ಸಿಎಂ ಪತ್ನಿ, ಸಚಿವ ಬೈರತಿ ಸುರೇಶ್‌ ವಿರುದ್ಧದ ಇ ಡಿ ಸಮನ್ಸ್‌ಗೆ ತಡೆ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಿದ ಹೈಕೋರ್ಟ್‌

ಜಾರಿ ನಿರ್ದೇಶನಾಲಯಕ್ಕೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌.
CM Siddaramaiah, Minister Bharati Suresh & HC
CM Siddaramaiah, Minister Bharati Suresh & HC
Published on

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿರುವ ಸಮನ್ಸ್‌ಗೆ ತಡೆಯಾಜ್ಞೆ ನೀಡಿರುವ ಮಧ್ಯಂತರ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ವಿಸ್ತರಿಸಿದೆ.

ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್‌ ಪ್ರತ್ಯೇಕವಾಗಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಬೈರತಿ ಸುರೇಶ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ನಿವೇಶನ ಹಂಚಿಕೆ ಪ್ರಕರಣದಲ್ಲಿ ಯಾವುದೇ ಅಪರಾಧ ಅಥವಾ ಅಪರಾಧ ಪ್ರಕ್ರಿಯೆ ಇಲ್ಲ. ಯಾವುದೇ ಪ್ರೆಡಿಕೇಟ್‌ ಅಪರಾಧದಲ್ಲಿ (ಅಕ್ರಮ ಗಳಿಕೆಗೆ ಕಾರಣವಾದ ಮೂಲ ಅಪರಾಧ) ಸುರೇಶ್‌ ಭಾಗಿಯಾಗಿಲ್ಲ. 2023ರ ಜೂನ್‌ನಲ್ಲಿ ಸುರೇಶ್‌ ನಗರಾಭಿವೃದ್ಧಿ ಮಂತ್ರಿಯಾಗಿದ್ದಾರೆ. ಅಕ್ರಮ ನಿವೇಶನಗಳಿಗೆ ಸಂಬಂಧಿಸಿದ ಇದು ಅಪರಾಧ ಪ್ರಕ್ರಿಯೆಯಾಗಿದ್ದು, ಯಾವ ರೀತಿಯಲ್ಲಿ ಸುರೇಶ್‌ ಇದಕ್ಕೆ ಸಂಬಂಧಿಸಿದ್ದಾರೆ? ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ಗೆ ಇ ಡಿ ಜಾರಿ ಮಾಡಿದ್ದ ಸಮನ್ಸ್‌ ಅನ್ನು ಸಮನ್ವಯ ಪೀಠವು ವಜಾ ಮಾಡಿದ್ದು, ಇ ಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಸ್ವಾತಂತ್ರ್ಯವನ್ನು ಹೈಕೋರ್ಟ್‌ ನಟೇಶ್‌ ಅವರಿಗೆ ಕಲ್ಪಿಸಿದೆ” ಎಂದರು.

ಮುಂದುವರಿದು, “ಪ್ರಕರಣದಲ್ಲಿ ಸುರೇಶ್‌ ಪಾತ್ರ ಏನಿದೆ ಎಂಬುದನ್ನು ಅವರು ತೋರಿಸಲಿ. ಜಾರಿ ನಿರ್ದೇಶನಾಲಯದ ಪ್ರಶ್ನೆ ಮಾಲಿಕೆಯು ಸುರೇಶ ಖಾಸಗಿ ಹಕ್ಕಿಗೆ ಹಾನಿ ಮಾಡುವಂತಿದೆ. ಖಾಸಗಿ ದೂರನ್ನು ಆಧರಿಸಿ ಇ ಡಿ ಇಸಿಐಆರ್‌ ದಾಖಲಿಸಿದೆ. ಖಾಸಗಿ ದೂರಿನಲ್ಲಿ ಸುರೇಶ ಹೆಸರಿನ ಉಲ್ಲೇಖವೇ ಇಲ್ಲ. ಹೀಗಿರುವಾಗ ನೋಟಿಸ್‌ ಜಾರಿ ಮಾಡಿರುವ ಹಿಂದಿನ ಉದ್ದೇಶವೇನು? ಪ್ರಶ್ನೆ ಮಾಲಿಕೆಯ ಮೂಲಕ ಸುರೇಶ್‌ ಸಹೋದರಿ, ಭಾವ, ಮೊಮ್ಮಕ್ಕಳು ಇತ್ಯಾದಿ ಮಾಹಿತಿಯನ್ನು ಇ ಡಿ ಕೇಳಿದೆ. ಇದೆಲ್ಲವೂ ಪ್ರೆಡಿಕೇಟ್‌ ಅಪರಾಧಕ್ಕೆ ಹೇಗೆ ಸಂಬಂಧಿಸುತ್ತದೆ? ಪಿತಾರ್ಜಿತ ಮತ್ತು ಸ್ವಯಂ ಸಂಪಾದನೆ ಆಸ್ತಿಯ ವಿವರ ಕೇಳಲಾಗಿದೆ. ಇದೆಲ್ಲಕ್ಕೂ ಸುರೇಶ್‌ ಹೇಗೆ ಉತ್ತರದಾಯಿಯಾಗುತ್ತಾರೆ? ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ” ಎಂದು ವಾದ ಪೂರ್ಣಗೊಳಿಸಿದರು.

ಸಿಎಂ ಪಾರ್ವತಿ ಪರವಾಗಿ ವಾದ ಆರಂಭಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪ್ರೆಡಿಕೇಟ್‌ ಅಪರಾಧದ ಕುರಿತು ತನಿಖೆ ನಡೆಯುತ್ತಿರುವಾಗ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ತನಿಖೆ ನಡೆಸಲು ಅವಕಾಶವಿದೆಯೇ? ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ ನಾಲ್ಕೇ ದಿನಕ್ಕೆ ಇಸಿಐಆರ್‌ ದಾಖಲಿಸಲಾಗಿದೆ. ನಟೇಶ್‌ ವಿರುದ್ಧ ಪ್ರಕರಣ ವಜಾ ಮಾಡಿರುವುದು ಈ ಪ್ರಕರಣದಲ್ಲಿ ಏನು ಪರಿಣಾಮ ಬೀರಲಿದೆ? ಅಪರಾಧ ಪ್ರಕ್ರಿಯೆ ಮತ್ತು ಯಾವಾಗ ಜಾರಿ ನಿರ್ದೇಶನಾಲಯವು ಇಸಿಐಆರ್‌ ದಾಖಲಿಸಲು ವ್ಯಾಪ್ತಿ ಪಡೆಯುತ್ತದೆ ಎಂಬುದರ ಕುರಿತು ವಾದಿಸಲಿದ್ದೇನೆ” ಎಂದರು.

Also Read
ಸಿಎಂ ಪತ್ನಿ ಪಾರ್ವತಿ, ಸಚಿವ ಬೈರತಿ ಸುರೇಶ್‌ ವಿರುದ್ಧದ ಇ ಡಿ ಸಮನ್ಸ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್‌

“ಪಿಎಂಎಲ್‌ಎ ಅನ್ವಯಿಸಲು ಆರೋಪಿಯ ಅನುಭವದಲ್ಲಿ (ಎಂಜಾಯ್‌ಮೆಂಟ್‌) ಹಣವಿರಬೇಕು. ಮಂಜೂರಾಗಿದ್ದ‌ ನಿವೇಶನಗಳನ್ನು ಹಿಂದಿರುಗಿಸಲಾಗಿದ್ದು, ಅವುಗಳು ಸದ್ಯ ಮುಡಾದ ಬಳಿ ಇವೆ” ಎಂದರು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದರು. ಹೀಗಾಗಿ, ಕಾಮತ್‌ ಅವರಿಗೆ ಒಂದು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿತು.

Kannada Bar & Bench
kannada.barandbench.com