ಹಣ ಪಣಕ್ಕಿಟ್ಟು ಆಡಲಾಗುವ ಆನ್‌ಲೈನ್ ಆಟಗಳನ್ನು ನಿಷೇಧಿಸಿ ಈಚೆಗೆ ಕೇಂದ್ರ ಸರ್ಕಾರ ರೂಪಿಸಿರುವ ಆನ್‌ಲೈನ್ ಗೇಮಿಂಗ್ (ಉತ್ತೇಜನ ಮತ್ತು ನಿಯಂತ್ರಣ) ಕಾಯಿದೆ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶನಿವಾರ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆರ್ಯಮಾ ಸುಂದರಮ್ ಅವರು “ಕಾಯಿದೆಯನ್ನು ಪ್ರಶ್ನಿಸಲಾಗಿದೆ. ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ್ದು, ಅದರ ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ. ಇಲ್ಲಿ ಲಕ್ಷಾಂತರ ಮಂದಿಯ ಉದ್ಯೋಗದ ವಿಚಾರ ಅಡಕವಾಗಿದೆ. ರಾತ್ರೋರಾತ್ರಿ ಗೇಮಿಂಗ್ ಕ್ಷೇತ್ರವನ್ನು ಮುಚ್ಚಿದರೆ ಅದರಿಂದ ಭಾರಿ ಅಪಾಯ ಎದುರಾಗಲಿದೆ. ನಮ್ಮ ವಾದ ಪೂರ್ಣಗೊಳ್ಳುವವರೆಗೆ ಕೇಂದ್ರ ಸರ್ಕಾರವು ಕಾಯಿದೆಯ ಅಧಿಸೂಚನೆ ಪ್ರಕಟಿಸಬಾರದು ಮತ್ತು ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಬೇಕು. ಇಲ್ಲವೇ, ಕಾಯಿದೆಯ ಅಧಿಸೂಚನೆ ಪ್ರಕಟಿಸುವುದಕ್ಕೂ ಒಂದು ವಾರ ಮುಂಚೆ ನಮಗೆ ಮಾಹಿತಿ ನೀಡಿದರೆ ನ್ಯಾಯಾಲಯದ ಮುಂದೆ ಬರುತ್ತೇವೆ” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು “ರಾಷ್ಟ್ರಪತಿಗಳು ಮಸೂದೆಗೆ ಅಂಕಿತ ಹಾಕಿದ ಬಳಿಕ ಅಧಿಸೂಚನೆ ಪ್ರಕಟಿಸುವುದು ಸಾಂವಿಧಾನಿಕ ಪ್ರಕ್ರಿಯೆ. ಯಾರಿಗೋ ಸಮಸ್ಯೆಯಾಗಿದೆ ಎಂದು ಕಾಯಿದೆಯ ಅಧಿಸೂಚನೆ ಪ್ರಕಟಿಸುವುದಕ್ಕೂ ಮುನ್ನ ಅವರಿಗೆ ಮುಂಚಿತವಾಗಿ ತಿಳಿಸುವ ಅಗತ್ಯವಿಲ್ಲ. ಇದರಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಇಲ್ಲಿ ಗಡಿಯಾಚೆಗಿನ ಪರಿಣಾಮಗಳಿದ್ದು, ನೋಟಿಸ್ ಜಾರಿ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ” ಎಂದರು.
ಆಗ ಪೀಠವು “ಕಾಯಿದೆಯ ಅಧಿಸೂಚನೆ ಶೀಘ್ರದಲ್ಲಿ ಆಗುತ್ತದೆಯೇ?” ಎಂದು ಮೆಹ್ತಾ ಅವರನ್ನು ಪ್ರಶ್ನಿಸಿತು. ಅದಕ್ಕೆ ಮೆಹ್ತಾ ಅವರು “ಈ ವಿಚಾರದಲ್ಲಿ ಸೂಚನೆ ಪಡೆಯಬೇಕು. ಆದರೆ, ಅಧಿಸೂಚನೆ ಪ್ರಕಟವಾಗಲಿದೆ” ಎಂದರು.
ಇದನ್ನು ಆಲಿಸಿದ ಪೀಠವು ಕಾಯಿದೆಯ ಸೆಕ್ಷನ್‌ಗಳಾದ 2(1)(G), 5, 6, 7 ಮತ್ತು 9ಕ್ಕೆ ತಡೆ ನೀಡಬೇಕು. ಅರ್ಜಿದಾರರ ವಿರುದ್ಧ ಯಾವುದೇ ದಂಡನೀಯ ಕ್ರಮಕೈಗೊಳ್ಳದಂತೆ ನಿರ್ದೇಶಿಸಬೇಕು ಎಂದು ಕೋರಿರುವ ಮಧ್ಯಂತರ ಕೋರಿಕೆಗೆ ಕೇಂದ್ರ ಸರ್ಕಾರವು ಸೆಪ್ಟೆಂಬರ್ 8ರೊಳಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.