Mumbai Metro Rail Project
Mumbai Metro Rail Project 
ಸುದ್ದಿಗಳು

[ಮುಂಬೈ ಮೆಟ್ರೋ ರೈಲು] ಆರೆ ಬದಲಿಗೆ ಕಾಂಜುಮಾರ್ಗ್‌ ಭೂಮಿ ಬಳಸುವ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿದ ಕೇಂದ್ರ

Bar & Bench

ಮೆಟ್ರೊ ರೈಲು ಯೋಜನೆಗಾಗಿನ ಕಾರ್‌ ಶೆಡ್‌ ನಿರ್ಮಾಣಕ್ಕೆ ಮುಂಬೈನ ಆರೆ ಪ್ರದೇಶದ ಬದಲಿಗೆ ಕಾಂಜುಮಾರ್ಗ್‌ ಭೂಮಿಯನ್ನು ಬಳಸುವ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಕೇಂದ್ರ ಸರ್ಕಾರ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದೆ. ಶೆಡ್‌ ನಿರ್ಮಾಣ ಸಂಬಂಧ ಮುಂಬೈ ಉಪನಗರ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಲಾಗಿದೆ. ಯೋಜನೆಗಾಗಿ ಹಸ್ತಾಂತರಗೊಂಡ ಭೂಮಿ ತನ್ನ ಒಡೆತನದಲ್ಲಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದ್ದು ಈ ಭೂಮಿ ಒಡೆತನದ ಹಕ್ಕು ರಾಜ್ಯ ಸರ್ಕಾರಕ್ಕಾಗಲೀ ಜಿಲ್ಲಾಧಿಕಾರಿಗಾಗಲೀ ಇಲ್ಲ ಎಂದು ವಾದಿಸಿದೆ. ಆದ್ದರಿಂದ ಜಮೀನು ಹಸ್ತಾಂತರ ಕಾನೂನುಬಾಹಿರವಾಗುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ಮುಂದಿನ ವಾರ ಮಧ್ಯಂತರ ಪರಿಹಾರ ನೀಡುವ ಸಂಬಂಧ ವಿಚಾರಣೆ ನಡೆಸಲಿದ್ದು ಆಗ ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಮಹಾರಾಷ್ಟ್ರ ಸರ್ಕಾರ ಮತ್ತು ಎಂಎಂಆರ್‌ಡಿಎಗೆ ನಿರ್ದೇಶನ ನೀಡಿದೆ. ಯೋಜನೆಯ ಭಾಗವಾಗಿ ಕಾಂಜೂರಿನಲ್ಲಿರುವ ಜಮೀನನ್ನು ತನಗೆ ಹಸ್ತಾಂತರಿಸುವಂತೆ ಮುಂಬೈ ಮೆಟ್ರೊಪಾಲಿಟನ್‌ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ರಾಜ್ಯ ಸರ್ಕಾರವನ್ನು ಕೋರಿತ್ತು. ಅದರಂತೆ ಜಮೀನು ಹಸ್ತಾಂತರ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಜಿಲ್ಲಾಧಿಕಾರಿ ಏಕಪಕ್ಷೀಯವಾಗಿ 102 ಎಕರೆ ಭೂಮಿಯನ್ನು ಎಂಎಂಆರ್‌ಡಿಎಗೆ ಹಸ್ತಾಂತರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. ಜಮೀನಿನ ಮಾರುಕಟ್ಟೆ ಮೌಲ್ಯ ಪಾವತಿ ತಪ್ಪಿಸಲು ರಾಜ್ಯ ಮತ್ತು ಎಂಎಂಆರ್‌ಡಿಎ ಒಗ್ಗೂಡಿ ಕ್ರಮ ಕೈಗೊಂಡಿವೆ. ಇದರ ಪರಿಣಾಮ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ತೀವ್ರ ನಷ್ಟ ಉಂಟಾಗಿದೆ ಎಂದು ಕೇಂದ್ರ ಹೇಳಿದೆ.

ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಕೇಂದ್ರ ಸರ್ಕಾರದ ಪರ ಹಾಜರಾದರು. ಅಡ್ವೊಕೇಟ್ ಜನರಲ್ ಎ ಎ ಕುಂಭಕೋಣಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದರು. ಎಂಎಂಆರ್‌ಡಿಎ ಪರವಾಗಿ ವಕೀಲ ಸಾಕೇತ್ ಮೋನ್ ವಾದ ಮಂಡಿಸಿದರು. ಮಧ್ಯಂತರ ಪರಿಹಾರ ನೀಡುವಂತೆ ಡಿಸೆಂಬರ್ 4 ರಂದು ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಆರೆ ಕಾಲೋನಿಯಲ್ಲಿ ಮೆಟ್ರೊ ಕಾರ್ ಶೆಡ್ ನಿರ್ಮಿಸಲು ಆರಂಭದಲ್ಲಿ ಯೋಜಿಸಲಾಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿ ಬಾಂಬೆ ಹೈಕೋರ್ಟ್‌, ಸುಪ್ರೀಂ ಹೈಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸಲಾಯಿತು. ಕಳೆದ ವರ್ಷ ಶಿವಸೇನಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರೆ ಪ್ರದೇಶದ 800 ಎಕರೆ ಪ್ರದೇಶವನ್ನು ಮೀಸಲು ಅರಣ್ಯವೆಂದು ಘೋಷಿಸಿತು. ಬದಲಿಗೆ ಕಾಂಜುರ್ಮಾರ್ಗ್‌ನಲ್ಲಿ ಶೆಡ್ ನಿರ್ಮಾಣಕ್ಕೆ ನಿರ್ಧರಿಸಿತ್ತು.