ಆನ್‌ಲೈನ್ ಜೂಜಾಟ ನಿಷೇಧಿಸುವ ಪೊಲೀಸ್ ಕಾಯಿದೆಯ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಅರ್ಜಿದಾರರ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿರುವ ಸಂಸ್ಥೆಗಳು.
Karnataka HC and Online games
Karnataka HC and Online games
Published on

ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜಾಟ ನಿಷೇಧಿಸಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಆಯುಕ್ತರಿಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ.

ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಕರ್ನಾಟಕ ಪೊಲಿಸ್ (ತಿದ್ದುಪಡಿ) ಕಾಯಿದೆ-2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಸಲ್ಲಿಸಿರುವ ಮನವಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಆಕ್ಷೇಪಣೆ ಸಲ್ಲಿಸುವಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಆಯುಕ್ತರಿಗೆ ಆದೇಶಿಸಿರುವ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರ ಕಂಪನಿಗಳ ಪರ ವಕೀಲರು “ಆನ್‌ಲೈನ್ ಗೇಮಿಂಗ್ ಮತ್ತು ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಸರ್ಕಾರದ ಏಕಪಕ್ಷೀಯ ನಿರ್ಧಾರದಿಂದ ಅರ್ಜಿದಾರರ ಸಂಸ್ಥೆಗಳಿಗೆ ಬಹಳ ನಷ್ಟವಾಗುತ್ತಿದ್ದು, ಅನಗತ್ಯವಾಗಿ ದೂರುಗಳನ್ನು ಎದುರಿಸುವಂತಾಗಿದೆ. ತನಿಖೆಯ ನೆಪದಲ್ಲಿ ಪೊಲೀಸರಿಂದ ತೊಂದರೆಯಾಗಬಾರದು. ಆದ್ದರಿಂದ, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಬೇಕು” ಎಂದು ಕೋರಿದರು.

ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಅರ್ಜಿಗಳಲ್ಲಿ ಸಾಂವಿಧಾನಿಕ ಅಂಶಗಳಿರುವುದರಿಂದ ವಿವರವಾದ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಅದನ್ನು ಪರಿಗಣಿಸಿದ ಪೀಠ ವಿಚಾರಣೆ ಮುಂದೂಡಿತು.

Also Read
ಆನ್‌ಲೈನ್‌ ಜೂಜಾಟದ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಆನ್‌ಲೈನ್ ಬೆಟ್ಟಿಂಗ್ ನಿರ್ಬಂಧಿಸಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿದ್ದು, ಆ ಅರ್ಜಿಗಳನ್ನೂ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಪೀಠವನ್ನು ಕೋರಿದರು. ಇದನ್ನು ಪರಿಗಣಿಸುವುದಾಗಿ ಪೀಠ ಹೇಳಿದೆ.

ಆನ್‌ಲೈನ್ ಗ್ಯಾಂಬ್ಲಿಂಗ್ ನಿಷೇಧಿಸುವ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ ಅಕ್ಟೋಬರ್ 5ರಿಂದ ಜಾರಿಗೆ ಬಂದಿದ್ದು, ಅದರ ಪ್ರಕಾರ ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜಾಟ ನಿಷೇಧಿಸಲಾಗಿದೆ. ನಿಯಮ ಉಲ್ಲಂಸಿದವರಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

Kannada Bar & Bench
kannada.barandbench.com