Vidhana Soudha 
ಸುದ್ದಿಗಳು

ಹಿಜಾಬ್‌, ಮುಸ್ಲಿಮ್‌ ಮೀಸಲಾತಿ ರದ್ದು, ಗೋಹತ್ಯೆ, ಮತಾಂತರ ನಿಷೇಧ, ಪಿಎಸ್‌ಐ, ಜಾರಕಿಹೊಳಿ ಪ್ರಕರಣಗಳ ಸ್ಥಿತಿ ಮುಂದೇನು?

ಕಾಂಗ್ರೆಸ್‌ ಪಕ್ಷವು ಭಾರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿದಿದ್ದು, ಈ ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಹಲವು ವಿವಾದಾತ್ಮಕ ನೀತಿ, ನಿರ್ಧಾರಗಳನ್ನು ಪರಾಮರ್ಶೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.

Siddesh M S

ಬಿಜೆಪಿ ನೇತೃತ್ವದ ಈ ಹಿಂದಿನ ಕರ್ನಾಟಕ ಸರ್ಕಾರವು ತೆಗೆದುಕೊಂಡಿರುವ ಹಲವು ವಿವಾದಾತ್ಮಕ ನೀತಿ-ನಿರ್ಧಾರಗಳು ಸುಪ್ರೀಂ ಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಲ್ಪಟ್ಟಿವೆ. ಈ ವಿಚಾರಗಳ ವಿರುದ್ಧ ಸಾರ್ವಜನಿಕ ಹಾಗೂ ಕಾನೂನಾತ್ಮಕ ಹೋರಾಟಗಳಿಗೆ ಕಾಂಗ್ರೆಸ್‌ ನೇರ ಅಥವಾ ಪರೋಕ್ಷ ಬೆಂಬಲವನ್ನು ನೀಡಿತ್ತು.

ಇದೀಗ ಕಾಂಗ್ರೆಸ್‌ ಪಕ್ಷವು ಭಾರಿ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯುವುದರೊಂದಿಗೆ, ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಸೈದ್ಧಾಂತಿಕವಾಗಿ ವಿರುದ್ಧವಾದ ಹಲವು ನೀತಿ, ನಿರ್ಧಾರಗಳನ್ನು ಸರ್ಕಾರವು ಪರಾಮರ್ಶೆಗೆ ಒಳಪಡಿಸುವ ಸಾಧ್ಯತೆ ದಟ್ಟವಾಗಿದೆ.

ಇಂಥ ಪ್ರಕರಣಗಳ ಪಟ್ಟಿಯಲ್ಲಿ ರಾಜ್ಯ ಶಿಕ್ಷಣ ಇಲಾಖೆಯು ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಬಾಜ್‌ ಧರಿಸಿರುವುದಕ್ಕೆ ನಿಷೇಧ ಹೇರಿರುವುದು ಪ್ರಮುಖವಾಗಿದೆ. ದೇಶದ ಗಮನಸೆಳೆದಿದ್ದ ಹಿಜಾಬ್‌ ನಿಷೇಧಿಸಿ ರಾಜ್ಯ ಸರ್ಕಾರ ಮಾಡಿರುವ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿ ವಿಭಾಗೀಯ ಪೀಠವು ಭಿನ್ನ ನಿಲುವು ತಳೆದಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠದ ಮುಂದಿಡಲು ಕೋರಲಾಗಿದೆ. ಇದು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕರ್ನಾಟಕ ಸರ್ಕಾರವು ಈಗ ಯಾವ ನಿಲುವು ಕೈಗೊಳ್ಳಲಿದೆ ಎಂಬುದು ಮಹತ್ವ ಪಡೆದಿದೆ.

ಹಿಂದುಳಿದ ವರ್ಗದಡಿ ಮುಸ್ಲಿಮರಿಗೆ ಕಲ್ಪಿಸಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ಹಿಂಪಡೆದಿರುವುದನ್ನು ಪ್ರಶ್ನಿಸಿರುವ ಅರ್ಜಿಯೂ ಸುಪ್ರೀಂ ಕೋರ್ಟ್‌ನಲ್ಲಿ ಇದೆ. ಇಲ್ಲಿಯೂ ಕಾಂಗ್ರೆಸ್‌ ನೇತೃತ್ವದ ಕರ್ನಾಟಕ ಸರ್ಕಾರದ ನಿಲುವು ಮಹತ್ವ ಪಡೆಯಲಿದೆ.

ಮಹಾರಾಷ್ಟ್ರ ಗಡಿ ವಿವಾದ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಹಿಂದೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿಯದ್ದೇ ಸರ್ಕಾರಗಳಿದ್ದರಿಂದ ಕರ್ನಾಟಕ ಸರ್ಕಾರವು ಬಲವಾದ ಹೆಜ್ಜೆ ಇಡಲು ಮೀನಮೇಷ ಎಣಿಸಬೇಕಾದ ಸ್ಥಿತಿ ಇತ್ತು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರ ಬಂದಿರುವುರಿಂದ ಪ್ರಕರಣ ತಾರಕಕ್ಕೇರುವ ಸಾಧ್ಯತೆ ಇದೆ.

ಇನ್ನು, ಕರ್ನಾಟಕ ಹೈಕೋರ್ಟ್‌ನಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣ, ಕೆಎಂಎಫ್‌ನಲ್ಲಿನ ನೇಮಕಾತಿ ಹಗರಣ, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆಗೆ ತಿದ್ದುಪಡಿ ತಂದಿರುವುದರ ಸಾಂವಿಧಾನಿಕ ಸಿಂಧುತ್ವ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಸುಗ್ರೀವಾಜ್ಞೆ-2022, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆ-2020, ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಸಿ ಡಿ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯ ಸಿಂಧುತ್ವ, ಜಾತಿಯಾಧಾರಿತವಾಗಿ ಸೃಷ್ಟಿಸಲಾಗಿರುವ ನಿಗಮ ಮತ್ತು ಮಂಡಳಿಗಳ ಸಾಂವಿಧಾನಿಕ ಸಿಂಧುತ್ವ ಸೇರಿದಂತೆ ಇನ್ನೂ ಹಲವು ಪ್ರಕರಣಗಳು ಹೈಕೋರ್ಟ್‌ ಪರಿಗಣನೆಗೆ ಒಳಪಟ್ಟಿವೆ.

ಈ ಎಲ್ಲವೂ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ತೀರ್ಮಾನಗಳಾಗಿದ್ದು, ಇವುಗಳಿಗೆ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಗೋಹತ್ಯೆ, ಮತಾಂತರ ನಿಷೇಧ ಇನ್ನಿತರ ವಿಚಾರಗಳನ್ನು ಅಧಿಕಾರಕ್ಕೆ ಬಂದಾಗ ಮರು ಪರಿಶೀಲನೆ ಮಾಡಲಾಗುವುದು ಎಂದು ಕಾಂಗ್ರೆಸ್‌ ಹೇಳಿದ್ದೂ ಉಂಟು.

ಇನ್ನು, ಕನ್ನಡ ಅಸ್ಮಿತೆ ವಿಚಾರವನ್ನು ಪ್ರಬಲವಾಗಿ ಚುನಾವಣೆಯಲ್ಲಿ ಪ್ರಸ್ತಾಪಿಸಿರುವ ಕಾಂಗ್ರೆಸ್‌, ಪದವಿ ಹಂತದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿರುವುದನ್ನು ಯಾವ ರೀತಿಯಲ್ಲಿ ಮುನ್ನಡೆಸಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೇಲಿನ ಬಹುತೇಕ ಪ್ರಕರಣಗಳಲ್ಲಿ ಶಾಸನಾತ್ಮಕ ಹಾದಿ ಹಿಡಿಯುವ ಆಯ್ಕೆ ನೂತನ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮುಂದಿರಲಿದೆ. ತನಗಿರುವ ಬಹುಮತವನ್ನು ಬಳಸಿ ಆಕ್ಷೇಪಾರ್ಹ ಆದೇಶ, ಕಾಯಿದೆಗಳನ್ನು ಮರುಪರಿಶೀಲಿಸುವ, ಬದಿಗೆ ಸರಿಸುವ ಆಯ್ಕೆಯುನ್ನು ಬಳಸುವ ಸಾಧ್ಯತೆ ದಟ್ಟವಾಗಿದೆ.