Namaz

 

Image for representative purpose

ಸುದ್ದಿಗಳು

ನಿಜಾಮುದ್ದೀನ್ ಮರ್ಕಝ್ ಮಸೀದಿ ಸಂಪೂರ್ಣ ತೆರೆಯುವ ದೆಹಲಿ ವಕ್ಫ್ ಬೋರ್ಡ್ ಮನವಿಗೆ ಕೇಂದ್ರದ ವಿರೋಧ

ಡಿಡಿಎಂಎ ಮಾರ್ಗಸೂಚಿಗಳ ಪ್ರಕಾರ, 50 ಜನರಿಗೆ ನಮಾಜ್ ಮಾಡಲು ಅವಕಾಶ ನೀಡಬಹುದು ಆದರೆ ಮಸೀದಿಯನ್ನು ಸಂಪೂರ್ಣವಾಗಿ ಪುನಃ ತೆರೆಯಲು ಮನವಿ ಮಾಡಿದರೆ, ಸರ್ಕಾರ ತನ್ನ ವಾದ ಮಂಡಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದ ಪರ ವಕೀಲರು ಹೇಳಿದರು.

Bar & Bench

ಕೋವಿಡ್‌ ನಿಯಮ ಉಲ್ಲಂಘಿಸಿ ತಬ್ಲಿಘಿ ಜಮಾತ್ ಸದಸ್ಯರ ಗುಂಪು ಮಾರ್ಚ್ 2020 ರಿಂದ ಮುಚ್ಚಲ್ಪಟ್ಟಿರುವ ನಿಜಾಮುದ್ದೀನ್ ಮರ್ಕಝ್‌ನಲ್ಲಿ ವಾಸವಿದ್ದುದರಿಂದ ಮಾರ್ಚ್ 2020 ರಿಂದ ಮುಚ್ಚಲಾಗಿದ್ದ ಮಸೀದಿಯನ್ನು ಪೂರ್ಣವಾಗಿ ಪುನಃ ತೆರೆಯುವುದಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ [ತನ್ನ ಅಧ್ಯಕ್ಷರ ಮೂಲಕ ದೆಹಲಿ ವಕ್ಫ್‌ ಮಂಡಳಿ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮುಂಬರುವ ಶಬ್ ಇ-ಬರಾತ್ ಮತ್ತು ರಂಜಾನ್ ತಿಂಗಳನ್ನು ಗಮನದಲ್ಲಿಟ್ಟುಕೊಂಡು ಮಸೀದಿಯನ್ನು ಸಂಪೂರ್ಣವಾಗಿ ತೆರೆಯುವಂತೆ ಕೋರಿ ದೆಹಲಿ ವಕ್ಫ್ ಬೋರ್ಡ್ ಮನವಿ ಸಲ್ಲಿಸಿತ್ತು. ಅರ್ಜಿಗೆ ಸಂಬಂಧಿಸಿದಂತೆ ನ್ಯಾ. ಮನೋಜ್ ಕುಮಾರ್ ಓಹ್ರಿ ಅವರಿದ್ದ ಪೀಠದೆದುರು ವಕೀಲ ರಜತ್ ನಾಯರ್ ಅವರು ಕೇಂದ್ರದ ನಿಲುವನ್ನು ತಿಳಿಸಿದರು.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಮಾರ್ಗಸೂಚಿಗಳ ಪ್ರಕಾರ, 50 ಮಂದಿಗೆ ಮಸೀದಿ ಪ್ರವೇಶಿಸಲು ಮತ್ತು ನಮಾಜ್ ಮಾಡಲು ಅನುಮತಿಸಲಾಗಿದೆ. ಆದರೆ ಸಂಪೂರ್ಣ ಪುನರಾರಂಭಕ್ಕಾಗಿ ಮನವಿ ಮಾಡಿದರೆ ಆಗ ಸರ್ಕಾರವು ಕೆಲ ವಾದವನ್ನು ಮಂಡಿಸಲಿದೆ ಎಂದು ನಾಯರ್ ಹೇಳಿದರು.

ಪ್ರಸ್ತುತ ಪ್ರಕರಣಗಳಲ್ಲಿ ಅರ್ಜಿದಾರರ ಸ್ಥಾನವನ್ನು ಪ್ರಶ್ನಿಸಿದ ಅವರು, ಇದು "ಗುಪ್ತ" ಪ್ರಕ್ರಿಯೆಯಾಗಿದೆ ಮತ್ತು ಪ್ರಸ್ತುತ ವಿಷಯದಲ್ಲಿ ಆವರಣದ ನಿಜವಾದ ಮಾಲೀಕರು ನ್ಯಾಯಾಲಯದ ಮುಂದೆ ಇಲ್ಲ ಎಂದು ಹೇಳಿದರು.

ವಕ್ಫ್ ಮಂಡಳಿಯ ಪರ ವಾದ ಮಂಡಿಸಿದ ವಕೀಲರು “ಮಸೀದಿಯ ಆವರಣವನ್ನು ನಿರ್ವಹಿಸುವ ಹಕ್ಕು ಮಂಡಳಿಗೆ ಇದೆ. ಡಿಡಿಎಂಎ ಹೊಸ ಅಧಿಸೂಚನೆಯಲ್ಲಿ ಧಾರ್ಮಿಕ ಸಭೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿರುವುದರಿಂದ ಯಾವುದೇ ಷರತ್ತುಗಳಿಲ್ಲದೆ ಮಸೀದಿಯನ್ನು ತೆರೆಯಬೇಕು ಎಂದು ಹೇಳಿದರು. ವಾದ ಆಲಿಸಿದ ನ್ಯಾಯಾಲಯ ಡಿಡಿಎಂಎಯ ಹೊಸ ಅಧಿಸೂಚನೆಯ ಪ್ರತಿಯನ್ನು ಸಲ್ಲಿಸುವಂತೆ ವಕ್ಫ್‌ ಮಂಡಳಿ ಪರ ವಕೀಲರಿಗೆ ಸೂಚಿಸಿ ಪ್ರಕರಣವನ್ನು ಮಾರ್ಚ್‌ 11ಕ್ಕೆ ಮುಂದೂಡಿತು.