ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ತಮ್ಮ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಉತ್ತರಾಖಂಡ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಯಾದ ಕೋಶ್ಯಾರಿ ಅವರು ತಮಗೆ ನಿಗದಿಗೊಳಿಸಿರುವ ಸರ್ಕಾರಿ ಬಂಗಲೆಗೆ ಮಾರುಕಟ್ಟೆ ಬಾಡಿಗೆ ದರ ಪಾವತಿಸಲು ವಿಫಲವಾಗಿದ್ದು, ಇದು ಉತ್ತರಾಖಂಡ ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಬೇಕು ಎಂದು ಕೋರಿ ಡೆಹ್ರಾಡೂನ್ ಮೂಲದ ಸರ್ಕಾರೇತರ ಸಂಸ್ಥೆಯೊಂದು ಉತ್ತರಾಖಂಡ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು. ಇದನ್ನು ಆಧರಿಸಿ ಹೈಕೋರ್ಟ್ ಕೋಶ್ಯಾರಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿರುವ ಕೋಶ್ಯಾರಿ ಅವರು ತಾವು ಮಹಾರಾಷ್ಟ್ರದ ಹಾಲಿ ರಾಜ್ಯಪಾಲರಾಗಿದ್ದು, ಸಂವಿಧಾನದ 361ನೇ ವಿಧಿ ಅಡಿ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸುವುದರಿಂದ ರಕ್ಷಣೆ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಸರ್ಕಾರಿ ಬಂಗಲೆಗೆ ತರ್ಕಹೀನವಾಗಿ ಮಾರುಕಟ್ಟೆ ಬಾಡಿಗೆಯನ್ನು ನಿರ್ಧರಿಸಲಾಗಿದೆ. ಡೆಹ್ರಾಡೂನ್‌ನಲ್ಲಿ ವಸತಿ ಪ್ರದೇಶಕ್ಕೆ ಇದು ಅತಿಹೆಚ್ಚು ಬಾಡಿಗೆಯಾಗಿದೆ ಎಂದು ಕೋಶ್ಯಾರಿ ವಿರುದ್ಧ ಅರ್ಜಿದಾರ ಎನ್‌ಜಿಒ ಮನವಿಯಲ್ಲಿ ವಿವರಿಸಿದೆ. ಇದನ್ನು ಆಧರಿಸಿ ಉತ್ತರಾಖಂಡ ಹೈಕೋರ್ಟ್ ಕೋಶ್ಯಾರಿ ಅವರಿಗೆ ನೋಟಿಸ್ ಜಾರಿಗೊಳಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲ ಅಮನ್ ಸಿನ್ಹಾ ಅವರು ಕೋಶ್ಯಾರಿ ಅವರನ್ನು ಪ್ರತಿನಿಧಿಸಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿರುವ ಮನವಿಯನ್ನು ವಕೀಲರಾದ ಅರ್ಧೇಂಧು ಮೌಲಿ ಪ್ರಸಾದ್ ಮತ್ತು ಪ್ರವೇಶ್ ಠಾಕೂರ್ ಅವರ ಮೂಲಕ ಸಲ್ಲಿಸಲಾಗಿದೆ.