Kiren Rijiju and P Wilson 
ಸುದ್ದಿಗಳು

ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರು, ಮಹಿಳೆಯರನ್ನು ನ್ಯಾಯಮೂರ್ತಿಗಳ ಹುದ್ದೆಗೆ ಪರಿಗಣಿಸಿಲು ಸಿಜೆಗಳಿಗೆ ಮನವಿ: ರಿಜಿಜು

ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳಲ್ಲಿ ಸಾಮಾಜಿಕ ವೈವಿಧ್ಯತೆ ಇಲ್ಲದಿರುವುದನ್ನು ಉಲ್ಲೇಖಿಸಿ ತಮಿಳುನಾಡು ಸಂಸದ ಪಿ ವಿಲ್ಸನ್‌ ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರಿಗೆ ಪತ್ರ ಬರೆದಿದ್ದರು. ಇದಕ್ಕೆ ರಿಜಿಜು ಪ್ರತಿಕ್ರಿಯಿಸಿದ್ದಾರೆ.

Bar & Bench

ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸ್ಸು ಮಾಡುವಾಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವುದನ್ನು ಪರಿಗಣಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ಮನವಿ ಮಾಡುತ್ತಲೇ ಇದೆ ಎಂದು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರು ಸಂಸದ ಪಿ ವಿಲ್ಸನ್‌ ಅವರಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಹೆಚ್ಚು ಸಾಮಾಜಿಕ ವೈವಿಧ್ಯತೆ ಖಾತರಿಪಡಿಸುವಂತೆ ಪಿ ವಿಲ್ಸನ್‌ ಅವರು ರಿಜಿಜು ಅವರಿಗೆ ಪತ್ರ ಬರೆದಿದ್ದರು.

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕಾತಿಗೆ ಅವಕಾಶ ಕಲ್ಪಿಸಿರುವ ಸಂವಿಧಾನದಲ್ಲಿ ಯಾವುದೇ ಜಾತಿ ಅಥವಾ ವರ್ಗದ ಜನರಿಗೆ ಮೀಸಲಾತಿ ಕಲ್ಪಿಸುವಂತೆ ಹೇಳಲಾಗಿಲ್ಲ. ಅದಾಗ್ಯೂ, ಸಾಮಾಜಿಕ ವೈವಿಧ್ಯತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಇದನ್ನು ಪರಿಗಣಿಸುವಂತೆ ಮುಖ್ಯ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರವು ಹಿಂದಿನಿಂದಲೂ ಮನವಿ ಮಾಡುತ್ತಿದೆ ಎಂದು ರಿಜಿಜು ಪತ್ರದಲ್ಲಿ ತಿಳಿಸಿದ್ದಾರೆ.

“ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಸ್ತಾವ ಸಲ್ಲಿಸುವಾಗ ಸಾಮಾಜಿಕ ವೈವಿಧ್ಯತೆ ಕಾಪಾಡುವ ದೃಷ್ಟಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಪರಿಗಣಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸರ್ಕಾರವು ಹಿಂದಿನಿಂದಲೂ ಮನವಿ ಮಾಡುತ್ತಿದೆ” ಎಂದು ರಿಜಿಜು ಪತ್ರದಲ್ಲಿ ವಿವರಿಸಿದ್ದಾರೆ.

ಸದ್ಯ ನಿರ್ದಿಷ್ಟ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕೊಲಿಜಿಯಂ ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಹೆಸರುಗಳನ್ನು ಶಿಫಾರಸ್ಸು ಮಾಡುತ್ತಿದೆ. ಹೈಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿದ ಹೆಸರುಗಳನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಅದಕ್ಕೆ ಅಧಿಕೃತ ಮುದ್ರೆ ಹಾಕಿ ಹೆಸರುಗಳ ಪಟ್ಟಿಯನ್ನು ಕೇಂದ್ರ ಸರ್ಕಾರದ ಕಾನೂನು ಇಲಾಖೆಗೆ ಒಪ್ಪಿಗೆಗಾಗಿ ಕಳುಹಿಸಿಕೊಡುತ್ತದೆ.

ಹಿರಿಯ ವಕೀಲರಾಗಿರುವ ವಿಲ್ಸನ್‌ ಅವರು ತಮ್ಮ ಪತ್ರದಲ್ಲಿ ಪದೇ ಪದೇ ಅತ್ಯುನ್ನತ ನ್ಯಾಯಾಲಯಗಳಲ್ಲಿ ವೈವಿಧ್ಯತೆಯ ಕೊರತೆ ಇರುವುದನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ. ಅಲ್ಲದೇ, ಸುಪ್ರೀಂ ಕೋರ್ಟ್‌ನ ಪ್ರಾದೇಶಿಕ ಪೀಠಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಸ್ಥಾಪಿಸುವಂತೆ ಬಲವಾಗಿ ಪ್ರತಿವಾದಿಸುತ್ತಿರುವ ವಿಲ್ಸನ್‌ ಅವರು ಹೈಕೋರ್ಟ್‌ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಹೆಚ್ಚಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ.