Five-judge Constitution Bench, EWS 
ಸುದ್ದಿಗಳು

ಇಡಬ್ಲ್ಯೂಎಸ್ ಮೀಸಲಾತಿ ಪ್ರಶ್ನಿಸಿದ್ದ ಅರ್ಜಿ: ಸೋಮವಾರ ಸುಪ್ರೀಂ ಕೋರ್ಟ್ ತೀರ್ಪು

ಸುಪ್ರೀಂ ಕೋರ್ಟ್ ಜಾಲತಾಣದ ಮಾಹಿತಿ ಪ್ರಕಾರ, ಎರಡು ಪ್ರತ್ಯೇಕ ತೀರ್ಪುಗಳನ್ನು ನ್ಯಾಯಾಲಯ ಘೋಷಿಸಲಿದ್ದು ಒಂದನ್ನು ಸಿಜೆಐ ಲಲಿತ್ ಅವರು ನೀಡಿದರೆ ಮತ್ತೊಂದು ನ್ಯಾ ಭಟ್ ಅವರಿಂದ ಪ್ರಕಟವಾಗಲಿದೆ.

Bar & Bench

ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯುಎಸ್) ಸೇರಿದವರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಿ ಸಂವಿಧಾನಕ್ಕೆ ಮಾಡಲಾದ 103ನೇ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆಬಿ ಪರ್ದಿವಾಲಾ ಅವರಿರುವ ಸಂವಿಧಾನ ಪೀಠ ತೀರ್ಪು ನೀಡಲಿದೆ.

ಸುಪ್ರೀಂ ಕೋರ್ಟ್‌ ಜಾಲತಾಣದ ಮಾಹಿತಿ ಪ್ರಕಾರ, ಎರಡು ಪ್ರತ್ಯೇಕ ತೀರ್ಪುಗಳನ್ನು ನ್ಯಾಯಾಲಯ ಘೋಷಿಸಲಿದ್ದು ಒಂದನ್ನು ಸಿಜೆಐ ಲಲಿತ್‌ ಅವರು ನೀಡಿದರೆ ಮತ್ತೊಂದು ನ್ಯಾ ಭಟ್‌ ಅವರಿಂದ ಪ್ರಕಟವಾಗಲಿದೆ.

ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೆ. 27ರಂದು ಮುಕ್ತಾಯಗೊಳಿಸಿತ್ತು.

ಮೀಸಲಾತಿಗೆ ಆರ್ಥಿಕ ವರ್ಗೀಕರಣವು ಏಕೈಕ ಆಧಾರವಾಗಿರಬಾರದು ಎಂಬ ಕಾರಣಕ್ಕಾಗಿ ತಿದ್ದುಪಡಿ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆಗಳಾದ ಜನಹಿತ್ ಅಭಿಯಾನ್‌ ಮತ್ತು ಯೂತ್ ಫಾರ್ ಈಕ್ವಾಲಿಟಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಲಿದೆ.

ತಿದ್ದುಪಡಿ  ಸಂವಿಧಾನದ ಮೂಲ ರಚನೆಯನ್ನು ಮತ್ತು ಇಂದ್ರ ಸಾಹ್ನಿ ಪ್ರಕರಣದಲ್ಲಿ ನೀಡಿದ ತೀರ್ಪಿನಂತೆ ಒದಗಿಸಲಾಗಿದ್ದ ಒಟ್ಟಾರೆ 50% ಮೀಸಲಾತಿ ಮಿತಿಯನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ವಿಚಾರಣೆ ವೇಳೆ ವಾದಿಸಿದ್ದರು. ಎಸ್‌ಸಿ/ಎಸ್‌ಟಿ/ಒಬಿಸಿಗಳಿಗೆ ಹೊರತಾದ ಇಡಬ್ಲ್ಯೂಎಸ್‌ ವರ್ಗಕ್ಕಾಗಿನ ಈ ಮೀಸಲಾತಿ ಮನಸೋ ಇಚ್ಛೆ ಮತ್ತು ಅತಿರೇಕದಿಂದ ಕೂಡಿದೆ ಎಂದು ಅವರು ಹೇಳಿದ್ದರು.

ಅಂದಿನ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಪ್ರಕರಣವನ್ನು ಪರಿಗಣಿಸಲು ತಿದ್ದುಪಡಿ ಕಾಯಿದೆಯ ಸಾಂವಿಧಾನಿಕ ಪ್ರಶ್ನೆಗಳನ್ನು ಈ ಕೆಳಗಿನಂತೆ ರೂಪಿಸಿದ್ದರು:

- ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ಸೇರಿದಂತೆ ವಿಶೇಷ ಸವಲತ್ತುಗಳನ್ನು ಒದಗಿಸಲು ಸರ್ಕಾರಕ್ಕೆ ಅನುಮತಿ ನೀಡುವ 103ನೇ ಸಾಂವಿಧಾನಿಕ ತಿದ್ದುಪಡಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎನ್ನಬಹುದೇ?

- ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ ವಿಶೇಷ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಅನುಮತಿ ನೀಡುವ ಮೂಲಕ 103ನೇ ಸಂವಿಧಾನ ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಬಹುದೆ?

- 103 ನೇ ಸಂವಿಧಾನ ತಿದ್ದುಪಡಿಯು ಇಡಬ್ಲ್ಯೂಎಸ್‌ ಮೀಸಲಾತಿ ವ್ಯಾಪ್ತಿಯಿಂದ ಎಸ್‌ಇಬಿಸಿ/ಒಬಿಸಿ/ಎಸ್‌ಸಿ/ಎಸ್‌ಟಿ ವರ್ಗಗಳನ್ನು ಹೊರಗಿಟ್ಟು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತಿದೆ ಎನ್ನಬಹುದೇ?