ಸುದ್ದಿಗಳು

ಪ್ರಾದೇಶಿಕ ಭಾಷೆಗಳಲ್ಲಿ ಸಿಎಲ್ಎಟಿ: ಅಭ್ಯಂತರವಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ

ರಾಷ್ಟ್ರೀಯ ಶಿಕ್ಷಣ ನೀತಿ- 2020ನ್ನು ಉಲ್ಲೇಖಿಸಿದ ಶಿಕ್ಷಣ ಸಚಿವಾಲಯ, ಸಿಎಲ್ಎಟಿ ಪರೀಕ್ಷೆಗಳನ್ನು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಕ್ಕೆ ತನ್ನ ಅಭ್ಯಂತರ ಇಲ್ಲ ಎಂದಿದೆ.

Bar & Bench

ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆಯನ್ನು (ಸಿಎಲ್‌ಎಟಿ) ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಬೆಂಬಲಿಸಿದೆ [ಸುಧಾಂಶು ಪಾಠಕ್ ಮತ್ತು ಕಾರ್ಯದರ್ಶಿ ಮೂಲಕ ರಾಷ್ಟ್ರೀಯ ಕಾನೂನು ವಿವಿಗಳ ಒಕ್ಕೂಟ ನಡುವಣ ಪ್ರಕರಣ].

ಪ್ರಾದೇಶಿಕ ಭಾಷೆಗಳಲ್ಲಿ ಸಿಎಲ್‌ಎಟಿ ನಡೆಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರಾಕ್ಷೇಪಣಾ ಪತ್ರ ನೀಡಿದ್ದು ಇದೇ ವೇಳೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅದು ಪ್ರಸ್ತಾಪಿಸಿದೆ. ಕಾನೂನು ಶಿಕ್ಷಣ ಒದಗಿಸುವ ಸರ್ಕಾರದ ಸಂಸ್ಥೆಗಳು ಭವಿಷ್ಯದ ವಕೀಲರು ಮತ್ತು ನ್ಯಾಯಾಧೀಶರಿಗೆ ಇಂಗ್ಲಿಷ್‌ ಮತ್ತು ರಾಜ್ಯದ ಭಾಷೆಯನ್ನೊಳಗೊಂಡ ದ್ವಿಭಾಷಾ ಶಿಕ್ಷಣ ನೀಡುವುದನ್ನು ಪರಿಗಣಿಸಬೇಕು ಎಂದು ನೀತಿ ಹೇಳುತ್ತದೆ.

ಹಿಂದಿ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ 2024ನೇ  ಸಾಲಿನ ಸಿಎಲ್‌ಎಟಿ ನಡೆಸಬೇಕೆಂದು ಒತ್ತಾಯಿಸಿ ಕಾನೂನು ವಿದ್ಯಾರ್ಥಿ ಸುಧಾಂಶು ಪಾಠಕ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು  ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ಸಂಜೀವ್ ನರೂಲಾ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿದ ವೇಳೆ ಕೇಂದ್ರ ಸರ್ಕಾರ ಈ ವಿಚಾರ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸೂಚಿಸಿರುವ ನ್ಯಾಯಾಲಯ ಸೆಪ್ಟೆಂಬರ್ 15ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಪರೀಕ್ಷೆಯ ವಸ್ತುನಿಷ್ಠ ಪ್ರಶ್ನೆ ಮಾದರಿ ಮತ್ತು ಕಾರ್ಯವಿಧಾನದ ಕಾರಣಕ್ಕೆ 2024ನೇ ಸಾಲಿನ ಪರೀಕ್ಷೆಯನ್ನು ಹಿಂದಿ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದು ಕಾರ್ಯಸಾಧುವಲ್ಲ ಎಂದು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳ ಒಕ್ಕೂಟ ದೆಹಲಿ ಹೈಕೋರ್ಟ್‌ಗೆ ಇತ್ತೀಚೆಗೆ ತಿಳಿಸಿತ್ತು. ತಜ್ಞರ ಅಭಿಪ್ರಾಯ ಮತ್ತು ಸಂಪೂರ್ಣ ಸಮಾಲೋಚನೆ ನಡೆಸಿ ಮುಂದಿನ ದಿನಗಳಲಿ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅದು ಹೇಳಿತ್ತು. ಮತ್ತೊಂದೆಡೆ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಅರ್ಜಿಗೆ ಬೆಂಬಲ ಸೂಚಿಸಿತ್ತು.