ಸುದ್ದಿಗಳು

ಕೊಲಿಜಿಯಂ ಪದೇ ಪದೇ ಹೇಳಿದರೂ ಕೇಂದ್ರ ಸರ್ಕಾರ ನ್ಯಾಯಮೂರ್ತಿಗಳ ನೇಮಕ ಮಾಡುತ್ತಿಲ್ಲ: ಸುಪ್ರೀಂ

Bar & Bench

ಕೊಲಿಜಿಯಂ ಶಿಫಾರಸ್ಸುಗಳನ್ನು ಅಂಗೀಕರಿಸದೆ ಕೇಂದ್ರ ಸರ್ಕಾರ ನ್ಯಾಯಾಂಗ ನೇಮಕಾತಿಗಳನ್ನು ತಡೆಹಿಡಿಯುತ್ತಿದ್ದು ಕೊಲಿಜಿಯಂ ತನ್ನ ಶಿಫಾರಸುಗಳನ್ನು ಪುನರುಚ್ಚರಿಸಿದರೂ ನೇಮಕಾತಿ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಹೀಗೆ ಮಾಡುವುದರ ಮೂಲಕ ಕೊಲಿಜಿಯಂ ಶಿಫಾರಸು ಮಾಡಿರುವ ವ್ಯಕ್ತಿಗಳನ್ನು ನೇಮಕಾತಿಯಿಂದ ಹಿಂದೆಗೆದುಕೊಳ್ಳುವಂತೆ ಸರ್ಕಾರ ಪರೋಕ್ಷವಾಗಿ ಒತ್ತಾಯಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎ ಎಸ್ ಓಕಾ ಅವರ ಪೀಠ ಅಭಿಪ್ರಾಯಪಟ್ಟಿತು.

ನೇಮಕಾತಿಗೆ ಶಿಫಾರಸು ಮಾಡಲಾದ ಹೆಸರುಗಳನ್ನು ಅಂಗೀಕರಿಸಲು ಕೇಂದ್ರ ವಿಫಲವಾಗುತ್ತಿರುವುದು ಎರಡನೇ ನ್ಯಾಯಾಧೀಶರ ಪ್ರಕರಣದಲ್ಲಿ ನೀಡಲಾದ ತೀರ್ಪಿಗೆ ನೇರ ವಿರುದ್ಧವಾಗಿದೆ ಎಂದು ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಆದೇಶ ನೀಡಲಾಗಿದೆ.

ಶಿಫಾರಸು ಮಾಡುವ ಮೂಲಕ ಅಥವಾ ಪುನರಚ್ಚರಿಸುವ ಮೂಲಕ ನೇಮಕಾತಿಗೆ ಸೂಚಿಸಿದ ಹೆಸರುಗಳನ್ನು ತಡೆ ಹಿಡಿಯುವುದು ವ್ಯಕ್ತಿಗಳು ಹೆಸರನ್ನು ಶಿಫಾರಸಿನಿಂದ ಹಿಂಪಡೆಯುವಂತೆ ಒತ್ತಾಯಿಸುವ ಸಾಧನವಾಗುತ್ತಿರುವುದು ನಮಗೆ ಕಂಡು ಬಂದಿದೆ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.  

ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ಒಟ್ಟಾರೆ 21 ಶಿಫಾರಸುಗಳಲ್ಲಿ ಹನ್ನೊಂದಕ್ಕೆ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲಎಂದು ಪೀಠ ಹೇಳಿತು. ಕೇಂದ್ರ ಸರ್ಕಾರ ಇದಕ್ಕೆ ಆಕ್ಷೇಪಿಸಿದಾಗ ನ್ಯಾಯಾಲಯ “ಇದಲ್ಲದೆ ಕೊಲಿಜಿಯಂ ಈಗಾಗಲೇ ಪುನರುಚ್ಚರಿಸಿರುವ ಹತ್ತು ನ್ಯಾಯಮೂರ್ತಿಗಳ ನೇಮಕಾತಿ ಬಾಕಿ ಉಳಿದಿದೆ. ಪುನರಚ್ಚಾರದ ಹೊರತಾಗಿಯೂ ನೇಮಕಾತಿಗೆ ಅಧಿಸೂಚನೆ ಹೊರಡಿಸಿಲ್ಲ'' ಎಂದು ಅಭಿಪ್ರಾಯಪಟ್ಟಿತು.