online gaming
online gaming 
ಸುದ್ದಿಗಳು

ಆನ್‌ಲೈನ್‌ ಗೇಮಿಂಗ್‌ ನಿಯಮಗಳ ಅಧಿಸೂಚನೆ ಪ್ರಕಟಿಸಿದ ಕೇಂದ್ರ; ಸ್ವನಿಯಂತ್ರಣ ಸಂಸ್ಥೆಗಳಿಂದ ಜೂಜಾಟಗಳ ಕುರಿತು ಪರಿಶೀಲನೆ

Bar & Bench

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆ ಮಾರ್ಗಸೂಚಿ ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021ಕ್ಕೆ ತಿದ್ದುಪಡಿಯ ರೂಪದಲ್ಲಿ ಕರಡು ನಿಯಮ ಪ್ರಸ್ತಾಪಿಸಿದ ಕೆಲ ತಿಂಗಳ ಬಳಿಕ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಗುರುವಾರ ಭಾರತದಲ್ಲಿ ಆನ್‌ಲೈನ್‌ ಗೇಮಿಂಗ್‌ ಕುರಿತಾದ ಅಂತಿಮ ನಿಯಮಗಳನ್ನು ಪ್ರಕಟಿಸಿದೆ.

ಕರಡು ನಿಯಮಗಳಲ್ಲಿ ಗೇಮಿಂಗ್‌ ವೇದಿಕೆಯನ್ನು ಆನ್‌ಲೈನ್‌ ಗೇಮಿಂಗ್‌ ಮಧ್ಯಸ್ಥ ವೇದಿಕೆ ಎಂದು ಕರೆಯಲಾಗಿದ್ದು, ಅವುಗಳು ತಮ್ಮ ಆಟಗಳನ್ನು ಸ್ವನಿಯಂತ್ರಣ ಸಂಸ್ಥೆಯಲ್ಲಿ ನೋಂದಣಿ ಮಾಡಿಸಬೇಕಿದೆ. ಅರ್ಜಿ ಸಲ್ಲಿಸಿದರೆ ಸಚಿವಾಲಯವು ನಿಯಂತ್ರಣ ಸಂಸ್ಥೆಯನ್ನು ನೋಂದಣಿ ಮಾಡಲಿದೆ.

ಈ ಸ್ವನಿಯಂತ್ರಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರವು ವಿವಿಧ ಕ್ಷೇತ್ರಗಳ ಪರಿಣತರನ್ನು ನಾಮನಿರ್ದೇಶನ ಮಾಡಲಿದೆ. ಆನ್‌ಲೈನ್‌ ಗೇಮಿಂಗ್‌, ಕ್ರೀಡೆಗಳು ಅಥವಾ ಮನರಂಜನಾ ಕ್ಷೇತ್ರದಿಂದ ಒಬ್ಬರು, ಮನೋವಿಜ್ಞಾನ, ವೈದ್ಯಕೀಯ ಮತ್ತು ಗ್ರಾಹಕ ಶಿಕ್ಷಣ ಕ್ಷೇತ್ರದಿಂದ ಒಬ್ಬರು, ಸಾರ್ವಜನಿಕ ನೀತಿ, ಸಾರ್ವಜನಿಕ ಆಡಳಿತ, ಕಾನೂನು ಜಾರಿ ಅಥವಾ ಸಾರ್ವಜನಿಕ ಹಣಕಾಸು ಕ್ಷೇತ್ರದಿಂದ ಒಬ್ಬರು ಸೇರಿದಂತೆ ಇನ್ನೂ ಅನೇಕ ಮಂದಿಯನ್ನು ಸಂಸ್ಥೆ ಒಳಗೊಳ್ಳಲಿದೆ.

ಸ್ವನಿಯಂತ್ರಣ ಸಂಸ್ಥೆಯ ಪ್ರಮುಖ ಪಾತ್ರ ಇಂತಿರಲಿದೆ:

  • ಸಂಸ್ಥೆಯು ತನ್ನ ವೆಬ್‌ಸೈಟ್, ಮೊಬೈಲ್‌ ಆಧಾರಿತ ಅಪ್ಲಿಕಷೇನ್‌ಗಳಲ್ಲಿ ಅಥವಾ ಇವೆರಡರಲ್ಲಿಯೂ ಸದಾ ಕಾಲ ಅನುಮತಿ ಪಡೆಯಲಾದ ಆನ್‌ಲೈನ್‌ ನೈಜ ಹಣದ ಆಟಗಳ ನವೀಕರಿಸಿದ ಪಟ್ಟಿ ಪ್ರಕಟಿಸಿ, ನಿರ್ವಹಿಸಬೇಕು.

  • ಪರಿಶೀಲಿಸಲಾದ ಆನ್‌ಲೈನ್ ನೈಜ ಹಣದ ಆಟವು ನಿಯಮಗಳಿಗೆ ಅನುಸಾರವಾಗಿಲ್ಲ ಎಂದು ಖಚಿತವಾದರೆ, ಅದನ್ನು ಹೊಂದಿರುವ ಗೇಮಿಂಗ್ ಮಧ್ಯಸ್ಥ ವೇದಿಕೆಯ ವಾದ ಆಲಿಸಿದ ಬಳಿಕ ಅದಕ್ಕೆ ನೀಡಲಾದ ಅನುಮತಿಯನ್ನು ಅಮಾನತ್ತಿನಲ್ಲಿರಸಬಹುದು ಇಲ್ಲವೇ ರದ್ದುಪಡಿಸಬಹುದು.

  • ತನ್ನ ವೆಬ್‌ಸೈಟ್‌, ಮೊಬೈಲ್‌ ಆಧಾರಿತ ಅಪ್ಲಿಕೇಶನ್‌ ಅಥವಾ ಎರಡಲ್ಲೂ ಆನ್‌ಲೈನ್‌ ನೈಜ ಹಣದ ಆಟಗಳನ್ನು ಪರಿಶೀಲಿಸಲು ಅನುಸರಿಸುವ ನಿಯಮಾವಳಿಗಳ ಸ್ವರೂಪವನ್ನು ಪ್ರಕಟಿಸಬೇಕು. ಆನ್‌ಲೈನ್‌ ನೈಜ ಹಣದ ಆಟವು ದೇಶದ ಸಾರ್ವಭೌಮತೆಗೆ ವಿರುದ್ಧವಾಗಿರಬಾರದು; ಬಳಕೆದಾರರ ಮೇಲಿನ ದುಷ್ಪರಿಣಾಮ, ಮಾನಸಿಕ ಹಾಗೂ ಮಕ್ಕಳ ಮೇಲಿನ ದುಷ್ಪರಿಣಾಮಗಳನ್ನು ತಡೆಯಲು ಸೂಕ್ತ ಸುರಕ್ಷೆ ರೂಪಿಸಬೇಕು; ಆಟಗಳ ಚಟಕ್ಕೆ ತುತ್ತಾಗುವುದು, ಆರ್ಥಿಕ ನಷ್ಟ ಮತ್ತು ಆರ್ಥಿಕ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳುವ ಮುಂತಾದ ಅಂಶಗಳನ್ನು ಇದು ಒಳಗೊಂಡಿರಬೇಕು.