೆಯುವ ಮುನ್ನ ಮತ್ತು ಪಡೆದ ನಂತರ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳು ಮತ್ತು ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡಗಳ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕಿದೆ. ಈ ಹೊಣೆಯನ್ನು ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳ ಸಹಾಯಕ, ಕಿರಿಯ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ ವಹಿಸಲಾಗಿದೆ. ಹಾಗೆಯೇ, ಕಟ್ಟಡ ನಿರ್ಮಾಣದ ನಂತರ ಕಂದಾಯ ವಸೂಲಿ ಮಾಡುವ ಜವಾಬ್ದಾರಿಯನ್ನೂ ಕಂದಾಯ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಧಿಕಾರಿಗಳು ಕಟ್ಟಡದ ಬೈಲಾ ಅನುಷ್ಠಾನವಾಗುವಂತೆ ಮತ್ತು ನಕ್ಷೆ ಮಂಜೂರಾತಿ ಅನುಸಾರವೇ ಕಟ್ಟಡ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು. ನಕ್ಷೆ ಮಂಜೂರಾತಿ ಉಲ್ಲಂಘಿಸಿ ಮತ್ತು ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಾಣ ಮಾಡುವ ಕಟ್ಟಡಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಒಂದೊಮ್ಮೆ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾದರೆ ಅಂತಹ ಅಧಿಕಾರಿಗಳಿಗೆ ಕರ್ನಾಟಕ ಮುನಿಸಿಪಲ್‌ ಕಾಯಿದೆ ಸೆಕ್ಷನ್ 321(ಬಿ) ಅಡಿಯಲ್ಲಿ ದಂಡ ವಿಧಿಸುವುದರ ಜೊತೆಗೆ ಸೇವೆಯಿಂದ ಅಮಾನತು ಮಾಡಲಾಗುವುದು. ಬಳಿಕ ಇಲಾಖೆ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.

ಅಲ್ಲದೆ, ಈ ಕುರಿತು ನಗರ ಯೋಜನೆಯ ವಿಭಾಗದ ಹೆಚ್ಚುವರಿ ನಿರ್ದೇಶಕರು, ಎಲ್ಲಾ ವಲಯಗಳ ಆಯುಕ್ತರು, ಎಂಜಿನಿಯರ್ ಮತ್ತು ಮುಖ್ಯ ಎಂಜಿನಿಯರ್ ಜೊತೆಗೆ ಚರ್ಚಿಸಿ ಜುಲೈ 6 ಮತ್ತು 21ರಂದು ಎರಡು ಪ್ರತ್ಯೇಕ ಸುತ್ತೋಲೆ ಹೊರಡಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಇದನ್ನು ದಾಖಲಿಸಿಕೊಂಡ ಪೀಠವು ಸುತ್ತೋಲೆ ಕುರಿತು ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತರಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿತು.