ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ನನಗೆ ತೃಪ್ತಿ ಇಲ್ಲ. ಬಹುತೇಕ ನ್ಯಾಯಾಧೀಶರಿಗೆ ಇದೇ ಭಾವನೆ ಇದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ತಿಳಿಸಿದರು.
ಮುಂಬೈನಲ್ಲಿ ಶುಕ್ರವಾರ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್ ಸಮಾರಂಭದಲ್ಲಿ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ರಾಷ್ಟ್ರೀಯ ನ್ಯಾಯಾಂಗ ಆಯೋಗದ (ಎನ್‌ಜೆಎಸಿ) ಕಾಯಿದೆಯನ್ನು 2015ರಲ್ಲಿ ಸುಪ್ರೀಂ ಕೋರ್ಟ್ ರದ್ದುಗೊಳಿಸಿದ್ದರೂ, ಅದು ಉತ್ತಮ ಪರ್ಯಾಯವನ್ನು ಒದಗಿಸಲಿಲ್ಲ ಎಂದು ಸಚಿವರು ಹೇಳಿದರು.
"ಉತ್ತಮ ಆಯ್ಕೆ ಯಾವುದು ಎಂದು ಅವರು (ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು) ಹೇಳಲಿಲ್ಲ, ಹಳೆಯ ಕೊಲಿಜಿಯಂ ವ್ಯವಸ್ಥೆ ಮುಂದುವರೆಯಬೇಕು ಎಂದು ಅವರು ಭಾವಿಸಿದರು. ಅದು ಮುಂದುವರೆಯುತ್ತಿದೆ, ಈ ವ್ಯವಸ್ಥೆ ಬಗ್ಗೆ ನನಗೆ ತೃಪ್ತಿ ಇಲ್ಲ, ನಾನು ಅದನ್ನು ಈಗಾಗಲೇ ಹೇಳಿದ್ದು ಬಹುತೇಕ ನ್ಯಾಯಾಧೀಶರಿಗೆ ನನ್ನ ಮಾತಿನ ಬಗ್ಗೆ ಸಹಮತ ಇದೆ. ಏಕೆಂದರೆ ನಾನು ಹೇಳುತ್ತಿರುವುದು ಸತ್ಯ” ಎಂದರು.
ಕೊಲಿಜಿಯಂ ವ್ಯವಸ್ಥೆಯಿಂದ ಯಾರಿಗೆಲ್ಲಾ ತೃಪ್ತಿಯಿಲ್ಲ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ “ನಾನು ನ್ಯಾಯಾಂಗ ಮತ್ತು ನ್ಯಾಯಾಧೀಶರನ್ನು ಟೀಕಿಸುತ್ತಿಲ್ಲ. ಆದರೆ ನ್ಯಾಯಾಧೀಶರನ್ನು ನೇಮಿಸುವ ವ್ಯವಸ್ಥೆ ಕುರಿತ ವಾಸ್ತವಾಂಶ ಹೇಳುತ್ತಿದ್ದೇನೆ. ನನ್ನ ಮಾತಿಗೆ ವಕೀಲರು ಹಾಗೂ ನ್ಯಾಯಾಧೀಶರ ಸಹಮತವೂ ಇದೆ” ಎಂದರು.
ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ (ಎನ್‌ಜೆಎಸಿ) ಅಸ್ತಿತ್ವಕ್ಕೆ ಬರಬೇಕು ಎಂಬುದನ್ನು ಪ್ರತಿಪಾದಿಸಿದ ಅವರು ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸುವ ವಿಚಾರದಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತದೆ ಎಂದು ಬಹಿರಂಗಪಡಿಸಿದರು.
“ನಾವು ರಾಜಕಾರಣಿಗಳು ಮಾಡುವ ರಾಜಕೀಯ ನ್ಯಾಯಾಂಗದೊಳಗೆ ನಡೆಯುವ ರಾಜಕೀಯದ ಮುಂದೆ ಏನೇನೂ ಅಲ್ಲ. ಕಣ್ಣಿಗೆ ಕಾಣದ ಅದು ತೀವ್ರವಾಗಿರುತ್ತದೆ” ಎಂದು ಅವರು ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಅವರು ಹೇಳಿದರು.
ಪ್ರಪಂಚದಲ್ಲಿ ಎಲ್ಲಿಯೂ ನ್ಯಾಯಮೂರ್ತಿಗಳೇ ನ್ಯಾಯಮೂರ್ತಿಗಳನ್ನು ನೇಮಿಸುವುದಿಲ್ಲ. ಸಮಯ ಹಿಡಿಯುವ ಈ ಪ್ರಕ್ರಿಯೆ ಭಾರತಕ್ಕೆ ಅನನ್ಯವಾದುದು ಎಂದು ಅವರು ಹೇಳಿದರು.
“ಸಮರ್ಥ ವ್ಯಕ್ತಿಯನ್ನು ನ್ಯಾಯಮೂರ್ತಿಗಳನ್ನಾಗಿ ಪದೋನ್ನತಿ ಮಾಡಬೇಕೆ ವಿನಾ ನಿಮಗೆ ತಿಳಿದ ವ್ಯಕ್ತಿಯನ್ನಲ್ಲ. ಯಾವುದೇ ವ್ಯವಸ್ಥೆ ಶೇ 100ರಷ್ಟು ಪರಿಪೂರ್ಣವಲ್ಲ. ಆದರೆ ನಾವು ಒಳ್ಳೆಯ ವ್ಯವಸ್ಥೆಯನ್ನು ಮತ್ತು ಉತ್ತಮ ರೂಢಿಯನ್ನು ನಿರೀಕ್ಷಿಸಬೇಕಿದೆ” ಎಂದು ಅವರು ಹೇಳಿದರು.
ನ್ಯಾಯಾಧೀಶರನ್ನು ಆಯ್ಕೆ ಮಾಡುವಲ್ಲಿ ಸರ್ಕಾರ ಹಿಸಿದ ಪ್ರಮುಖ ಪಾತ್ರವನ್ನು ರಿಜಿಜು ಎತ್ತಿ ತೋರಿಸಿದರು. “ನ್ಯಾಯ ಇಲಾಖೆ ಮತ್ತು ಇತರ ವರದಿಗಳ ಮೂಲಕ ನಾವು ಕಾರ್ಯವಿಧಾನ ರೂಪಿಸುತ್ತೇವೆ. ಹೀಗಾಗಿ ನಾವು ಎಲ್ಲಾ ಸಮಸ್ಯೆಗಳನ್ನು ಎಚ್ಚರಿಕೆಯಿಂದ ನಿಭಾಯಿಸುತ್ತೇವೆ ಮತ್ತು ಸರ್ಕಾರ ನಿರ್ದಿಷ್ಟ ಹೆಸರನ್ನು ಒಪ್ಪಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬರುತ್ತೇವೆ." ಎಂದರು.
ರಿಜಿಜು ಅವರು ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ, ನ್ಯಾಯಮೂರ್ತಿಗಳ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗದೊಳಗಿನ ರಾಜಕೀಯ ಸಾಮಾನ್ಯ ಜನರಿಗೆ ಗೋಚರಿಸುವುದಿಲ್ಲ . ಕೊಲಿಜಿಯಂ ವ್ಯವಸ್ಥೆ ತುಂಬಾ ಅಪಾರದರ್ಶಕವಾಗಿದೆ ಎಂದು ಅವರು ಹೇಳಿದ್ದರು.