NCDRC


 
ಸುದ್ದಿಗಳು

ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಗ್ರಾಹಕ ಆಯೋಗಗಳ ಹಣಕಾಸು ವ್ಯಾಪ್ತಿ ಪರಿಷ್ಕರಿಸಿದ ಕೇಂದ್ರ ಸರ್ಕಾರ

ನಿಯಮಗಳ ಪ್ರಕಾರ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ₹ 2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸುವ ಅಧಿಕಾರ ಹೊಂದಿರುತ್ತದೆ.

Bar & Bench

ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ದೇಶದ ಗ್ರಾಹಕ ವೇದಿಕೆಗಳ ಹಣಕಾಸು ವ್ಯಾಪ್ತಿಯನ್ನು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ನಾಗರಿಕ ಸರಬರಾಜು ಸಚಿವಾಲಯ ಪರಿಷ್ಕರಿಸಿದೆ. ಗ್ರಾಹಕರ ರಕ್ಷಣೆ (ಜಿಲ್ಲಾ ಆಯೋಗ, ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗದ) ನಿಯಮಗಳು- 2021ಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸುವ ಮೂಲಕ ಹಣಕಾಸು ವ್ಯಾಪ್ತಿಯನ್ನು ಪರಿಷ್ಕರಿಸಲಾಗಿದೆ.

ಕಾಯಿದೆಯ ಸೆಕ್ಷನ್ 34, 47, 58 ಹಾಗೂ 101 ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಜಾರಿಗೆ ತರುವ ಸಂಬಂಧ ನಿಯಮಗಳಿಗೆ ಮಾರ್ಪಾಡು ಮಾಡಲಾಗಿದೆ. ನಿಯಮಗಳ ಪ್ರಕಾರ ಪರಿಷ್ಕೃತ ಹಣಕಾಸು ವ್ಯಾಪ್ತಿ ಈ ಕೆಳಗಿನಂತಿದೆ.

1. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ - ₹ 50 ಲಕ್ಷ ಮೊತ್ತ ಮೀರದ ದೂರುಗಳ ಅಂಗೀಕಾರಕ್ಕೆ ಅಧಿಕಾರ.

2. ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ - ₹ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಆದರೆ ₹ 2 ಕೋಟಿಗೂ ಕಡಿಮೆ ಮೌಲ್ಯಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ.

3. ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ - ₹ 2 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸುವ ಅಧಿಕಾರ.

ಜಿಲ್ಲಾ ಆಯೋಗಗಳು 2021ಕ್ಕೂ ಮೊದಲು ₹1 ಕೋಟಿ ಮೀರದ ದೂರುಗಳನ್ನು ಅಂಗೀಕರಿಸುವ ಅಧಿಕಾರ ಪಡೆದಿದ್ದವು. ರಾಜ್ಯ ಆಯೋಗಗಳು - ₹ ₹ 1 ಕೋಟಿಗಿಂತ ಹೆಚ್ಚಿನ ಮೊತ್ತದ ಆದರೆ ಆದರೆ ₹ 10 ಕೋಟಿ ಮೌಲ್ಯ ಮೀರದ ದೂರುಗಳ ವಿಚಾರಣೆ ನಡೆಸಬಹುದಿತ್ತು. ರಾಷ್ಟ್ರೀಯ ಆಯೋಗ ₹10 ಕೋಟಿಗಿಂತ ಹೆಚ್ಚಿನ ಮೊತ್ತದ ದೂರುಗಳನ್ನು ಅಂಗೀಕರಿಸುವ ಅಧಿಕಾರ ಪಡೆದಿತ್ತು.

ಗಮನಾರ್ಹವಾಗಿ, 2019ರ ಕಾಯಿದೆ, ಗ್ರಾಹಕ ವ್ಯಾಜ್ಯಗಳ ಪರಿಹಾರಕ್ಕಾಗಿ ಮೂರು ಹಂತದ ಅರೆ-ನ್ಯಾಯಾಂಗ ಕಾರ್ಯವಿಧಾನವನ್ನು ಘೋಷಿಸಿದೆ. ಅವುಗಳೆಂದರೆ ಜಿಲ್ಲಾ ಆಯೋಗಗಳು, ರಾಜ್ಯ ಆಯೋಗಗಳು ಮತ್ತು ರಾಷ್ಟ್ರೀಯ ಆಯೋಗ. ಎರಡೂ ಪಕ್ಷಕಾರರ ಒಪ್ಪಿಗೆಯೊಂದಿಗೆ ಮಧ್ಯಸ್ಥಿಕೆ ನಡೆಸಲು ಗ್ರಾಹಕರ ವ್ಯಾಜ್ಯಗಳ ಉಲ್ಲೇಖವನ್ನು ಸಹ ಕಾಯಿದೆ ಒಳಗೊಂಡಿದೆ.

[ಗ್ರಾಹಕ ರಕ್ಷಣಾ ನಿಯಮಾವಳಿ- 2021ನ್ನು ಇಲ್ಲಿಓದಿ]

Consumer_Protection_Rule_2021.pdf
Preview