ಬಾಂಬೆ ಹೈಕೋರ್ಟ್ ನ್ಯಾ. ರೇವತಿ ಮೋಹಿತೆ ಡೇರೆ, ಒಡಿಶಾ ಹೈಕೋರ್ಟ್ ನ್ಯಾ. ಸಂಗಂ ಕುಮಾರ್ ಸಾಹೂ ಅವರನ್ನು ಕ್ರಮವಾಗಿ ಮೇಘಾಲಯ ಹೈಕೋರ್ಟ್, ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದೇ ವೇಳೆ ಮೇಘಾಲಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸೌಮೇನ್ ಸೇನ್ ಅವರನ್ನು ಕೇರಳ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿದೆ.
ನ್ಯಾ. ಸೌಮೇನ್ ಸೇನ್ ಅವರನ್ನು ಕೇರಳ ಹೈಕೋರ್ಟ್‌ಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿಯೇ ನ್ಯಾ. ರೇವತಿ ಡೇರೆ ಅವರನ್ನು ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗುರುವಾರ ನೇಮಿಸಲಾಗಿದೆ. ಈ ಕುರಿತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ (ಸ್ವತಂತ್ರ ಖಾತೆ) ಅರ್ಜುನ್ ರಾಮ್ ಮೇಘವಾಲ್ ಅವರು ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್ 18ರಂದು ಸುಪ್ರೀಂ ಕೋರ್ಟ್ ಕೊಲೇಜಿಯಂ ಮಾಡಿದ ಶಿಫಾರಸಿನಂತೆ ನೇಮಕಾತಿ ನಡೆದಿದೆ. ನ್ಯಾ. ಡೇರೆ ಅವರು ಬಾಂಬೆ ಹೈಕೋರ್ಟ್‌ನ ಹಾಲಿ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.
ಪುಣೆಯಲ್ಲಿ ಜನಿಸಿದ ಜಸ್ಟಿಸ್ ಡೇರೆ ಅವರು ಸಿಂಬಯಾಸಿಸ್ ಲಾ ಕಾಲೇಜ್‌ನಿಂದ ಕಾನೂನು ಪದವಿ ಪಡೆದು, ಬಾಂಬೆ ಹೈಕೋರ್ಟ್‌ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. 2015ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದಿದ್ದ ಅವರು ಇದುವರೆಗೆ ಯಾವುದೇ ವರ್ಗಾವಣೆ ಇಲ್ಲದೆ ಬಾಂಬೆ ಹೈಕೋರ್ಟ್‌ನಲ್ಲಿಯೇ ಸೇವೆ ಸಲ್ಲಿಸಿದ್ದರು.
ಇನ್ನು ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಸಂಗಮ್ ಕುಮಾರ್ ಸಾಹೂ ಅವರು ಕಟಕ್ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಅವರು 2014 ಜುಲೈ 2ರಂದು ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ಇದೇ ವೇಳೆ ಕೇರಳ ಹೈಕೋರ್ಟ್‌ಗೆ ವರ್ಗಾವಣೆಯಾಗಿರುವ ಮೇಘಾಲಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಸೌಮೇನ್ ಸೇನ್ ಅವರು ಜನವರಿ 9ರಂದು ನಿವೃತ್ತಿಯಾಗಲಿರುವ ಕೇರಳ ಹೈಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ನಿತಿನ್ ಮಧುಕರ್ ಜಾಮ್ದಾರ್ ಅವರ ನಂತರ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ನ್ಯಾ. ಸೇನ್ ಅವರು 2025ರ ಸೆಪ್ಟೆಂಬರ್‌ನಲ್ಲಿ ಮೆಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇದಕ್ಕೂ ಮುನ್ನ 2011ರ ಏಪ್ರಿಲ್ 13ರಂದು ಅವರು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.