ಅತ್ಯಾಚಾರದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೋಡುವ ಮತ್ತು ವ್ಯವಹರಿಸುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ಅರ್ಜಿ ಸಲ್ಲಿಸಲಾಗಿದ್ದು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರದ ಸೈಬರ್ ಕ್ರೈಮ್ ವಿಭಾಗಕ್ಕೆ ಈ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಇಬ್ಬರು ಕಾನೂನು ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಭವಿಷ್ಯದಲ್ಲಿ ಇಂತಹ ವಿಚಾರಗಳನ್ನು ಎದುರಿಸಲು ಸಮರ್ಥ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ತರಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದ್ದು ಮಧ್ಯವರ್ತಿ ವೇದಿಕೆಗಳನ್ನು ನಿಭಾಯಿಸಲು ಸೂಕ್ತ ಕಾನೂನುಗಳನ್ನು ರೂಪಿಸಬೇಕು ಎಂದು ಕೋರಲಾಗಿದೆ. ನಕಲಿ ಮತ್ತು ಮುಖಹೀನ ಖಾತೆಗಳನ್ನು ಕಿತ್ತು ಹಾಕಲು ಸಾಧ್ಯವಾಗುವಂತೆ ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಪರಿಶೀಲಿಸುವ ಸಂಬಂಧ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕಾನೂನು ಮುಖೇನ ಖಾತ್ರಿಪಡಿಸಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ .
ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅನೈತಿಕ ವಿಚಾರ, ಸೇಡಿಗಾಗಿ ಅಶ್ಲೀಲತೆ, ಬಲಾತ್ಕಾರದಂತಹ ವೀಡಿಯೊಗಳನ್ನು ನೋಡುವ ಮತ್ತು ಹಂಚಿಕೊಳ್ಳುವ ಆನ್‌ಲೈನ್ ಪ್ರೊಫೈಲ್‌ಗಳು ಮತ್ತು ಖಾತೆಗಳು ನಾಯಿಕೊಡೆಗಳಂತೆ ತಲೆಎತ್ತಿರುವ ಬಗ್ಗೆಯೂ ಅರ್ಜಿ ಕಳವಳ ವ್ಯಕ್ತಡಿಸಿದೆ. ಈ ಖಾತೆಗಳಲ್ಲಿನ ಪೋಸ್ಟ್‌ಗಳು ಬೇರೆಬೇರೆ ಖಾತೆಗಳ ಮೂಲಕ ಹಂಚಿಕೆಯಾಗಿ ಹೆಚ್ಚಿನ ವೀಕ್ಷಣಾ ಸೆಳೆತವನ್ನು ಪಡೆಯುತ್ತವೆ. ಹಾಗಾಗಿ, ಇವುಗಳನ್ನು ನಿಗ್ರಹಿಸುವುದು ಮುಖ್ಯವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
"ಈ ಖಾತೆಗಳು ಟ್ರೋಲ್ ಮತ್ತು ಮೀಮ್ ಪುಟಗಳಲ್ಲಿ ಮನ್ನಣೆ ಪಡೆಯುತ್ತಿದ್ದು ಅವುಗಳನ್ನು ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ಆ ಖಾತೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಮನಬಂದಷ್ಟು ಜನರಿಗೆ 'ಫಾಲೋ ವಿನಂತಿ’ಗಳನ್ನು' ಕಳುಹಿಸಲ್ಪಡುತ್ತವೆ. ಪ್ರಖ್ಯಾತ ವ್ಯಕ್ತಿಗಳ ಪೋಸ್ಟ್ ಗಳಿಗೂ ಕಾಮೆಂಟ್ ಹಾಕಿ ತಮ್ಮ ಕಾನೂನುಬಾಹಿರ ಸೇವೆಗಳಿಗೆ ಚಂದಾರರಾಗುವಂತೆ ಜನರನ್ನು ಆಹ್ವಾನಿಸುತ್ತಿವೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಜೊತೆಗೆ, ಅಪ್ರಾಪ್ತ ವಯಸ್ಕರ ಇಂಟರ್ನೆಟ್ ಬಳಕೆಯನ್ನು ನಿಯಂತ್ರಿಸಲು ಸೂಕ್ತ ಚೌಕಟ್ಟು ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.