CM Siddaramaiah, Minister Bharati Suresh & HC 
ಸುದ್ದಿಗಳು

ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ಗೆ ಇ ಡಿ ಸಮನ್ಸ್‌: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಅಪರಾಧ ಪ್ರಕ್ರಿಯೆ ಇಲ್ಲದಿರುವಾಗ ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತದೆ? ಪಿಎಂಎಲ್‌ಎ ಅನ್ವಯಿಸಲು ಹಣ ವರ್ಗಾವಣೆಯಾಗಿರಬೇಕು. ಇಲ್ಲಿ ಎಲ್ಲಿ ಹಣ ವರ್ಗಾವಣೆಯಾಗಿದೆ?" ಎಂದು ಪ್ರಶ್ನಿಸಿದ ಸಂದೇಶ್‌ ಚೌಟ.

Bar & Bench

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಅನುಮಾನದ ಆಧಾರದಲ್ಲಿ ಸಮನ್ಸ್‌ ಜಾರಿಗೊಳಿಸಲಾಗದು. ನಂಬಲರ್ಹ ಕಾರಣಗಳನ್ನು ನೀಡಬೇಕಾಗುತ್ತದೆ. ಆಕ್ಷೇಪಕ್ಕೆ ಗುರಿಯಾಗಿರುವ 14 ನಿವೇಶನಗಳ ಹಂಚಿಕೆಯೇ ಅಪರಾಧ ಎಂದು ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಹೇಳುತ್ತಿದೆ ಎಂದು ಅರ್ಜಿದಾರರ ಪರ ವಕೀಲರು ಪ್ರಶ್ನಿಸಿದ್ದು, ಕರ್ನಾಟಕ ಹೈಕೋರ್ಟ್‌ ಆದೇಶ ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರು ಮತ್ತು ತನಿಖೆ ಹಾಗೂ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್‌ 50ರ ಅಡಿ ಜಾರಿ ಮಾಡಿರುವ ಸಮನ್ಸ್‌ ಪ್ರಶ್ನಿಸಿ ಪ್ರತ್ಯೇಕವಾಗಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ ಅವರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಇಂದು ಪೂರ್ಣಗೊಳಿಸಿತು.

ಪಾರ್ವತಿ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪಾರ್ವತಿ ಅವರು ಮುಡಾಗೆ ಆಕ್ಷೇಪಾರ್ಹವಾದ 14 ನಿವೇಶನಗಳನ್ನು 2024ರ ಅಕ್ಟೋಬರ್‌ 10ರಂದು ಮರಳಿಸದ ದಿನವೇ ಜಾರಿ ನಿರ್ದೇಶನಾಲಯವು ಇಸಿಐಆರ್‌ ದಾಖಲಿಸಿದೆ. ಅಪರಾಧ ಪ್ರಕ್ರಿಯೆ ಇಲ್ಲದಿರುವಾಗ ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತದೆ? ಪಿಎಂಎಲ್‌ಎ ಅನ್ವಯಿಸಲು ಹಣ ವರ್ಗಾವಣೆಯಾಗಿರಬೇಕು. ಇಲ್ಲಿ ಎಲ್ಲಿ ಹಣ ವರ್ಗಾವಣೆಯಾಗಿದೆ? ಲೋಕಾಯುಕ್ತ ಎಫ್‌ಐಆರ್‌ ದಾಖಲಿಸಿದ ಬೆನ್ನಿಗೇ ಆತುರದಲ್ಲಿ ಇ ಡಿ ಪ್ರಕರಣ ದಾಖಲಿಸಿದೆ. ಇಲ್ಲಿ ಪ್ರಕರಣ ದಾಖಲಿಸಲು ಇ ಡಿಗೆ ವ್ಯಾಪ್ತಿಯೇ ಇಲ್ಲ” ಎಂದರು.

“ಆಕ್ಷೇಪಾರ್ಹ ನಿವೇಶನಗಳು ಅಪರಾಧ ಪ್ರಕ್ರಿಯೆ ಎಂದು ಇ ಡಿಯು ಆಕ್ಷೇಪಣೆಯಲ್ಲಿ ವಿವರಿಸಿದೆ. ಆದರೆ, ಈಗ ಬರೀ 14 ನಿವೇಶನ ಮಾತ್ರವಲ್ಲ. ಮುಡಾ ಹಂಚಿಕೆ ಮಾಡಿರುವ ಎಲ್ಲಾ ನಿವೇಶನಗಳ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಇ ಡಿ ಹೇಳುತ್ತಿದೆ. ಪ್ರೆಡಿಕೇಟ್‌ ಅಪರಾಧವನ್ನು (ಅಕ್ರಮ ಸಂಪತ್ತಿನ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಲೋಕಾಯುಕ್ತರು ತನಿಖೆ ನಡೆಸುತ್ತಿರುವಾಗ ಇ ಡಿ ಮತ್ತೆ ಅದನ್ನು ತನಿಖೆ ನಡೆಸಲಾಗದು. 160 ನಿವೇಶನಗಳನ್ನು ಜಪ್ತಿ ಮಾಡಲಾಗಿದೆ ಎಂದು ಇ ಡಿ ಹೇಳಿದೆ. ಹಾಲಿ ಪ್ರಕರಣಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ, ಇಡೀ ಪ್ರಕ್ರಿಯೆ ವಜಾ ಮಾಡಬೇಕು ಎಂದು ಕೋರುತ್ತಿದ್ದೇನೆ” ಎಂದರು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ನಿಯಮಗಳನ್ನು ಉಲ್ಲಂಘಿಸಿ ಮುಡಾ ನಿವೇಶನಗಳನ್ನು ಹಂಚಿಕೆ ಮಾಡಿದೆ ಎಂದು ದೂರು ಬಂದಿದೆ. ಹೀಗಾಗಿ, 14 ನಿವೇಶನಗಳಿಗೆ ಸೀಮಿತವಾಗಿ ತನಿಖೆ ನಡೆಸುತ್ತಿಲ್ಲ. ಪ್ರೆಡಿಕೇಟ್‌ ಅಪರಾಧ ದಾಖಲಾದ ಬಳಿಕ ಅಪರಾಧ ಪ್ರಕರಣ ದಾಖಲಿಸಿ ತನಿಖೆ ನಡೆಸದಂತೆ ತಮಗೆ ಯಾವುದೇ ನಿರ್ಬಂಧವಿಲ್ಲ. ಮುಡಾ ತನಿಖೆಯಲ್ಲಿ ಸಾಕಷ್ಟು ಹುಳುಕುಗಳಿವೆ. ತನಿಖೆ ಪ್ರಗತಿಯಲ್ಲಿದೆ” ಎಂದು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಲಾಯಿತು.

“ಸಂಬಂಧಿಗಳ ಹೆಸರಿನಲ್ಲಿ ಹಲವಾರು ಮಂದಿ ನಿವೇಶನಗಳನ್ನು ಖರೀದಿಸಿದ್ದಾರೆ. ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳು ಹಗರಣದ ಒಂದು ಭಾಗವಷ್ಟೆ. ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ನಿವೇಶನ ಹಂಚಿಕೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ನೋಡಬೇಕು. ಹೀಗಾಗಿ, ಅವರ ಸಂಬಂಧಿಗಳಿಂದ ಮಾಹಿತಿ ಸಂಗ್ರಹಿಸಲು ಅನುಮತಿಸಬೇಕು. ಪ್ರಶ್ನೆ ಮಾಲಿಕೆಯನ್ನು ಸಮನ್ಸ್‌ ಜೊತೆಗೆ ಸೇರಿಸಿದ್ದೇವೆ. ಇದು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗದು” ಎಂದರು.

“ನಿವೇಶನಗಳ ಹಂಚಿಕೆಯು ಕ್ರಿಮಿನಲ್‌ ಚಟುವಟಿಕೆಯಾಗಿದೆ. ಆಕ್ಷೇಪಾರ್ಹವಾದ 14 ನಿವೇಶನಗಳಿಗೆ ಅಪರಾಧ ಪ್ರಕ್ರಿಯೆ ಚಹರೆಯಿದೆ. ಅವುಗಳನ್ನು ಹಿಂದಿರುಗಿಸಿದ ಮಾತ್ರಕ್ಕೆ ಅದು ಹೋಗುವುದಿಲ್ಲ. ಸಮನ್ಸ್‌ ಜಾರಿಗೊಳಿಸುವ ಮೂಲಕ ನಾವು ಸಿವಿಲ್‌ ತನಿಖೆ ನಡೆಸಿದ್ದೇವೆ. ಇದನ್ನು ವಜಾ ಮಾಡುವಂತೆ ಕೋರುವ ಪ್ರಶ್ನೆ ಉದ್ಭವಿಸುವುದಿಲ್ಲ. ಪ್ರೆಡಿಕೇಟ್‌ ಅಪರಾಧದ ಬೆನ್ನಿಗೇ ಅಪರಾಧ ಪ್ರಕ್ರಿಯೆ ಕಂಡುಬಂದಿದ್ದು, ಅದರ ಭಾಗವಾಗಿ ಸಮನ್ಸ್‌ ಜಾರಿಗೊಳಿಸಲಾಗಿದೆ. ಇದು ಸಿವಿಲ್‌ ತನಿಖೆಯಾಗಿದ್ದು, ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆ” ಎಂದರು.

ಆಗ ಪೀಠವು “ಅರ್ಜಿದಾರರು ತನಿಖೆಗೆ ಸಹಕರಿಸದಿದ್ದರೆ ಏನು ಮಾಡುತ್ತೀರಿ?” ಎಂದಿತು. ಆಗ ಕಾಮತ್‌ ಅವರು “ಇದಕ್ಕೆ ಕಾನೂನಿನ ನಿಬಂಧನೆಯಡಿ ಮುಂದುವರಿಯಲಾಗುವುದು” ಎಂದರು.

ಅಂತಿಮವಾಗಿ ಚೌಟ ಅವರು “ಮೂಲ ಅಂಶಗಳು ನಾಪತ್ತೆಯಾಗಿದ್ದು, ಅಸಂಗತ ತನಿಖೆಗೆ ಅನುಮತಿಸಲಾಗದು. ಸಮನ್ಸ್‌ ಜಾರಿಗೊಳಿಸಲು ಆಧಾರ ಇರಬೇಕು. ಅನುಮಾನದ ಆಧಾರದಲ್ಲಿ ಸಮನ್ಸ್‌ ಜಾರಿಗೊಳಿಸಲಾಗದು. ನಂಬಲರ್ಹ ಕಾರಣಗಳು ಇರಬೇಕಾಗುತ್ತವೆ. ಪಾರ್ವತಿ ಅವರು ಮುಖ್ಯಮಂತ್ರಿ ಪತ್ನಿಯಾಗಿದ್ದು, ಆರೋಪ ಬಂದಾಗ ಮುಂಚಿತವಾಗಿ ಅದನ್ನು ಹತ್ತಿಕ್ಕುವ ಕೆಲಸ ಮಾಡಬೇಕಾದ ನೈತಿಕ ಜವಾಬ್ದಾರಿ ಇದೆ. ಇದರ ಭಾಗವಾಗಿ ಅವರು 14 ನಿವೇಶನಗಳನ್ನು ಹಿಂದಿರುಗಿಸಿದ್ದಾರೆ. ನಿವೇಶನ ಹಂಚಿಕೆಯೇ ಅಪರಾಧ ಎಂದು ಯಾವ ಆಧಾರದಲ್ಲಿ ಜಾರಿ ನಿರ್ದೇಶನಾಲಯ ಹೇಳುತ್ತಿದೆ” ಎಂದು ಪ್ರಶ್ನಿಸಿದರು.

ಆಗ ಪೀಠವು “ಪಾರ್ವತಿ ಅವರು ನಿವೇಶನ ಹಿಂದಿರುಗಿಸಿದ ಮಾತ್ರಕ್ಕೆ ಪ್ರೆಡಿಕೇಟ್‌ ಅಪರಾಧ ಹೋಗುವುದಿಲ್ಲ” ಎಂದಿತು. ಅಂತಿಮವಾಗಿ ಸುಮಾರು ಒಂದೂವರೆ ತಾಸು ವಾದ-ಪ್ರತಿವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿತು.