ಅಕ್ರಮ ಕಟ್ಟಡ ತೆರವು ಪ್ರಕರಣ: ಹಿರಿಯ ವಕೀಲ ಪ್ರಮೋದ್‌ ಕಠಾವಿ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿದ ಹೈಕೋರ್ಟ್‌

ಕಟ್ಟಡ ನೆಲಸಮ ಮಾಡುವಂತೆ 1,013 ಮಂದಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ವಾಸ್ತವದಲ್ಲಿ 13 ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಬಿಬಿಎಂಪಿ ಪರ ಹಿರಿಯ ವಕೀಲ ನಂಜುಂಡ ರೆಡ್ಡಿ ನ್ಯಾಯಾಲಯಕ್ಕೆ ತಿಳಿಸಿದರು.
BBMP and Karnataka HC
BBMP and Karnataka HC

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಮೋದ್‌ ಕಠಾವಿ ಅವರನ್ನು ಅಮಿಕಸ್‌ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ಸಹಾಯ ಮಾಡುವವರು) ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೇಮಕ ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರಿದ್ದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪ್ರಮೋದ್‌ ಕಠಾವಿ ಅವರಿಗೆ ನೀಡುವಂತೆ ರಿಜಿಸ್ಟ್ರಿಗೆ ಆದೇಶಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಬಿಎಂಪಿ ಪ್ರತಿನಿಧಿಸಿದ್ದ ಹಿರಿಯ ವಕೀಲ ನಂಜುಂಡ ರೆಡ್ಡಿ ಅವರು “ಬಿಬಿಎಂಪಿ ಪ್ರಾದೇಶಿಕ ಆಯುಕ್ತರ ಪ್ರತ್ಯೇಕ ಅಫಿಡವಿಟ್‌ಗಳನ್ನು ಒಳಗೊಂಡ ಅನುಪಾಲನಾ ವರದಿಯನ್ನು ಸಲ್ಲಿಸಿದ್ದೇವೆ. 2,386 ಕಟ್ಟಡಗಳ ಸಮೀಕ್ಷೆ ನಡೆಸಲಾಗಿದೆ. ಅನುಮತಿ ಉಲ್ಲಂಘಿಸಿರುವ 1,456 ಕಟ್ಟಡಗಳನ್ನು ಪತ್ತೆ ಹಚ್ಚಲಾಗಿದೆ. ಬಿಬಿಎಂಪಿ ಕಾಯಿದೆಯ ಸೆಕ್ಷನ್‌ 313ರ ಅಡಿ ದಾಖಲೆ ಸಲ್ಲಿಸುವಂತೆ 2,240 ಕಟ್ಟಡ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಬಿಬಿಎಂಪಿ ಕಾಯಿದೆಯ ಸೆಕ್ಷನ್‌ 248 (1) ಮತ್ತು (2)ರ ಅಡಿ ಪ್ರಾಥಮಿಕ ನೋಟಿಸ್‌ ಜಾರಿ ಮಾಡಲಾಗಿದೆ. ಬಳಿಕ ಅಂತಿಮ ನೋಟಿಸ್‌ ಸಹ ಜಾರಿ ಮಾಡಲಾಗಿದೆ” ಎಂದರು.

ಮುಂದುವರಿದು, “ಕಟ್ಟಡ ನೆಲಸಮ ಮಾಡುವಂತೆ 1,013 ಮಂದಿ ಅಕ್ರಮ ಕಟ್ಟಡ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ವಾಸ್ತವದಲ್ಲಿ 13 ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಬೇಸಿಗೆ ರಜೆಯ ಬಳಿಕ ಜೂನ್‌ ಮೊದಲ ವಾರದಲ್ಲಿ ಪ್ರಕರಣವನ್ನು ವಿಚಾರಣೆ ಕೈಗೆತ್ತುಕೊಳ್ಳಿ. ಅದರೊಳಗೆ ಇನ್ನೊಂದಷ್ಟು ಆದೇಶದ ಅನುಪಾಲನೆಯಾಗುತ್ತದೆ. ಅದನ್ನೂ ಅಮಿಕಸ್‌ ಕ್ಯೂರಿಗೆ ನೀಡಬಹುದಾಗಿದೆ” ಎಂದು ಮನವಿ ಮಾಡಿದರು.

ಈ ಮಧ್ಯೆ, ಮುಖ್ಯ ನ್ಯಾಯಮೂರ್ತಿ ಅವರು “ಬಿಬಿಎಂಪಿ ಅನುಮತಿ (ಸ್ಯಾಂಕ್ಷನ್‌ ಪ್ಲಾನ್‌) ಉಲ್ಲಂಘಿಸಿ ಮತ್ತು ಕೆಲವು ಕಡೆ ಅನುಮತಿ ಪಡೆಯದೇ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಎರಡು ವಿಧಗಳಿವೆ. ಈ ಕುರಿತು ಸಮೀಕ್ಷೆ ಮತ್ತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಆದೇಶಿಸಿಲಾಗಿತ್ತು. ಈ ಕುರಿತು ಅವರು ಮೆಮೊ ಸಲ್ಲಿಸಿದ್ದಾರೆ. ರಿಟ್‌ ಮನವಿ ಮತ್ತು ಅನುಪಾಲನಾ ವರದಿಗಳನ್ನು ನಿಮಗೆ ನೀಡುವಂತೆ ಆದೇಶಿಸಲಾಗುವುದು. ನೀವು ಅದನ್ನು ಅಧ್ಯಯನ ಮಾಡಿ ಅಮಿಕಸ್‌ ಕ್ಯೂರಿಯಾಗಿ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು” ಎಂದು ಪೀಠವು ಕಠಾವಿ ಅವರಿಗೆ ಸೂಚಿಸಿತು.

ಬಳಿಕ, ಹಿರಿಯ ವಕೀಲ ಪ್ರಮೋದ್‌ ಕಠಾವಿ ಅವರನ್ನು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಲಾಗಿದೆ. ರಿಜಿಸ್ಟ್ರಿಯು ಸಂಬಂಧ ಪಟ್ಟ ಎಲ್ಲಾ ದಾಖಲೆಗಳನ್ನು ಕಠಾವಿ ಅವರಿಗೆ ನೀಡಬೇಕು. ಬಿಬಿಎಂಪಿ ಮಾರ್ಚ್‌ 15ರಂದು ಸಲ್ಲಿಸಿರುವ ಸ್ಥಿತಿಗತಿ ವರದಿಯನ್ನು ಪರಿಗಣಿಸಲಾಗಿದೆ. ಮುಂದಿನ ವಿಚಾರಣೆಯ ವೇಳೆಗೆ ಕೆಲಸದ ಸ್ಥಿತಿಗತಿ ವರದಿಯನ್ನು ಸಲ್ಲಿಸಬೇಕು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರಿಗೆ ವಿಚಾರಣೆಯಲ್ಲಿ ಭಾಗವಹಿಸುವುದರಿಂದ ವಿನಾಯಿತಿ ನೀಡಲಾಗಿದ್ದು, ಜೂನ್‌ ಮೊದಲ ವಾರಕ್ಕೆ ವಿಚಾರಣೆ ಮುಂದೂಡಲಾಗಿದೆ ಎಂದು ಆದೇಶ ಮಾಡಿತು.

Also Read
ಕಾನೂನುಬಾಹಿರ ಕಟ್ಟಡ ತೆರವು ಪ್ರಕರಣ: ಬಿಬಿಎಂಪಿ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಹೈಕೋರ್ಟ್‌

ಕಳೆದ ವಿಚಾರಣೆಯ ಸಂದರ್ಭದಲ್ಲಿ “ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಕಟ್ಟಡಗಳ ಪತ್ತೆ, ನೆಲಸಮಕ್ಕೆ ಸಂಬಂಧಿಸಿದಂತೆ ನೀವು ಕಾರ್ಯ ಯೋಜನೆಯನ್ನು ಉತ್ತಮ ರೀತಿಯಲ್ಲಿ ಕಾಗದದ ಮೇಲೆ ಸಾದರಪಡಿಸಿದ್ದೀರಿ. ಆದರೆ, ವಾಸ್ತವಿಕವಾಗಿ ಏನು ಕ್ರಮಕೈಗೊಂಡಿದ್ದೀರಿ ಎಂಬುದು ತಿಳಿಯಬೇಕು. ನೀವು (ಬಿಬಿಎಂಪಿ) ವಿಶ್ವಾಸಾರ್ಹತೆ ಕಳೆದುಕೊಂಡಿದ್ದೀರಿ. ಇದು ನಿಮ್ಮ ಮೇಲೆ ನಂಬಿಕೆ ಮೂಡುವಂತೆ ಮಾಡುವುದಿಲ್ಲ” ಎಂದು ಬಿಬಿಎಂಪಿಗೆ ಪೀಠವು ಚಾಟಿ ಬೀಸಿತ್ತು.

“ಬೆಂಗಳೂರು ದಕ್ಷಿಣ ವಲಯದಲ್ಲಿ ಮೂರು ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ತಿಳಿಸಲಾಗಿದೆ. ನಿಮ್ಮನ್ನು ಎಚ್ಚರಿಸಿ ನಗರದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಿಮಗೆ ಅರಿವು ಮೂಡಿಸಲು ಈ ಪ್ರಯತ್ನ ಮಾಡಲಾಗುತ್ತಿದೆ. ನಿಮ್ಮ ಕೆಲಸ ಕಾಗದದ ಮೇಲೆ ಮಾತ್ರವಲ್ಲ ವಾಸ್ತವದಲ್ಲಿ ಬಿಂಬಿತವಾಗಬೇಕು. ಕಾನೂನುಬಾಹಿರ ಕಟ್ಟಡ ನೆಲಸಮ ಮಾಡುವಾಗ ಯಾವ ಕಟ್ಟಡ ಯಾರಿಗೆ ಸೇರಿದ್ದು ಎಂಬುದನ್ನು ತಿಳಿಸಬೇಕು. ಈ ಕುರಿತು ಒಂದೆರಡು ಉದಾಹರಣೆಗಳನ್ನು ನೀಡಬೇಕು. ಆಗ ನೀವು ಕ್ರಮ ಕೈಗೊಂಡಿದ್ದೀರಿ ಎಂಬುದು ನಮಗೆ ಅರಿವಾಗಲಿದೆ” ಎಂದು ಪೀಠವು ಹೇಳಿತ್ತು.

“ಕಾನೂನುಬಾಹಿರ ಕಟ್ಟಡಗಳನ್ನು ನೆಲಸಮ ಮಾಡಿ, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಬಿಬಿಎಂಪಿ ಕೋರಿಕೆಯಂತೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ವಿಚಾರಣೆಯ ಸಂದರ್ಭದಲ್ಲೂ ಬಿಬಿಎಂಪಿ ಮುಖ್ಯ ಆಯುಕ್ತರು ಹಾಜರಾಗಬೇಕು” ಎಂದು ಪೀಠ ಆದೇಶದಲ್ಲಿ ಹೇಳಿತ್ತು. ಅಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರೂ ವಿಚಾರಣೆಯಲ್ಲಿ ಭಾಗಿಯಾಗಿದ್ದರು.

Related Stories

No stories found.
Kannada Bar & Bench
kannada.barandbench.com