ಸುದ್ದಿಗಳು

ಕರ್ನಾಟಕ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ನೇಮಕ

ಕರ್ನಾಟಕ ಹೈಕೋರ್ಟ್‌ ಸಹಿತ ದೇಶದ ಐದು ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿದೆ.

Bar & Bench

ನ್ಯಾಯಮೂರ್ತಿ ವಿಭು ಭಕ್ರು ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ಕೇಂದ್ರ ಸರ್ಕಾರವು ಸೋಮವಾರ ಆದೇಶ ಹೊರಡಿಸಿದೆ. ಸಂವಿಧಾನದತ್ತವಾದ ತಮ್ಮ ಅಧಿಕಾರವನ್ನು ಬಳಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಕುರಿತು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ ಮಾತ್ರವೇ ಅಲ್ಲದೆ, ಮಧ್ಯಪ್ರದೇಶ, ಜಾರ್ಖಂಡ್,  ಗುವಾಹಟಿ ಹಾಗೂ ಪಾಟ್ನಾ ಹೈಕೋರ್ಟ್‌ಗಳಿಗೂ ಸಹ ನೂತನ ಮುಖ್ಯ ನ್ಯಾಯಮೂರ್ತಿಗಳನ್ನು ಇದೇ ವೇಳೆ ನೇಮಿಸಲಾಗಿದೆ.

Justices S Sachdeva, Tarlok Singh Chauhan, Vibhu Bakhru, Ashutosh Kumar, V M Pancholi

ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್‌ ಸಚ್‌ದೇವ, ಜಾರ್ಖಂಡ್ ಹೈಕೋರ್ಟ್‌ಗೆ ತಾರ್‌ಲೋಕ್‌ ಸಿಂಗ್ ಚೌಹಾಣ್, ಗುವಾಹಟಿ ಹೈಕೋರ್ಟ್‌ಗೆ ಅಶುತೋಷ್ ಕುಮಾರ್, ಪಾಟ್ನಾ ಹೈಕೋರ್ಟ್‌ಗೆ ವಿಪುಲ್ ಮನುಭಾಯ್ ಪಾಂಚೋಲಿ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.

ನ್ಯಾ. ಭಕ್ರು ಅವರ ಕಿರು ಪರಿಚಯ

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾ. ಬಖ್ರು ಅವರು 1966ರಲ್ಲಿ ನಾಗಪುರದಲ್ಲಿ ಜನಿಸಿದರು. ಅವರು ದೆಹಲಿಯ ಮಥುರಾ ರಸ್ತೆಯಲ್ಲಿರುವ ದೆಹಲಿ ಪಬ್ಲಿಕ್‌ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, 1987ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1989ರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿಯೂ ಅರ್ಹತೆ ಪಡೆದಿದ್ದರು. ಆನಂತರ 1990ರಲ್ಲಿ ಎಲ್‌ಎಲ್‌ಬಿ ಪದವಿ ಪಡೆದು, ಅದೇ ವರ್ಷ ದೆಹಲಿ ವಕೀಲರ ಪರಿಷತ್‌ನಲ್ಲಿ ವಕೀಲರಾಗಿ ನೋಂದಣಿ ಮಾಡಿಸಿದ್ದರು.

ನ್ಯಾ. ಭಕ್ರು ಅವರು ವಕೀಲರಾಗಿದ್ದ ಅವಧಿಯಲ್ಲಿ ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌, ಕಂಪನಿ ಕಾನೂನು ಮಂಡಳಿ ಮತ್ತು ಇತರೆ ನ್ಯಾಯ ಮಂಡಳಿಗಳಲ್ಲಿ ವಕೀಲಿಕೆ ಮಾಡಿದ್ದಾರೆ. 2011ರಲ್ಲಿ ಹಿರಿಯ ವಕೀಲರಾಗಿ ಅವರು ಪದೋನ್ನತಿ ಪಡೆದಿದ್ದರು. 2013ರ ಏಪ್ರಿಲ್‌ 17ರಂದು ದೆಹಲಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು 2015ರ ಮಾರ್ಚ್‌ 18ರಂದು ಕಾಯಂಗೊಂಡಿದ್ದರು.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ಕೊಲಿಜಿಯಂ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗೆ ಈ ಮೇಲಿನ ಹೆಸರುಗಳನ್ನು ಶಿಫಾರಸ್ಸುಗಳನ್ನು ಮಾಡಿತ್ತು.