Karnataka High Court
Karnataka High Court 
ಸುದ್ದಿಗಳು

ಮತಾಂತರ ನಿಷೇಧ ಸುಗ್ರೀವಾಜ್ಞೆ ಪ್ರಶ್ನಿಸಿ ಅರ್ಜಿ; ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಹೈಕೋರ್ಟ್‌

Bar & Bench

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಸುಗ್ರೀವಾಜ್ಞೆ-2022 ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಅಲ್ಲದೇ, ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ನವದೆಹಲಿಯ ಎವಾಂಜಲಿಕಲ್‌ ಫೆಲೋಶಿಫ್‌ ಆಫ್‌ ಇಂಡಿಯಾ ಮತ್ತು ಬೆಂಗಳೂರಿನ ಮಾನವ ಹಕ್ಕುಗಳಿಗಾಗಿ ಅಖಿಲ ಭಾರತ ಕ್ರೈಸ್ತ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಜೆ ಎಂ ಖಾಜಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

2022ರ ಮೇ 17ರಂದು ಸುಗ್ರೀವಾಜ್ಞೆ ಜಾರಿಗೆ ಬಂದಿದ್ದು, ಇದು ಜಾತ್ಯತೀತ ವಾದಕ್ಕೆ ವಿರುದ್ಧವಾಗಿದೆ. ಅಲ್ಲದೇ, ಸಾರ್ವಜನಿಕ ಸುವ್ಯವಸ್ಥೆಗೆ ವಿರುದ್ಧವಾಗಿದ್ದು, ಸಂವಿಧಾನದ 25ನೇ ವಿಧಿಯಡಿ ಕಲ್ಪಿಸಲಾಗಿರುವ ಧರ್ಮ ಪ್ರಚಾರ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ. “ಆಕ್ಷೇಪಾರ್ಹವಾದ ಸುಗ್ರೀವಾಜ್ಞೆಯ ನಿಬಂಧನೆಗಳು ಸಂವಿಧಾನದ 21ನೇ ವಿಧಿ ಉಲ್ಲಂಘಿಸಲಿದ್ದು, ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಪಿತೂರಿ ಸಿದ್ಧಾಂತದ ಆಧಾರದ ಮೇಲೆ ಇದನ್ನು ಜಾರಿಗೆ ತರಲಾಗಿದ್ದು, ವಯಸ್ಕರಾಗಿದ್ದರೂ ಅವರನ್ನು ಅಕ್ರಮವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಭಾವಿಸಿದಂತಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ತಮ್ಮ ವೈಯಕ್ತಿಕ ನಿರ್ಧಾರಕ್ಕಾಗಿ ವ್ಯಕ್ತಿಯೊಬ್ಬರು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕು ಎಂದು ಸುಗ್ರೀವಾಜ್ಞೆಯ ನಿಬಂಧನೆ ಹೇಳುತ್ತದೆ. ಇದು ಆಯ್ಕೆ ಸ್ವಾತಂತ್ರ್ಯ, ಜೀವಿಸುವ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ. ಮದುವೆ ಅಥವಾ ಇತರೆ ಕಾರಣಕ್ಕೆ ಮತಾಂತರಗೊಳ್ಳುವುದನ್ನು ಸಿಂಧುಗೊಳಿಸಲು ಮತಾಂತರಗೊಂಡ ವ್ಯಕ್ತಿಯು ಜಿಲ್ಲಾ ದಂಡಾಧಿಕಾರಿ ಸಂಪರ್ಕಿಸಬೇಕು ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

“ಸುಗ್ರೀವಾಜ್ಞೆಯ ಸೆಕ್ಷನ್‌ 5ರ ಅಡಿ ಅಕ್ರಮವಾಗಿ ಮತಾಂತರ ಮಾಡಿಸಿದರೆ 3-5 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಅಕ್ರಮ ಮತಾಂತರದ ಸಂತ್ರಸ್ತರು ಅಪ್ರಾಪ್ತರಾಗಿದ್ದರೆ ಅಥವಾ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ್ದರೆ ಅಥವಾ ಮಹಿಳೆಯಾಗಿದ್ದರೆ 3-10 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಆಕ್ಷೇಪಾರ್ಹ ಸುಗ್ರೀವಾಜ್ಞೆಯಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವುದರ ಜೊತೆಗೆ ಆರೋಪಿಗೆ ಗರಿಷ್ಠ ಐದು ಲಕ್ಷ ದಂಡ ವಿಧಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ನಿಬಂಧನೆಯು ಜನರನ್ನು ಗುರಿಯಾಗಿಸಿ ಕ್ಷುಲ್ಲಕ ಮತ್ತು ಹುಸಿ ಪ್ರಕರಣ ದಾಖಲಿಸಲು ಅವಕಾಶ ಮಾಡಿಕೊಡಬಹುದು” ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.