Justice A Muhamed Mustaque  
ಸುದ್ದಿಗಳು

ಸಿಕ್ಕಿಂ, ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಮುಸ್ತಾಕ್ ಹಾಗೂ ಸೋನಕ್: ಕೇಂದ್ರ ಆದೇಶ

ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನಂತೆ ಈ ನೇಮಕಾತಿಗಳು ನಡೆದಿವೆ.

Bar & Bench

ಕೇರಳ ಹೈಕೋರ್ಟ್‌  ನ್ಯಾಯಮೂರ್ತಿ ಎ. ಮುಹಮದ್ ಮುಸ್ತಾಕ್ ಹಾಗೂ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಎಂ.ಎಸ್. ಸೋನಕ್ ಅವರನ್ನು ಕ್ರಮವಾಗಿ ಸಿಕ್ಕಿಂ ಹೈಕೋರ್ಟ್‌ ಹಾಗೂ ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸಿನಂತೆ ಈ ನೇಮಕಾತಿಗಳು ನಡೆದಿವೆ.

ಪ್ರಸ್ತುತ ಸಿಕ್ಕಿಂ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೀನಾಕ್ಷಿ ಮದನ್‌ ರೈ ಅವರ ಸ್ಥಾನವನ್ನು ನ್ಯಾ. ಮುಸ್ತಾಕ್‌ ತುಂಬಲಿದ್ದಾರೆ. ಸಿಕ್ಕಿಂ ಹೈಕೋರ್ಟ್‌ನಲ್ಲಿ ಪ್ರಸ್ತುತ ಇಬ್ಬರು ನ್ಯಾಯಮೂರ್ತಿಗಳಿದ್ದು, ನ್ಯಾಯಮೂರ್ತಿ ಮುಸ್ತಾಕ್ ಅವರ ನೇಮಕದಿಂದಾಗಿ ಅಲ್ಲಿನ ನ್ಯಾಯಮೂರ್ತಿಗಳ ಸಂಖ್ಯೆ ಮೂರಕ್ಕೆ ಏರಲಿದೆ.

Justice MS Sonak

ಜಾರ್ಖಂಡ್‌ ಹೈಕೋರ್ಟ್‌ ಹಾಲಿ ಮುಖ್ಯ ನ್ಯಾಯಮೂರ್ತಿ ತಾರ್ಲೋಕ್ ಸಿಂಗ್ ಚೌಹಾನ್ ಅವರು 2026ರ ಜನವರಿ 8ರಂದು ನಿವೃತ್ತಿಯಾಗಲಿದ್ದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ.ಎಸ್. ಸೋನಕ್ ಆ ಸ್ಥಾನ ಅಲಂಕರಿಸಲಿದ್ದಾರೆ. ಈ ವಿಷಯವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ನ್ಯಾಯಮೂರ್ತಿ ಮುಸ್ತಾಕ್ ಅವರು 1967ರಲ್ಲಿ ಜನಿಸಿದ್ದು, ಕಾನೂನು ಹಾಗೂ ಅಂತರರಾಷ್ಟ್ರೀಯ ಕಾನೂನು ಕ್ಷೇತ್ರದಲ್ಲಿ ವಿಶಾಲ ಅನುಭವ ಪಡೆದಿದ್ದಾರೆ. 2014ರಲ್ಲಿ ಕೇರಳ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2016ರಲ್ಲಿ ಕಾಯಂ ನ್ಯಾಯಮೂರ್ತಿಯಾದ ಅವರು 2024ರಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸೋನಕ್ ಅವರು 1964ರಲ್ಲಿ ಜನಿಸಿದ್ದು, 2013ರಲ್ಲಿ ಬಾಂಬೆ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು ಬಳಿಕ ಕಾಯಂ ನ್ಯಾಯಮೂರ್ತಿಯಾಗಿದ್ದರು. ಇತ್ತೀಚೆಗೆ ‘ಜೀವಂತ ಉಯಿಲುʼನೋಂದಾಯಿಸಿದ ಗೋವಾದ ಮೊದಲ ವ್ಯಕ್ತಿ ಎಂದು ಖ್ಯಾತರಾಗಿದ್ದರು. ತಾನು ಮಾತನಾಡಲು ಅಥವಾ ನಿರ್ಧಾರ ವ್ಯಕ್ತಪಡಿಸಲು ಅಸಮರ್ಥವಾಗಿರುವ ಸಂದರ್ಭದಲ್ಲಿ, ದೀರ್ಘಕಾಲದ ಜೀವ ನೆರವು ಅಥವಾ ಕೃತಕ ಜೀವಸಂರಕ್ಷಣಾ ಚಿಕಿತ್ಸೆ  ಬಯಸುವುದಿಲ್ಲ ಎಂಬ  ಇಚ್ಛೆಯನ್ನು ಮುಂಚಿತವಾಗಿ ದಾಖಲಿಸಿಕೊಳ್ಳಲು ಜೀವಂತ ಉಯಿಲು ಅವಕಾಶ ಕಲ್ಪಿಸುತ್ತದೆ.

ಜೀವಂತ ಉಯಿಲಿಗೆ ಸಂಬಂಧಿಸಿದ ಕಾಯಿದೆ ಜಾರಿ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಗೋವಾದ್ದಾಗಿದ್ದು ಭಾರತೀಯ ವೈದ್ಯಕೀಯ ಸಂಘದ (IMA) ಗೋವಾ ಶಾಖೆ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ‘ಅಡ್ವಾನ್ಸ್ಡ್ ಮೆಡಿಕಲ್ ಡೈರೆಕ್ಟಿವ್ಸ್’ ಕುರಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಜೀವಂತ ಉಯಿಲು ನೋಂದಾಯಿಸಿದ್ದರು.