ಉದ್ಯಮಿ ವೇಣುಗೋಪಾಲ್ ಧೂತ್ ಅವರ ಮಾಲೀಕತ್ವದ ವಿಡಿಯೋಕಾನ್ ಸಮೂಹಕ್ಕೆ ಅಕ್ರಮವಾಗಿ ಸಾಲ ನೀಡಿದ ಪ್ರಕರಣದಲ್ಲಿ ತಮ್ಮನ್ನು ಬಂಧಿಸಿರುವ ಸಿಬಿಐ ನಡೆ ಪ್ರಶ್ನಿಸಿ ಐಸಿಐಸಿಐ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ಅವರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಆದರೆ ತುರ್ತು ವಿಚಾರಣೆ ನಿರಾಕರಿಸಿದ ನ್ಯಾಯಮೂರ್ತಿಗಳಾದ ಮಾಧವ್ ಜಾಮ್‌ದಾರ್ ಮತ್ತು ಎಸ್ ಜಿ ಚಾಪಲ್‌ಗಾಂವ್‌ಕರ್ ಅವರನ್ನೊಳಗೊಂಡ ರಜಾಕಾಲೀನ ಪೀಠ ಅರ್ಜಿಯ ತುರ್ತು ವಿಚಾರಣೆ ನಿರಾಕರಿಸಿತು.
ಇತ್ತ ಕೊಚ್ಚಾರರ ದಂಪತಿ ಪರ ವಾದ ಮಂಡಿಸಿದ ವಕೀಲ ಕುಶಾಲ್ ಮೋರ್ ಎರಡು ನೆಲೆಯಲ್ಲಿ ದಂಪತಿ ಬಂಧನ ಅಕ್ರಮದಿಂದ ಕೂಡಿದೆ ಎಂದರು. ಮೊದಲನೆಯದಾಗಿ ಸಾರ್ವಜನಿಕ ನೌಕರರನ್ನು ಬಂಧಿಸಬೇಕಾದರೆ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 17 ಎ ಅಡಿಯಲ್ಲಿ ಸಿಬಿಐ ಸೂಕ್ತ ಅನುಮತಿ ಪಡೆದಿಲ್ಲ. ಎರಡನೆಯದಾಗಿ, ಎಫ್‌ಐಆರ್ ದಾಖಲಾದ 4 ವರ್ಷಗಳ ನಂತರ ಬಂದಿಸಲಾಗಿದ್ದು ಇದು ಸಿಆರ್‌ಪಿಸಿ ಸೆಕ್ಷನ್ 41 ಎ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಬಂಧನ ಆದೇಶ ರದ್ದುಪಡಿಸಲು ಮತ್ತು ಅರ್ಜಿಯನ್ನು ಅಂತಿಮವಾಗಿ ವಿಚಾರಣೆ ಮಾಡುವವರೆಗೆ ಕೊಚ್ಚಾರ್ ದಂಪತಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಅವರು ಕೋರಿದರು.
ಆದರೆ ಆದೇಶವನ್ನು ತುರ್ತಾಗಿ ನೀಡುವಂತಹ ಒತ್ತಡದ ಸ್ಥಿತಿ ಪ್ರಕರಣದಲ್ಲಿ ನಿರ್ಮಾಣವಾಗಿಲ್ಲ ಎಂದ ರಜಾಕಾಲೀನ ಪೀಠ ಮನವಿಯನ್ನು ತುರ್ತಾಗಿ ಆಲಿಸಲು ನಿರಾಕರಿಸಿತು. ಜಾಮೀನಿಗಾಗಿ ಸಾಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಅದು ಸೂಚಿಸಿತು. ದಂಪತಿಯ ಸಿಬಿಐ ಕಸ್ಟಡಿ ಅವಧಿ ನಾಳೆ ಮುಕ್ತಾಯವಾಗಲಿದೆ.
ವಿಡಿಯೊಕಾನ್ ಸಮೂಹಕ್ಕೆ 2012ರಲ್ಲಿ ₹3,250 ಕೋಟಿ ಸಾಲ ನೀಡುವಾಗ ವಂಚನೆ ಮತ್ತು ಅಕ್ರಮ ಎಸಗಿದ ಆರೋಪ ಚಂದಾ ಕೊಚ್ಚಾರ್ ಅವರ ಮೇಲಿದ್ದು, ಇದು ಐಸಿಐಸಿಐ ಬ್ಯಾಂಕ್‌ಗೆ ವಸೂಲಾಗದ ಸಾಲವಾಗಿ ಪರಿಣಮಿಸಿತ್ತು. ಇಬ್ಬರೂ ಆರೋಪಿಗಳನ್ನು ಡಿ. 25ರಂದು ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಮೂರು ದಿನಗಳ ಕಾಲ ಸಿಬಿಐಕ್ಕೆ ಒಪ್ಪಿಸಿತ್ತು.