ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಅಧಿಸೂಚನೆ ಪ್ರಕಟಿಸಿದ ಕೇಂದ್ರ ಸರ್ಕಾರ

ನ್ಯಾ. ಕೃಷ್ಣ ದೀಕ್ಷಿತ್‌ ಅವರು ಒಡಿಶಾ ಹೈಕೋರ್ಟ್‌ಗೆ, ನ್ಯಾ. ಕೆ ನಟರಾಜನ್‌ ಅವರು ಕೇರಳ, ಎನ್‌ ಎಸ್‌ ಸಂಜಯಗೌಡ ಅವರು ಗುಜರಾತ್‌ ಹಾಗೂ ನ್ಯಾ. ಹೇಮಂತ್‌ ಚಂದನಗೌಡರ್‌ ಅವರು ಮದ್ರಾಸ್‌ ಹೈಕೋರ್ಟ್‌ಗೆ ಕ್ರಮವಾಗಿ ವರ್ಗಾವಣೆಗೊಂಡಿದ್ದಾರೆ.

Bar & Bench

ರಾಜ್ಯ ವಕೀಲರ ಪರಿಷತ್‌ ಮತ್ತು ಬೆಂಗಳೂರು ವಕೀಲರ ಸಂಘದ ತೀವ್ರ ವಿರೋಧದ ನಡುವೆಯೂ ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಶಿಫಾರಸ್ಸನ್ನು ಆಧರಿಸಿ ಕೇಂದ್ರ ಸರ್ಕಾರವು ವರ್ಗಾವಣೆ ಸಂಬಂಧಿತ ಅಧಿಸೂಚನೆಯನ್ನು ಗುರುವಾರ ಪ್ರಕಟಿಸಿದೆ.

ಹಿರಿಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರನ್ನು ಒಡಿಶಾ ಹೈಕೋರ್ಟ್‌, ನ್ಯಾ. ಕೆ ನಟರಾಜನ್‌ ಅವರನ್ನು ಕೇರಳ ಹೈಕೋರ್ಟ್‌, ಎನ್‌ ಎಸ್‌ ಸಂಜಯಗೌಡ ಅವರನ್ನು ಗುಜರಾತ್‌ ಹೈಕೋರ್ಟ್‌ ಮತ್ತು ನ್ಯಾ. ಹೇಮಂತ್‌ ಚಂದನಗೌಡರ್‌ ಅವರನ್ನು ಮದ್ರಾಸ್‌ ಹೈಕೋರ್ಟ್‌ಗೆ ವರ್ಗಾಯಿಸಿ ಏಪ್ರಿಲ್‌ 21ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಇದನ್ನು ಆಧರಿಸಿ ಕೇಂದ್ರ ಸರ್ಕಾರವು ವರ್ಗಾವಣೆ ಮಾಡಿ ಅಧಿಸೂಚನೆ ಪ್ರಕಟಿಸಿದೆ.

ಎಎಬಿ ಪದಾಧಿಕಾರಿಗಳ ನಿಯೋಗವು ಕೇಂದ್ರ ಕಾನೂನು ಸಚಿವ ಅರ್ಜುನ್‌ ಮೇಘವಾಲ್‌ ಅವರನ್ನು ಭೇಟಿ ಮಾಡಿ, ಕೊಲಿಜಿಯಂ ಶಿಫಾರಸ್ಸಿನಂತೆ ವರ್ಗಾಯಿಸಬಾರದು ಎಂದು ಮನವಿ ಮಾಡಿತ್ತು. ಅಲ್ಲದೇ, ಒಂದು ದಿನ ಕಲಾಪ ಬಹಿಷ್ಕರಿಸುವ ಮೂಲಕ ಎಎಬಿಯು ಕೊಲಿಜಿಯಂ ನಿರ್ಧಾರಕ್ಕೆ ಸೆಡ್ಡು ಹೊಡೆದಿತ್ತು.

ಇನ್ನು, ಆಂಧ್ರ ಪ್ರದೇಶ ಹೈಕೋರ್ಟ್‌ನ ನ್ಯಾ. ಕೆ ಮನ್ಮಧ ರಾವ್‌ ಅವರನ್ನು ಕರ್ನಾಟಕ ಹೈಕೋರ್ಟ್‌ಗೆ, ತೆಲಂಗಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಪಿ ಶ್ರೀ ಸುಧಾ ಮತ್ತು ಕೆ ಸುರೇಂದರ್‌ ಅವರನ್ನು ಕ್ರಮವಾಗಿ ಕರ್ನಾಟಕ ಮತ್ತು ಮದ್ರಾಸ್‌ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರವು ಅಧಿಸೂಚನೆ ಪ್ರಕಟಿಸಿದೆ.