ಸುದ್ದಿಗಳು

ವಾಟ್ಸಪ್ ಪ್ರಕರಣ ವಿಚಾರಣೆಗೆ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಪ್ರತಿಭಾ ಸಿಂಗ್ ನಕಾರ

ವಾಟ್ಸಪ್ ಕಂಪೆನಿಯ ನ್ಯಾಯಾಲಯಕ್ಕೆ ಇಮೇಲ್ ಮಾಡಿದ ಕಾರಣಕ್ಕಾಗಿ ತಾವು ಪ್ರಕರಣವನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ವಿಚಾರಣೆಗೆ ಮುನ್ನ ನ್ಯಾ. ಪ್ರತಿಭಾ ಸಿಂಗ್ ತಿಳಿಸಿದರು.

Bar & Bench

ವಾಟ್ಸಪ್‌ನ ನವೀಕೃತ ಗೌಪ್ಯತಾ ನೀತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿ ಪ್ರತಿಭಾ ಸಿಂಗ್‌ ಬುಧವಾರ ನಿರಾಕರಿಸಿದ್ದಾರೆ. ಸಂಕ್ಷಿಪ್ತ ವಿಚಾರಣೆ ವೇಳೆ ನ್ಯಾಯಮೂರ್ತಿ ಸಿಂಗ್ ಅವರು ನ್ಯಾಯಾಲಯಕ್ಕೆ ವಾಟ್ಸಾಪ್‌ ಕಂಪೆನಿಯಿಂದ ಇಮೇಲ್‌ ಬಂದಿರುವ ಕಾರಣ ತಾವು ಪ್ರಕರಣವನ್ನು ಆಲಿಸುವುದಿಲ್ಲ ಎಂದು ತಿಳಿಸಿದರು.

ನ್ಯಾಯಮೂರ್ತಿ ಸಿಂಗ್‌ ಅವರು ವಕೀಲರಾಗಿದ್ದಾಗ ಸಂಬಂಧಿತ ಪ್ರಕರಣದಲ್ಲಿ ವಾದ ಮಂಡಿಸಿದ್ದರು ಎಂದು ಇಮೇಲ್‌ ಮೂಲಕ ಗಮನ ಸೆಳೆಯಲಾಗಿತ್ತು. ವಾಟ್ಸಪ್‌ ನಂತರ ಬೇಷರತ್ತಾಗಿ ಇಮೇಲ್‌ ಹಿಂಪಡೆದರೂ ನ್ಯಾ. ಸಿಂಗ್‌ ಅವರು ಪ್ರಕರಣ ಆಲಿಸದೆ ಇರಲು ನಿರ್ಧರಿಸಿದರು.

"ನಾನು ಈ ಪ್ರಕರಣವನ್ನು ಆಲಿಸಲು ಹೋಗುವುದಿಲ್ಲ, ಯಾವುದೇ ಸಂದರ್ಭದಲ್ಲಿಯೂ ಅದನ್ನು ಆಲಿಸಲು ನಾನು ಹೋಗುತ್ತಿರಲಿಲ್ಲ" ಎಂದು ನ್ಯಾ. ಸಿಂಗ್ ಹೇಳಿದರು, ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ವಿಚಾರಣೆ ನಿರಾಕರಿಸದಂತೆ ಮನವಿ ಮಾಡಿದರು. “ಪ್ರಕರಣ ಆಲಿಸಲು ಮತ್ತೊಬ್ಬ ಉತ್ತಮ ವ್ಯಕ್ತಿ ಇರಲು ಸಾಧ್ಯವಿಲ್ಲ. ಇದು ಕಾನೂನಿನ ಬಹು ಮುಖ್ಯ ಪ್ರಶ್ನೆ ಎಂದು ಶರ್ಮಾ ವಿನಂತಿಸಿದರು.

"ಇಲ್ಲ, ಇಲ್ಲ. ನಾನು ಇದನ್ನು (ಇನ್ನೊಂದು ಏಕಸದಸ್ಯ ಪೀಠಕ್ಕೆ) ವರ್ಗಾಯಿಸುತ್ತಿದ್ದೇನೆ" ಎಂದು ನ್ಯಾಯಮೂರ್ತಿ ಸಿಂಗ್ ಹೇಳಿದರು. ಇದೇ ವೇಳೆ ವಾಟ್ಸಪ್‌ ಪರ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ “ನಾನು ವಾಟ್ಸಪ್‌ ಪರವಾಗಿ ಹಾಜರಿದ್ದೇನೆ. ಪ್ರಕರಣವನ್ನು ಏಕಸದಸ್ಯ ಪೀಠಕ್ಕೆ ವರ್ಗಾಯಿಸೋಣ” ಎಂದರು. ಮುಖ್ಯ ನ್ಯಾಯಮೂರ್ತಿಗಳ ಆದೇಶಕ್ಕೆ ಒಳಪಟ್ಟು ಪ್ರಕರಣವನ್ನು ಮತ್ತೊಂದು ಏಕಸದಸ್ಯ ಪೀಠದ ಎದುರು ಇಡಬೇಕೆಂದು ನ್ಯಾಯಮೂರ್ತಿ ಸಿಂಗ್ ಆದೇಶಿಸಿದರು.

ಸಂವಿಧಾನದ ಮೂರನೇ ಭಾಗದಲ್ಲಿ ಖಾತ್ರಿಪಡಿಸಿರುವ ಗೌಪ್ಯತೆ ಹಕ್ಕನ್ನು ವಾಟ್ಸಪ್‌ನ ನೂತನ ಗೌಪ್ಯತಾ ನನೀತಿ ಸಂಪೂರ್ಣ ಉಲ್ಲಂಘಿಸುತ್ತದೆ ಹೊಸ ನೀತಿಯಿಂದಾಗಿ ಸರ್ಕಾರದ ಮೇಲ್ವಿಚಾರಣೆ ಇಲ್ಲದೆ ವ್ಯಕ್ತಿಯ ಆನ್‌ಲೈನ್‌ ಚಟುವಟಿಕೆಯ ಸಂಪೂರ್ಣ ಮಾಹಿತಿ ಬಹಿರಂಗವಾಗುತ್ತದೆ. ಫೇಸ್‌ಬುಕ್‌ ಒಡೆತನದ ಇತರೆ ಅಪ್ಲಿಕೇಷನ್‌ಗಳು ಮತ್ತು ಮೂರನೇ ಪಾರ್ಟಿ ಅಪ್ಲಿಕೇಷನ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಳಸಲು ಇದು ಅನುವು ಮಾಡಿಕೊಡುತ್ತದೆ ಎಂದು ವಕೀಲ ಚೈತನ್ಯ ರೋಹಿಲ್ಲಾ ಅವರು ತಮ್ಮ ಅರ್ಜಿಯಲ್ಲಿ ವಿವರಿಸಿದ್ದರು.