ನಿಜಾಮುದ್ದೀನ್‌ ಮಸೀದಿ ಪುನರಾರಂಭ ವಿಳಂಬ: ದೆಹಲಿ ಹೈಕೋರ್ಟ್‌ ಅಸಮಾಧಾನ

ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದ್ದು, ಸೆಪ್ಟೆಂಬರ್‌ಗೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
Namaz
NamazImage for representative purpose
Published on

ಕಳೆದ ವರ್ಷ ತಬ್ಲೀಗಿ ಜಮಾತ್‌ ಕಾರ್ಯಕ್ರಮ ಆಯೋಜಿಸಿದ್ದ ನಿಜಾಮುದ್ದೀನ್‌ ಮಸೀದಿಯನ್ನು ಪುನಾರಂಭಿಸುವ ಕುರಿತು ಪ್ರತಿಕ್ರಿಯೆ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ಬಗ್ಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ದೆಹಲಿ ವಕ್ಫ್‌ ಮಂಡಳಿ ಫೆಬ್ರುವರಿಯಲ್ಲಿ ಮಸೀದಿ ತೆರೆಯುವಂತೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ದಾಖಲಿಸಿಲ್ಲ ಎಂಬುದನ್ನು ನ್ಯಾ. ಮುಕ್ತಾ ಗುಪ್ತ ಅವರಿದ್ದ ಏಕ ಸದಸ್ಯ ಪೀಠ ಗಮನಿಸಿತು.

“ಪ್ರತಿಕ್ರಿಯೆ ಸಲ್ಲಿಸುವ ಉದ್ದೇಶ ನಿಮಗೆ ಇದೆಯೇ? ಹಿಂದೆ ಅಫಿಡವಿಟ್‌ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ನೀವು ಕೋರಿದ್ದಿರಿ. ರಂಜಾನ್‌ ಅವಧಿಯಲ್ಲಿ ನಿಜಾಮುದ್ದೀನ್‌ ಮಸೀದಿ ತೆರೆಯುವ ಸಂಬಂಧ ನೀವು ಸಲ್ಲಿಸಿದ್ದ ಸ್ಥಿತಿಗತಿ ವರದಿಯೇ ಕೊನೆಯದ್ದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Also Read
ಕೋವಿಡ್‌ನಿಂದಾಗಿ ನಿಜಾಮುದ್ದೀನ್ ಮಸೀದಿಯಲ್ಲಿ ಸಭೆ ನಡೆಸಲು ಅನುಮತಿಸಲಾಗದು: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ

ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಅರ್ಜಿದಾರರ ಪರ ವಕೀಲ ರಜತ್‌ ನಾಯರ್‌ ಪೀಠವನ್ನು ಕೋರಿದರು. “ಪ್ರತಿಕ್ರಿಯೆ ಸಲ್ಲಿಸಲು ಕೇಂದ್ರಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗೆ ಪ್ರತ್ಯುತ್ತರ ಸಲ್ಲಿಸಬೇಕು. ಅಫಿಡವಿಟ್‌ ಜೊತೆಗೆ ಪ್ರತ್ಯುತ್ತರ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ಗೆ ಮುಂದೂಡಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸೆಪ್ಟೆಂಬರ್‌ 13ರಂದು ದೆಹಲಿ ಹೈಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಲಿದೆ.

ಕೋವಿಡ್‌ ಆರಂಭದಲ್ಲಿ ತಬ್ಲೀಗಿ ಜಮಾತ್‌ ಸಮಾರಂಭ ಆಯೋಜಿಸುವ ಮೂಲಕ ನಿಜಾಮುದ್ದೀನ್‌ ಮಸೀದಿಯು ಚರ್ಚೆಗೆ ಗ್ರಾಸವಾಗಿತ್ತು.

Kannada Bar & Bench
kannada.barandbench.com