ಸುದ್ದಿಗಳು

ಲಕ್ಷದ್ವೀಪದಲ್ಲಿ ಗೋಹತ್ಯೆ ನಿಷೇಧಿಸಿಲು ಕೇಂದ್ರದ ಪ್ರಸ್ತಾವನೆ: ನಿಯಮ ಉಲ್ಲಂಘಿಸಿದರೆ ಜೀವಾವಧಿ ಶಿಕ್ಷೆ

Bar & Bench

ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಹಸು, ಕರು, ಗೂಳಿ ಹಾಗೂ ಎತ್ತುಗಳ ಹತ್ಯೆಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನಿನೊಂದಿಗೆ ಗೋಹತ್ಯ ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೇ ರೂಪದಲ್ಲಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳ ಮಾರಾಟ, ಸಂಗ್ರಹ ಅಥವಾ ಸಾಗಣೆ ನಿಷೇಧಿಸಲು ಉದ್ದೇಶಿತ ಕಾನೂನು ಯತ್ನಿಸುತ್ತದೆ.

ಈ ನಿಟ್ಟಿನಲ್ಲಿ, 2021ರ ಲಕ್ಷದ್ವೀಪ ಪ್ರಾಣಿ ಸಂರಕ್ಷಣೆ ನಿಯಂತ್ರಣ ಕರಡನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದ್ದು ಜನರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದೆ. ಪ್ರತಿಕ್ರಿಯೆಗಳನ್ನು ನೀಡಲು ಮಾರ್ಚ್ 28 ಕಡೆಯ ದಿನ. ಹಸು, ಕರು (ಗಂಡಾಗಲೀ ಹೆಣ್ಣಾಗಲಿ) ಗೂಳಿ ಹಾಗೂ ಎತ್ತುಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರುವುದಾಗಿ ಕರಡು ನಿಯಮ ಹೇಳುತ್ತಿದೆ.

ಇದಲ್ಲದೆ ಬೇರೆ ಯಾವುದೇ ಪ್ರಾಣಿಗಳ ಹತ್ಯೆಗೆ ಕೂಡ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯುವ ಅಗತ್ಯವಿರುತ್ತದೆ. ನಿಯಮ ಉಲ್ಲಂಘಿಸಿದರೆ ಹತ್ತು ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ ಐದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

"ಯಾವುದೇ ವ್ಯಕ್ತಿ ಗೋಮಾಂಸ ಅಥವಾ ಗೋಮಾಂಸ ಉತ್ಪನ್ನವನ್ನು ಯಾವುದೇ ರೂಪದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಮಾರಾಟ, ಖರೀದಿ, ಸಂಗ್ರಹ ಸಾಗಾಟ ಮಾಡುವಂತಿಲ್ಲ." ಎಂದು ನಿಯಮಾವಳಿಗಳ ಸೆಕ್ಷನ್‌ 8 ಹೇಳುತ್ತದೆ. ಗೋಮಾಂಸ ಅಥವಾ ಗೋಮಾಂಸ ಉತ್ಪನ್ನಗಳನ್ನು ಸಾಗಿಸಲು ಬಳಸುವ ಯಾವುದೇ ವಾಹನ ಅಥವಾ ಸಾಗಣೆಯನ್ನು ಅದಕ್ಕಾಗಿ ನೇಮಕಗೊಂಡ ಅಧಿಕಾರಿ ವಶಪಡಿಸಿಕೊಳ್ಳಲು ಜವಾಬ್ದಾರ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶ ಮುಟ್ಟುಗೋಲು ಹಾಕಿಕೊಳ್ಳಬೇಕು. ಈ ನಿಬಂಧನೆ ಉಲ್ಲಂಘಿಸಿದರೆ ಹತ್ತು ವರ್ಷಗಳವರೆಗೆ ಆದರೆ ಏಳು ವರ್ಷಗಳಿಗಿಂತ ಕಡಿಮೆಯಿರದಂತೆ ವಿಸ್ತರಿಸಬಹುದಾದ ಸೆರೆವಾಸ ಹಾಗೂ ಕನಿಷ್ಠ ಒಂದು ಲಕ್ಷ ರೂಪಾಯಿಯಿಂದ ಗರಿಷ್ಠ ಐದು ಲಕ್ಷ ದಂಡ ವಿಧಿಸಬಹುದಾದ ಶಿಕ್ಷೆಯಾಗಿದೆ.