ಸುದ್ದಿಗಳು

ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ: ರಾಜ್ಯಗಳಿಗೆ ಮತ್ತೆ ಎಸ್ಇಬಿಸಿ ಗುರುತಿಸುವ ಅಧಿಕಾರ

Bar & Bench

ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸೋಮವಾರ ಸಂವಿಧಾನ (127 ನೇ) ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಗುರುತಿಸಲು ಮತ್ತು ಅವುಗಳನ್ನು ಸಂವಿಧಾನದ 342 ಎ (1) ವಿಧಿ ಅಡಿಯಲ್ಲಿ ಪಟ್ಟಿ ಮಾಡಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮರಳಿ ಅಧಿಕಾರ ನೀಡಿದೆ.

ಎಸ್‌ಇಬಿಸಿಗಳನ್ನು ಗುರುತಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ ಎಂದು 3: 2 ಬಹುಮತದೊಂದಿಗೆ ಮರಾಠ ಮೀಸಲಾತಿ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು. ಈ ತೀರ್ಪಿನ ಮೇಲೆ ಮೇಲುಗೈ ಸಾಧಿಸುವ ನಿಟ್ಟಿನಲ್ಲಿ ಸಂವಿಧಾನದ 342 ಎ ವಿಧಿಗೆ ಸರ್ಕಾರ ತಿದ್ದುಪಡಿ ತಂದಿದೆ.

ಎಸ್‌ಇಬಿಸಿಗಾಗಿ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಪಟ್ಟಿ ತಯಾರಿಸಲು ಮತ್ತು ನಿರ್ವಹಿಸಲು ಅಧಿಕಾರ ಹೊಂದಿವೆ ಎಂಬುದನ್ನು ಸೂಕ್ತ ರೀತಿಯಲ್ಲಿ ಸ್ಪಷ್ಟಪಡಿಸುವ ಸಲುವಾಗಿ ಮತ್ತು ದೇಶದ ಒಕ್ಕೂಟ ರಚನೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಲಂ 342ಎ ಗೆ ತಿದ್ದುಪಡಿ ತರುವ ಅವಶ್ಯಕತೆ ಇದ್ದು ಸಂವಿಧಾನದ 338 ಬಿ ಮತ್ತು 366 ನೇ ಪರಿಚ್ಛೇದದ ಅಡಿಯಲ್ಲಿ ತಿದ್ದುಪಡಿ ತರಲಾಗಿದೆ.

"ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ರಾಜ್ಯ ಪಟ್ಟಿ/ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯನ್ನು ಎಸ್‌ಇಬಿಸಿ ತಯಾರಿಸಲು ಮತ್ತು ನಿರ್ವಹಿಸಲು ಅಧಿಕಾರ ಹೊಂದಿವೆ ಎಂಬುದನ್ನು ಸಮರ್ಪಕವಾಗಿ ಸ್ಪಷ್ಟಪಡಿಸುವ ಸಲುವಾಗಿ ಮತ್ತು ಈ ದೇಶದ ಒಕ್ಕೂಟ ರಚನೆಯನ್ನು ಕಾಪಾಡುವ ದೃಷ್ಟಿಯಿಂದ, ಕಲಂ 342 ಎ ಮತ್ತು ಸಂವಿಧಾನದ 338 ಬಿ ಮತ್ತು 366 ನೇ ಪರಿಚ್ಛೇದದಲ್ಲಿ ಪರಿಣಾಮಕಾರಿಯಾದ ತಿದ್ದುಪಡಿಗಳನ್ನು ಮಾಡುವ ಅವಶ್ಯಕತೆಯಿದೆ” ಎಂದು ಮಸೂದೆ ತಿಳಿಸಿದೆ.

ಎಸ್‌ಇಬಿಸಿಗಳನ್ನು ಗುರುತಿಸುವ ರಾಜ್ಯಗಳ ಅಧಿಕಾರಕ್ಕೆ ಸಂಬಂಧಿಸಿದ ಪ್ರಶ್ನೆ ಮರಾಠ ಮೀಸಲಾತಿ ಪ್ರಕರಣದಲ್ಲಿ ಉದ್ಭವಿಸಿತ್ತು.

ರಾಜ್ಯಗಳು ತಮ್ಮ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಮೂಲಕ ಅಥವಾ ಶಾಸನಬದ್ಧ ಆಯೋಗಗಳ ಮೂಲಕ ರಾಷ್ಟ್ರಪತಿ ಅಥವಾ 338 ಬಿ ವಿಧಿಯಡಿ ರೂಪುಗೊಂಡ ಆಯೋಗಕ್ಕೆ ಜಾತಿ ಅಥವಾ ಸಮುದಾಯಗಳ ಸೇರ್ಪಡೆ, ಹೊರಗಿಡುವಿಕೆ ಅಥವಾ ಮಾರ್ಪಾಡಿಗೆ ಸಲಹೆಯನ್ನಷ್ಟೇ ನೀಡಬಹುದು ಎಂದು ಹೇಳಿದೆ.

ಮರಾಠಾ ಮೀಸಲಾತಿ ತೀರ್ಪಿನಲ್ಲಿ ನ್ಯಾಯಾಲಯವು “ರಾಜ್ಯಗಳು ತಮ್ಮ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳ ಮೂಲಕ ಅಥವಾ ಶಾಸನಬದ್ಧ ಆಯೋಗಗಳ ಮೂಲಕ, 342 ಎ (1) ಅಡಿಯಲ್ಲಿ ಪ್ರಕಟಿಸಬೇಕಾದ ಪಟ್ಟಿಯಲ್ಲಿ ರಾಷ್ಟ್ರಪತಿ ಅಥವಾ ಆಯೋಗಕ್ಕೆ 338 ಬಿ ವಿಧಿ ಅಡಿಯಲ್ಲಿ ಮಾತ್ರ ಜಾತಿಗಳು ಅಥವಾ ಸಮುದಾಯಗಳ ಸೇರ್ಪಡೆ, ಹೊರಗಿಡುವಿಕೆ ಅಥವಾ ಮಾರ್ಪಾಡು ಸಲಹೆಗಳನ್ನು ನೀಡಬಹುದು ಎಂದು ಹೇಳಿದೆ.

ಸಂವಿಧಾನದ 102ನೇ ತಿದ್ದುಪಡಿ ಮೂಲಕ 366 (26 ಸಿ) ಮತ್ತು 342 ಎ ಅನುಚ್ಛೇದಗಳನ್ನು ಪರಿಚಯಿಸಿ ರಾಷ್ಟ್ರಪತಿಗಳು ಮಾತ್ರ ಬೇರೆಲ್ಲಾ ಪ್ರಾಧಿಕಾರಗಳನ್ನು ಹೊರತುಪಡಿಸಿ ಎಸ್‌ಇಬಿಸಿಗಳನ್ನು ಗುರುತಿಸಲು ಮತ್ತು ಆ ಸಮುದಾಯಗಳನ್ನು 342 ಎ (1) ವಿಧಿ ಅಡಿಯಲ್ಲಿ ಪ್ರಕಟಿಸಲಾಗುವ ಪಟ್ಟಿಯಲ್ಲಿ ಸೇರಿಸಲು ಅಧಿಕಾರ ಹೊಂದಿದ್ದಾರೆ. ಇದು ಸಂವಿಧಾನದ ಉದ್ದೇಶಗಳಿಗಾಗಿ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಎಸ್‌ಇಬಿಸಿಗಳನ್ನು ಒಳಗೊಂಡಿರುತ್ತದೆ ಎಂದು ಪರಿಗಣಿಸಲಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

102 ನೇ ಸಂವಿಧಾನ ತಿದ್ದುಪಡಿ ಕಾಯಿದೆಯ ಮೂಲಕ 342 ಎ ವಿಧಿಯನ್ನು ಸಂವಿಧಾನದಲ್ಲಿ ಸೇರಿಸಲಾಗಿದೆ. ಅದು ಈ ರೀತಿ ಇದೆ:

"(1) ರಾಷ್ಟ್ರಪತಿಯು ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ, ಮತ್ತು ಅದು ರಾಜ್ಯವಾಗಿದ್ದರೆ, ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ, ಸಾರ್ವಜನಿಕ ಅಧಿಸೂಚನೆಯ ಮೂಲಕ, ಈ ಸಂವಿಧಾನದ ಉದ್ದೇಶಗಳಿಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳನ್ನು ಗುರುತಿಸಬಹುದು. ಆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಆ ವರ್ಗಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳೆಂದು ಪರಿಗಣಿಸಲಾಗುತ್ತದೆ.

(2) ಸಂಸತ್ತು ಕಾನೂನಿನ ಪ್ರಕಾರ ಕೇಂದ್ರ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿಯಿಂದ ಷರತ್ತು (1) ಅಡಿಯಲ್ಲಿ ನೀಡಲಾಗಿರುವ ಅಧಿಸೂಚನೆಯಲ್ಲಿ ಗುರುತಿಸಿರುವ ಯಾವುದೇ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗವನ್ನು ಸೇರಿಸಬಹುದು, ಆದರೆ ಮೇಲೆ ತಿಳಿಸಿದಂತೆ ಈ ಅಧಿನಿಯಮದ ಅಡಿಯಲ್ಲಿ ಹೊರಡಿಸಿದ ಅಧಿಸೂಚನೆಯನ್ನು ಉಳಿಸಬೇಕು ನಂತರದ ಯಾವುದೇ ಅಧಿಸೂಚನೆಯಿಂದ ಬದಲಾಗಬಾರದು. "

ಈ ಕೆಳಗಿನ ಬದಲಾವಣೆಗಳನ್ನು ಈಗ ಸಂವಿಧಾನದ (127 ನೇ ತಿದ್ದುಪಡಿ) ವಿಧೇಯಕದ ಮೂಲಕ ಅಂಗೀಕರಿಸಲಾಗಿದೆ.

ಸಂವಿಧಾನದ ವಿಧಿ 342 ಎ, - (ಎ) ಪರಿಚ್ಛೇದ (1) ರಲ್ಲಿ, "ಈ ಸಂವಿಧಾನದ ಉದ್ದೇಶಗಳಿಗಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು" ಎಂಬ ಪದಗಳಿಗೆ ಬದಲಾಗಿ "ಕೇಂದ್ರ ಸರ್ಕಾರದ ಉದ್ದೇಶಗಳಿಗಾಗಿ ಕೇಂದ್ರ ಪಟ್ಟಿಯಲ್ಲಿರುವ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು” ಎಂದು ಬದಲಿಸಬೇಕು;

(ಬಿ) ಅನುಚ್ಛೇದ (2) ರ ನಂತರ, ಈ ಕೆಳಗಿನವುಗಳನ್ನು ಸೇರಿಸಬೇಕು, ಅವುಗಳೆಂದರೆ: - 'ವಿವರಣೆ:- ಅನುಚ್ಛೇದ () ಮತ್ತು ()ರ ಅಡಿ, ಕೇಂದ್ರ ಪಟ್ಟಿ ಎಂದರೆ ಕೇಂದ್ರ ಸರ್ಕಾರದಿಂದ ಸಿದ್ಧಪಡಿಸಲಾದ ಮತ್ತು ನಿರ್ವಹಿಸಲಾದ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿ ಎಂದು.

(3) (1) ಮತ್ತು (2) ಅನುಚ್ಛೇದಗಳ ಹೊರತಾಗಿಯೂ, ಪ್ರತಿ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವು ಕಾನೂನಿನ ಪ್ರಕಾರ, ತನ್ನದೇ ಉದ್ದೇಶಗಳಿಗಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿ, ನಮೂನೆಗಳನ್ನು ನಿರ್ವಹಿಸಬಹುದು ಹಾಗೂ ಇದು ಕೇಂದ್ರ ಪಟ್ಟಿಯಿಂದ ವಿಭಿನ್ನವಾಗಿರಬಹುದು.

ಮರಾಠ ಎಸ್‌ಇಬಿಸಿ ಕಾಯಿದೆಯ ವಿರುದ್ಧ ಮಾಡಲಾದ ಪ್ರಮುಖ ವಾದವೆಂದರೆ, ಸಂವಿಧಾನ (102 ನೇ ತಿದ್ದುಪಡಿ) ಕಾಯಿದೆ ಆಗಸ್ಟ್ 2018 ರಿಂದ ಜಾರಿಗೆ ಬಂದ ನಂತರ, ರಾಜ್ಯ ಶಾಸಕಾಂಗ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ನಿರ್ದಿಷ್ಟ ವರ್ಗವನ್ನು ಗುರುತಿಸುವ ಅಧಿಕಾರ ಕಳೆದುಕೊಂಡಿತ್ತು ಎನ್ನುವುದಾಗಿತ್ತು. ಇದೀಗ ಆ ತೊಡಕನ್ನು ಹೊಸ ತಿದ್ದುಪಡಿಯ ಮೂಲಕ ನಿವಾರಿಸಿಕೊಳ್ಳುವ ಪ್ರಯತ್ನ ನಡೆದಿದೆ.