Chief Justice Ritu Raj Awasthi, Justice Sachin Shankar Magdum and Karnataka HC 
ಸುದ್ದಿಗಳು

ಚರ್ಚ್‌ಗಳ ಸಮೀಕ್ಷೆಗೆ ರಾಜ್ಯ ಸರ್ಕಾರದ ಆದೇಶ: ಸಮೀಕ್ಷೆ ಆಕ್ಷೇಪಿಸಿರುವ ಅರ್ಜಿ ವಿಚಾರಣೆಗೆ ಮುಂದಾದ ಹೈಕೋರ್ಟ್‌

ಅಲ್ಪಸಂಖ್ಯಾತರ ನಿರ್ದೇಶನಾಲಯವು ಹೊರಡಿಸಿರುವ ಆದೇಶವು ಅರ್ಥಹೀನ, ತಾರತಮ್ಯ ಮತ್ತು ಸಂವಿಧಾನದ ಅಡಿ ದೊರೆತಿರುವ ರಾಜ್ಯದಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಜನರ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Siddesh M S

ರಾಜ್ಯದಲ್ಲಿರುವ ಚರ್ಚ್‌ಗಳ ಕುರಿತು ಮಾಹಿತಿ ಸಂಗ್ರಹಿಸಲು ಜುಲೈ 7ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ನಡೆಸಲಿದೆ.

ಮನವಿಯ ಜೊತೆ ಸಲ್ಲಿಸಲಾಗಿರುವ ʼಎʼನಿಂದ ʼಸಿʼ ವರೆಗಿನ ಅನುಬಂಧದ ಭಾಷಾಂತರದ ಪ್ರತಿಗಳನ್ನು ಸಲ್ಲಿಸುವಂತೆ ಅರ್ಜಿದಾರ ಸಂಸ್ಥೆ ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ಶುಕ್ರವಾರ ನಿರ್ದೇಶಿಸಿದೆ.

ಅಲ್ಪಸಂಖ್ಯಾತರ ನಿರ್ದೇಶನಾಲಯವು ಹೊರಡಿಸಿರುವ ಆದೇಶವು ಅರ್ಥಹೀನ, ತಾರತಮ್ಯ ಮತ್ತು ಸಂವಿಧಾನದ ಅಡಿ ದೊರೆತಿರುವ ರಾಜ್ಯದಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಜನರ ಖಾಸಗಿ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ಚರ್ಚ್‌ಗಳು ಇರುವ ಸ್ಥಳ, ತಾಲ್ಲೂಕು, ಜಿಲ್ಲೆ ಮತ್ತು ಅವುಗಳ ವಿಧಾನಸಭಾ ಕೇತ್ರದ ವ್ಯಾಪ್ತಿಯ ದತ್ತಾಂಶವನ್ನು ಸಮೀಕ್ಷೆಯಲ್ಲಿ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಜೊತೆಗೆ ಸಂಸ್ಥೆಯ ವಿಳಾಸ, ಖಾತೆಯ ನಂಬರ್‌, ಸರ್ವೆ ನಂಬರ್‌ ಮತ್ತು ಚರ್ಚಿನ ಪಾದ್ರಿಯ ವಿವರನ್ನು ಸಂಗ್ರಹಿಸಲು ಆದೇಶ ಮಾಡಲಾಗಿದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಯಾವ ಕಾರಣಕ್ಕಾಗಿ ಚರ್ಚ್‌ಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಸರ್ಕಾರದ ಆಕ್ಷೇಪಾರ್ಹ ಆದೇಶದಲ್ಲಿ ವಿವರಿಸಲಾಗಿಲ್ಲ. ಅಲ್ಪಸಂಖ್ಯಾತರ ವರ್ಗಕ್ಕೆ ಬರುವ ಇತರೆ ಸಮುದಾಯಗಳನ್ನು ಹೊರತುಪಡಿಸಿ ಕೇವಲ ಚರ್ಚ್‌ಗಳಿಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ಏಕೆ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿಲ್ಲ. ಮಾಹಿತಿ ಸಂಗ್ರಹಿಸುತ್ತಿರುವುದರ ಹಿಂದಿನ ಉದ್ದೇಶನವನ್ನು ತಿಳಿಸಲಾಗಿಲ್ಲ. ಈ ರೀತಿ ಮಾಹಿತಿ ಸಂಗ್ರಹಿಸಲು ಯಾವುದೇ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರದ ಆಕ್ಷೇಪಾರ್ಹವಾದ ಆದೇಶವು ಕ್ರಿಶ್ಚಿಯನ್‌ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಈ ಮೂಲಕ ಬೆದರಿಕೆ, ನಿಂದನೆ ಮತ್ತು ಮೂಲಭೂತವಾದಿಗಳು ಕಿರುಕುಳ ನೀಡಲು ತಮ್ಮನ್ನು ಗುರಿಯಾಗಿಸಬಹುದು ಎಂಬ ಅಳುಕು ಹೊಂದಿದೆ ಎಂದು ಹೇಳಲಾಗಿದೆ.

ಕರ್ನಾಟಕ ಅಲ್ಪಸಂಖ್ಯಾತರ ಆಯೋಗ ಕಾಯಿದೆ 1994ರ ಯಾವುದೇ ನಿಬಂಧನೆಯಲ್ಲಿರದ ಹೊರತು ರಾಜ್ಯ ಸರ್ಕಾರಕ್ಕೆ ಚರ್ಚ್‌ಗಳ ಮಾಹಿತಿ ಸಂಗ್ರಹ ಮತ್ತು ನಿರ್ವಹಣೆ ಮಾಡುವ ಅಧಿಕಾರವಿಲ್ಲ ಎಂದು ಹೇಳಲಾಗಿದೆ. ಆಕ್ಷೇಪಾರ್ಹವಾದ ಆದೇಶದ ಮೂಲಕ ಚರ್ಚ್‌ಗಳ ದತ್ತಾಂಶ ಸಂಗ್ರಹವು ಕಾನೂನುಬಾಹಿರ, ತಾರತಮ್ಯ, ಸ್ವೇಚ್ಛೆಯಿಂದ ಕೂಡಿದ್ದು, ಅಸಾಂವಿಧಾನಿಕವಾಗಿದೆ. ಸಂವಿಧಾನದ 14 ಮತ್ತು 21ನೇ ವಿಧಿಯಡಿ ದೊರೆತಿರುವ ಸಮಾನತೆ ಮತ್ತು ಖಾಸಗಿ ಹಕ್ಕನ್ನು ಉಲ್ಲಂಘಿಸುವುದರಿಂದ ಸರ್ಕಾರದ ಆದೇಶ ವಜಾಕ್ಕೆ ಅರ್ಹವಾಗಿದೆ ಎಂದು ವಿವರಿಸಲಾಗಿದೆ.

ಸರ್ಕಾರದ ಆದೇಶಕ್ಕೆ ಕಾನೂನಿನ ರಕ್ಷಣೆ, ಬೈಲಾ, ನಿಯಮ, ನಿಬಂಧನೆ ಅಥವಾ ಅಧಿಸೂಚನೆಯ ಆಧಾರವಿಲ್ಲದೇ ಇರುವುದರಿಂದ ಇದು ವಜಾಕ್ಕೆ ಅರ್ಹ. ಆಕ್ಷೇಪಾರ್ಹವಾದ ಆದೇಶವು ನಮ್ಮ ದೇಶದ ಜಾತ್ಯತೀತ ಬಂಧಕ್ಕೆ ವಿರುದ್ಧವಾಗಿದ್ದು, ಜಾತ್ಯತೀತವಾದದ ಮೂಲ ರಚನೆಗೆ ವಿರುದ್ಧವಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಸರ್ಕಾರವು ಜುಲೈ 7 ಮತ್ತು 9ರಂದು ಹೊರಡಿಸಿರುವ ಆದೇಶವು ಸಂವಿಧಾನ ಬಾಹಿರ ಎಂದು ಘೋಷಿಸಬೇಕು. ಅಲ್ಲದೇ, ಅಲ್ಪಸಂಖ್ಯಾತರ ಹಿತಾಸಕ್ತಿ ಕಾಯಲು ನ್ಯಾಯಯುತವಾದ ವಿಧಾನ ಜಾರಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಲಾಗಿದೆ.

ಆಕ್ಷೇಪಾರ್ಹವಾದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು ಹಾಗೂ ಪ್ರತಿವಾದಿಗಳು ಯಾವುದೇ ತೆರನಾದ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಆದೇಶ ಮಾಡಬೇಕು. ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯಿದೆ 2019ರ ಅಡಿ ಪುಟ್ಟಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯ ಪ್ರಕಾರ ಈಗಾಗಲೇ ಸಂಗ್ರಹಿಸಿರುವ ದತ್ತಾಂಶವನ್ನು ಸಂರಕ್ಷಿಸಿಡಲು ಸರ್ಕಾರಕ್ಕೆ ಆದೇಶ ಮಾಡಬೇಕು ಎಂದು ಕೋರಲಾಗಿದೆ.