ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬಿಬಿಸಿ ರೂಪಿಸಿರುವ ಇಂಡಿಯಾ: ದ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರವನ್ನು ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ವೇದಿಕೆಯಲ್ಲಿ ನಿರ್ಬಂಧಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿರುವ ಮನವಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದೆ [ಎನ್ ರಾಮ್ ಮತ್ತು ಇತರರು ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಪ್ರಕರಣದಲ್ಲಿ ಮಧ್ಯಂತರ ಆದೇಶ ಮಾಡಲು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ನೇತೃತ್ವದ ವಿಭಾಗೀಯ ಪೀಠವು ನಿರಾಕರಿಸಿದ್ದು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿದೆ.
“ನೋಟಿಸ್ ಜಾರಿ ಮಾಡಲಾಗಿದ್ದು, 2023ರ ಏಪ್ರಿಲ್‌ಗೆ ವಿಚಾರಣೆ” ಮುಂದೂಡಲಾಗಿದೆ ಎಂದು ಆದೇಶಿಸಲಾಯಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಯು ಸಿಂಗ್ ಅವರು ಶೀಘ್ರದಲ್ಲಿ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದ್ದು, ಇದಕ್ಕೆ ಪೀಠವು ನಿರಾಕರಿಸಿತು.
“ಇದಕ್ಕೆ ಪ್ರತಿಕ್ರಿಯೆ, ಪ್ರತ್ಯುತ್ತರ ಬೇಕಿದೆ. ನೋಟಿಸ್ ಜಾರಿಯಾದ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು. ಆನಂತರ ಎರಡು ವಾರಗಳಲ್ಲಿ ಪ್ರತ್ಯುತ್ತರ ದಾಖಲಿಸಬೇಕು” ಎಂದು ಪೀಠ ಹೇಳಿದೆ. ಸರ್ಕಾರದ ವಾದ ಆಲಿಸದೇ ಮಧ್ಯಂತರ ಆದೇಶ ಮಾಡಲಾಗದು ಎಂದು ನ್ಯಾಯಾಲಯ ಹೇಳಿದ್ದು, ಮುಂದಿನ ವಿಚಾರಣೆ ವೇಳೆಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸುವಂತೆ ಪೀಠ ಆದೇಶಿಸಿದೆ.
ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಂದು ಮುಖ್ಯಮಂತ್ರಿಯಾಗಿದ್ದ ಹಾಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರವನ್ನು ಸಾಕ್ಷ್ಯ ಚಿತ್ರದಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಸರ್ಕಾವು ಆನ್‌ಲೈನ್ ವೇದಿಕೆಯಲ್ಲಿ ಸಾಕ್ಷ್ಯ ಚಿತ್ರವನ್ನು ನಿರ್ಬಂಧಿಸಿತ್ತು. ಅದಾಗ್ಯೂ, ದೇಶದ ಹಲವು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಪ್ರಸಾರ ಮಾಡಲಾಗಿತ್ತು.